ADVERTISEMENT

ಪ್ರಜಾಪ್ರಭುತ್ವ ಸಬಲೀಕರಣ ಅಭಿಯಾನ

ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ, ಕರಪತ್ರ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 10:28 IST
Last Updated 17 ಮಾರ್ಚ್ 2018, 10:28 IST
ಹಾಸನ ನಗರದ ಮಹಾವೀರ ವೃತ್ತದಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಜಾಥಾಕ್ಕೆ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಕೆ.ಸಿ. ದೇವರಾಜೇಗೌಡ ಚಾಲನೆ ನೀಡಿದರು
ಹಾಸನ ನಗರದ ಮಹಾವೀರ ವೃತ್ತದಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಜಾಥಾಕ್ಕೆ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಕೆ.ಸಿ. ದೇವರಾಜೇಗೌಡ ಚಾಲನೆ ನೀಡಿದರು   

ಹಾಸನ: ವಿಧಾನಸಭಾ ಚುನಾವಣೆ ಪ್ರಯುಕ್ತ ಮತದಾರರಿಗೆ ಮತದಾನದ ಜಾಗೃತಿ ಮೂಡಿಸುವ ಕುರಿತು ಮೈಸೂರಿನ ದಿಶಾ ಫೌಂಡೇಷನ್ ಹಾಗೂ ಬೆಂಗಳೂರಿನ ಎ.ಡಿ.ಆರ್ ಸಂಸ್ಥೆ ಆಶ್ರಯದಲ್ಲಿ ‘ಪ್ರಜಾಪ್ರಭುತ್ವ ಸಬಲೀಕರಣ ಅಭಿಯಾನ’ ನಡೆಯಿತು.

ಪ್ರಜಾಪ್ರಭುತ್ವ, ಚುನಾವಣೆ ಮಹತ್ವ, ಭಾಗವಹಿಸುವಿಕೆ, ಚುನಾವಣೆ ಪ್ರಕ್ರಿಯೆ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಲಾಯಿತು.

ಸ್ವೀಪ್ ಸಮಿತಿ ತಾಲ್ಲೂಕು ಅಧ್ಯಕ್ಷ ಹಾಗೂ ಹಾಸನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸಿ.ದೇವರಾಜೇಗೌಡ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ, ಮತ ಚಲಾಯಿಸುವುದು ಪ್ರತಿಯೊಬ್ಬ ಮತದಾರನ ಹಕ್ಕು, ಸೂಕ್ತ ಅಭ್ಯರ್ಥಿಗೆ ಮತ ಹಾಕುವ ಮೂಲಕ ಪ್ರಜಾಪ್ರಭುತ್ವವನ್ನು ಬೆಂಬಲಿಸಬೇಕು. ಯಾವುದೇ ಕಾರಣಕ್ಕೂ ಮತ ಚಲಾಯಿಸದೇ ಹಿಂದೆ ಸರಿಯಬಾರದು ಎಂದು ಯುವಕರಿಗೆ ಸಲಹೆ ನೀಡಿದರು.

ADVERTISEMENT

ಮತದಾರರ ಚೀಟಿ ಇದ್ದರೆ ಸಾಲದು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ದಿಶಾ ಫೌಂಡೇಷನ್ ಸಂಸ್ಥೆಯ ಜಿಲ್ಲಾ ಸಂಚಾಲಕ, ಎಂ.ಎಸ್. ಯೋಗನಾಥ್ ಮಾತನಾಡಿ, ಸಂಸ್ಥೆ ವತಿಯಿಂದ ಏ. 18ರ ವರೆಗೆ ಮೈಸೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಒಟ್ಟು 20 ವಿಧಾನಸಭಾ ಕ್ಷೇತ್ರಗಳಲ್ಲಿ ಅರಿವು ಕಾರ್ಯಕ್ರಮ ಏರ್ಪಡಿಸಿದೆ ಎಂದರು.

ಮತ ಚಲಾವಣೆಯ ಪ್ರಮಾಣ ಹೆಚ್ಚಿಸುವುದು, ಸಾರ್ವಜನಿಕರಿಗೆ ಹಾಗೂ ಯುವ ಮತದಾರರಿಗೆ, ಸಮುದಾಯದ ಕರ್ತವ್ಯಗಳು ಮತ್ತು ಹಕ್ಕುಗಳ ಬಗ್ಗೆ ಪಾದಯಾತ್ರೆ, ಬೀದಿ ನಾಟಕ, ಡಿಜಿಟಲ್ ಶೋ, ಜಾಥಾ, ರೋಡ್ ಶೋ, ಮೊಬೈಲ್ ಪ್ರಚಾರ ವಾಹನ, ಮನೆ ಮನೆ ಭೇಟಿ, ಸಾಮೂಹಿಕ ಪ್ರತಿಜ್ಞೆ ಸ್ವೀಕಾರ, ಸೈಕಲ್ ರ್‍ಯಾಲಿ, ಸಹಿ ಸಂಗ್ರಹ ಅಭಿಯಾನ, ಮಾಧ್ಯಮ ಮಂಥನ ಕಾರ್ಯಕ್ರಮ ಮೂಲಕ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.

ನಗರದ ಮಹಾವೀರ ವೃತ್ತದಿಂದ ಹೊರಟ ಜಾಥಾ ಎ.ವಿ.ಕೆ ಕಾಲೇಜು ರಸ್ತೆ, ಆರ್.ಸಿ. ರಸ್ತೆ. ಮಿಷನ್ ಆಸ್ಪತ್ರೆ ವೃತ್ತದ ಮೂಲಕ ಸಂಪಿಗೆ ರಸ್ತೆ, ಬಿ.ಎಂ. ರಸ್ತೆ, ಎನ್.ಆರ್. ವೃತ್ತ, ನಗರ ಸಾರಿಗೆ ಬಸ್ ನಿಲ್ದಾಣ, ಕಲಾ ಭವನ ಮಾರ್ಗವಾಗಿ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕೊನೆಗೊಂಡಿತ್ತು. ಸಾರ್ವಜನಿಕರಿಗೆ ಕರಪತ್ರ ವಿತರಿಸಲಾಯಿತು.

ದಿಶಾ ಫೌಂಡೇಷನ್ ನ ಸ್ವಯಂ ಸೇವಕ ಡಾ. ಬಿ. ಸುಧೀರ್, ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಸುನಿತಾ, ಸಂಯೋಜಕ ಮಹದೇವಸ್ವಾಮಿ, ಜಿಲ್ಲಾ ಸಂಯೋಜಕ ಯೋಗನಾಥ್, ಸ್ವಯಂ ಸೇವಕರಾದ ರಾಮಕೃಷ್ಣ ಮುದ್ರೆ, ಪ್ರಾಧ್ಯಾಪಕ ಗೋವಿಂದ ಶರ್ಮ, ಸುಜಲಾ ಕಾಲೇಜು ಪ್ರಾಂಶುಪಾಲ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.