ADVERTISEMENT

ಜಿಲ್ಲೆಯಲ್ಲಿ 500 ಯೂನಿಟ್ ರಕ್ತದ ಕೊರತೆ

ರಕ್ತದಾನ ಕುರಿತ ತಪ್ಪು ತಿಳಿವಳಿಕೆ ದೂರವಾಗಲಿ: ನಂದಿನಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 8:55 IST
Last Updated 28 ಡಿಸೆಂಬರ್ 2017, 8:55 IST
ಜಿಲ್ಲೆಯಲ್ಲಿ 500 ಯೂನಿಟ್ ರಕ್ತದ ಕೊರತೆ
ಜಿಲ್ಲೆಯಲ್ಲಿ 500 ಯೂನಿಟ್ ರಕ್ತದ ಕೊರತೆ   

ಹಾಸನ: ರಕ್ತದಾನ ಮಾಡುವುದರಿಂದ ಆರೋಗ್ಯವಂತರಾಗುವುದರ ಜತೆಗೆ ಜೀವದಾನ ಆಗಬಹುದು ಎಂದು ಪೊಲೀಸ್ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ನಂದಿನಿ ಹೇಳಿದರು.

ನಗರ ಸಮೀಪದ ಗಾಡೆನಹಳ್ಳಿಯ ಪೊಲೀಸ್ ತರಬೇತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಮಾಹಿತಿ ಕಾರ್ಯಾಗಾರ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತವನ್ನು ಪಡೆದುಕೊಳ್ಳುವುದಕ್ಕಿಂತ ರಕ್ತದಾನ ಮಾಡುವವರಿಗೆ ಉತ್ತಮ ಆರೋಗ್ಯ ದೊರೆಯುತ್ತದೆ ಎಂಬುದು ಹಲವಾರು ಸಂಶೋಧನೆಗಳಲ್ಲಿ ಸಾಬೀತಾಗಿದೆ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮೂರು ಜನರ ಪ್ರಾಣ ಉಳಿಸುವ ಜೀವದಾನಿ ಆಗಬಹುದು ಎಂದು ತಿಳಿಸಿದರು.

ADVERTISEMENT

ಪ್ರಸ್ತುತ ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಸಾಕಷ್ಟು ಇದೆ. ಅಪಘಾತಗಳ ಸಂದರ್ಭಗಳಲ್ಲಿ ಗಾಯಾಳುವಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ರಕ್ತದಾನ ಮತ್ತು ರಕ್ತ ಲಭ್ಯತೆಯ ಬಗ್ಗೆ ಅರಿವಿದ್ದರೆ ತಕ್ಷಣದಲ್ಲೇ ರಕ್ತ ಒದಗಿಸಿಕೊಡಲು ಮತ್ತು ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದು ನುಡಿದರು.

ಜಿಲ್ಲಾ ಆರೋಗ್ಯ ಇಲಾಖೆ ಡ್ಯಾಪ್ಕ್ಯೂ ವಿಭಾಗದ ಜಿಲ್ಲಾ ಮೇಲ್ವಿಚಾರಕ ರವಿಕುಮಾರ್ ಮಾತನಾಡಿ, ರಾಜ್ಯದಲ್ಲೇ ಪೊಲೀಸ್ ಇಲಾಖೆಯ 210ಕ್ಕೂ ಹೆಚ್ಚು ಸಿಬ್ಬಂದಿ ರಕ್ತದಾನ ಮಾಡಿದ ಪ್ರಥಮ ಜಿಲ್ಲೆ ಹಾಸನವಾಗಿದೆ. ಆರೋಗ್ಯ ಇಲಾಖೆ ವತಿಯಿಂದ ಸಾಕಷ್ಟು ಮಾಹಿತಿ ನೀಡಿದರೂ ರಕ್ತದಾನದ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಗಳಿಂದಾಗಿ ರಕ್ತದ ಕೊರತೆ ಎದುರಿಸುವಂತಾಗಿದೆ ಎಂದು ತಿಳಿಸಿದರು.

ಜಿಲ್ಲೆಗೆ ಪ್ರತಿ ತಿಂಗಳು 1,500 ರಿಂದ 1,700 ಯೂನಿಟ್ ರಕ್ತದ ಅವಶ್ಯಕತೆ ಇದ್ದು, ಸಂಗ್ರಹವಾಗುತ್ತಿರುವುದು 1,000 ದಿಂದ 1,200. ಇನ್ನೂ 500 ರಿಂದ 600 ಯೂನಿಟ್ ರಕ್ತದ ಕೊರತೆ ಇದೆ. ಇದು ಸರಿದೂಗಿಸಬೇಕಾದರೆ ಪ್ರತಿಯೊಬ್ಬರಲ್ಲೂ ರಕ್ತದಾನ ಹವ್ಯಾಸವಾಗಬೇಕು. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡದೆ ಇರಬಾರದು ಎಂದು ಸಲಹೆ ನೀಡಿದರು.

ಹಾಸನ ರಕ್ತನಿಧಿಯ ವೈದ್ಯಾಧಿಕಾರಿ ಡಾ. ಪದ್ಮಪ್ರಸಾದ್ ಮಾತನಾಡಿ, ಹಲವಾರು ತುರ್ತು ಪರಿಸ್ಥಿತಿಯಲ್ಲಿ ರಕ್ತಕ್ಕೆ ಸಾಕಷ್ಟು ಬೇಡಿಕೆ ಇದೆ. ಬೇರೆಯೆಲ್ಲಾ ಔಷಧಿಗಳನ್ನು ವೈದ್ಯನಾಗಿ ತರಿಸಿಕೊಟ್ಟರು, ರಕ್ತಕ್ಕೆ ಪರ್ಯಾಯವಾದ ಔಷಧ ಕೊಡಲು ಸಾಧ್ಯವಿಲ್ಲ. ರಕ್ತವನ್ನು ಇನ್ನೊಬ್ಬರು ದಾನವಾಗಿ ಮಾತ್ರ ಪೂರೈಸಲು ಸಾಧ್ಯ. ಆದ್ದರಿಂದ ಇದರ ಬಗ್ಗೆ ಅಪನಂಬಿಕೆ ಬಿಟ್ಟು ರಕ್ತದಾನ ಮಾಡಿ ಎಂದು ನುಡಿದರು. ಹಾಸನ ರಕ್ತನಿಧಿ ವತಿಯಿಂದ ಉಚಿತವಾಗಿ ರಕ್ತದ ಗುಂಪು ಪರೀಕ್ಷೆ ಮಾಡಲಾಯಿತು. ಜಿಲ್ಲೆಯಲ್ಲೇ ಪ್ರಥಮವಾಗಿ 210 ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

ಹಾಸನ ರಕ್ತನಿಧಿಯ ಸಿಬ್ಬಂದಿ, ಪೊಲೀಸ್ ತರಬೇತಿ ಶಾಲೆಯ ಸಿಬ್ಬಂದಿ ಇದ್ದರು.

***

1500 ಯೂನಿಟ್ - ಪ್ರತಿ ತಿಂಗಳು ರಕ್ತದ ಅವಶ್ಯಕತೆ

1000 ಯೂನಿಟ್‌ - ಸಂಗ್ರಹವಾಗುತ್ತಿರುವ ರಕ್ತ

500 ಯೂನಿಟ್  - ಕೊರತೆ ಇರುವ ರಕ್ತ

120 ಮಂದಿ  - ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.