ADVERTISEMENT

ಗೃಹಸಚಿವರಿಂದ ಭದ್ರತೆ ಪರಿಶೀಲನೆ

ಐತಿಹಾಸಿಕ ಚನ್ನಕೇಶವ ದೇವಾಲಯಕ್ಕೆಭೇಟಿ; ಅಧಿಕಾರಿಗಳ ಜತೆಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 17 ಮೇ 2016, 10:10 IST
Last Updated 17 ಮೇ 2016, 10:10 IST

ಬೇಲೂರು: ಇಲ್ಲಿನ ಐತಿಹಾಸಿಕ ಚನ್ನಕೇಶವ ದೇವಾಲಯ ಸೇರಿದಂತೆ ರಾಜ್ಯದ ಎಲ್ಲ ಪಾರಂಪರಿಕ ತಾಣ ಮತ್ತು ಐತಿಹಾಸಿಕ ದೇವಾಲಯಗಳ ಭದ್ರತೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಕುರಿತು ಒಂದುವಾರದಲ್ಲಿ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿದರು.

ಬೇಲೂರಿನ ಚನ್ನಕೇಶವ ದೇಗುಲಕ್ಕೆ ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ದಾಳಿ ನಡೆಸಲಿದೆ ಎಂಬ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ಸೋಮವಾರ ದೇವಾಲಯಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿ, ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆಗೆ ಸಭೆ ನಡೆಸಿದರು.

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಉಗ್ರಗಾಮಿ ಸಂಘಟನೆಗಳ ಬೆದರಿಕೆ ಸಾಮಾನ್ಯ. ರಾಜ್ಯ ಸರ್ಕಾರ  ಭದ್ರತೆ ನೀಡುವ ವಿಚಾರದಲ್ಲಿ ಯಾವುದೇ ಲೋಪ ಎಸಗಿಲ್ಲ. ಇನ್ನೂ ಹೆಚ್ಚಿನ ಭದ್ರತೆ ಒದಗಿಸಲು ಪೊಲೀಸ್‌ ಇಲಾಖೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಮುಜರಾಯಿ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಜತೆಗೆ ಒಂದು ವಾರದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ’ ಎಂದರು.

ಪುರಾತತ್ವ ಇಲಾಖೆಗೆ ಸೇರಿದ ಪಾರಂಪರಿಕ ಕಟ್ಟಡಗಳ ಭದ್ರತೆ ಹೊಣೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸೇರಿದೆ.   ದೇಗುಲಗಳ ರಕ್ಷಣೆಗೆ ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇದ್ದು, ಪುರಾತತ್ವ ಇಲಾಖೆ ಮನವಿ ಸಲ್ಲಿಸಿದರೆ ಸಿಬ್ಬಂದಿ ಒದಗಿಸಲು ಇಲಾಖೆ ಸಿದ್ದವಿದೆ ಎಂದರು.

ಬೇಲೂರು ದೇವಾಲಯದ ಮುಂಭಾಗ ಪುರಾತತ್ವ ಇಲಾಖೆ ಕೇವಲ ಬ್ಯಾರಿಕೇಡ್‌ ಹಾಕಿ ವಾಹನ ನಿಲುಗಡೆ ನಿಷೇಧಿಸಿದೆ. ಇದರ ಜತೆಗೆ ಆಯಕಟ್ಟಿನ ಸ್ಥಳಗಳಲ್ಲ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಸಲಹೆ ಮಾಡಿದರು.

ಶಾಸಕರಾದ ವೈ.ಎನ್‌. ರುದ್ರೇಶ್‌ಗೌಡ, ಎಂ.ಎ. ಗೋಪಾಲ ಸ್ವಾಮಿ, ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥೆ ನೀಲಮಣಿ ರಾಜ್‌, ಉಪ ಮುಖ್ಯಸ್ಥ ಸುನೀಲ್‌ಕುಮಾರ್‌, ಎಸ್‌ಪಿ ರಾಹುಲ್‌ ಕುಮಾರ್‌, ಡಿವೈಎಸ್‌ಪಿ ದಶರಥಕುಮಾರ್‌, ಸಿಪಿಐ ಆರ್‌. ವೆಂಕಟೇಶ್‌, ಜಿ.ಪಂ. ಸದಸ್ಯರಾದ ಎಚ್‌.ಎಂ. ಮಂಜಪ್ಪ, ಸೈಯ್ಯದ್‌ ತೌಫಿಕ್‌ ಇದ್ದರು.

ನೀಲಮಣಿ ರಾಜ್‌ ಪರಿಶೀಲನೆ:  ಇದಕ್ಕೂ ಮುನ್ನ ಭದ್ರತಾ ವಿಭಾಗದ ಮುಖ್ಯಸ್ಥರಾದ ನೀಲಮಣಿ ರಾಜ್‌ ಸೋಮವಾರ ದೇಗುಲಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.

ಚನ್ನಕೇಶವ ದೇವಾಲಯಕ್ಕೆ ಉಗ್ರಗಾಮಿ ಸಂಘಟನೆ ದಾಳಿ ನಡೆಸುವ ಅಪಾಯ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿತ್ತು.
ದೇವಾಲಯದ ಮುಂಭಾಗ ಅಳವಡಿಸಿರುವ ಲೋಹ ಶೋಧಕ ಯಂತ್ರ ಸೇರಿ ಇತರೆ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ದೇವಾಲಯದ ಹಿಂಭಾಗದ ಪ್ರವಾಸೋದ್ಯಮ ಇಲಾಖೆ ಜಾಗಕ್ಕೂ ಭೇಟಿ ನೀಡಿದ್ದರು. ಪತ್ರಕರ್ತರ ಜತೆಗೆ ಮಾತನಾಡಲು ನಿರಾಕರಿಸಿದರು.

ಪುರಸಭೆ ಅಧ್ಯಕ್ಷ ಟಿ.ಎ. ಶ್ರೀನಿಧಿ ದೇಗುಲ ಕುರಿತು  ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥರಿಗೆ ಮಾಹಿತಿ ನೀಡಿದರು. ಆಂತರಿಕಾ ಭದ್ರತಾ ವಿಭಾಗದ ಉಪ ಮುಖ್ಯಸ್ಥ ಸುನೀಲ್ ಕುಮಾರ್‌, ಡಿವೈಎಸ್‌ಪಿ ದಶರಥಕುಮಾರ್‌, ಸಿಪಿಐ ಆರ್‌. ವೆಂಕಟೇಶ್‌, ದೇವಾಲಯ ಇಒ ವಿದ್ಯುಲ್ಲತಾ ಇದ್ದರು.

ಬೆದರಿಕೆ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ದೇಗುಲ ಬಳಿ ಈಗಾಗಲೇ ವಾಹನ ನಿಲುಗಡೆ ನಿಷೇಧಿಸಿತ್ತು. ಅಲ್ಲದೆ, ಈ ಹಿಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.