ADVERTISEMENT

ಬರಡು ಭೂಮಿಯಲ್ಲಿ ಬಂಗಾರದ ಬೆಳೆ

ಮಲ್ಲದೇವಿಹಳ್ಳಿಯ ಪ್ರಗತಿಪರ ಕೃಷಿಕನ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:15 IST
Last Updated 28 ಡಿಸೆಂಬರ್ 2016, 5:15 IST
ಜಾವಗಲ್‌ ಸಮೀಪದ ಮಲ್ಲದೇವಿಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಎಚ್‌.ಕೆ.ಮಂಜುನಾಥ್‌ ಅವರು ಬೆಳೆದಿರುವ ಸಪೋಟಾ
ಜಾವಗಲ್‌ ಸಮೀಪದ ಮಲ್ಲದೇವಿಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಎಚ್‌.ಕೆ.ಮಂಜುನಾಥ್‌ ಅವರು ಬೆಳೆದಿರುವ ಸಪೋಟಾ   

ಜಾವಗಲ್: ತೆಂಗು, ಅಡಿಕೆ, ಸಪೋಟಾ, ವಿವಿಧ ಜಾತಿಯ ಮಾವು, ಬಾಳೆ, ಜಾಯಿಕಾಯಿ, ಹುಣಸೆ, ಮೇವಿನ ಬೆಳೆ... ಸಮೀಪದ ಮಲ್ಲದೇವಿಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಎಚ್‌.ಕೆ. ಮಂಜುನಾಥ್‌ ಅವರ ತೋಟಕ್ಕೆ ಭೇಟಿ ನೀಡಿದರೆ ಇವನ್ನೆಲ್ಲಾ ನೋಡಬಹುದು. ವೈವಿಧ್ಯಮಯ ಕೃಷಿ ಚಟುವಟಿಕೆಯಲ್ಲಿ ಯಶಸ್ಸು ಸಾಧಿಸುವ ಮೂಲಕ ಅವರು ಇತರರಿಗೆ ಮಾದರಿಯಾಗಿದ್ದಾರೆ.

ಸರ್ಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸಿದ ಬಳಿಕ ‘ಹಂಗಿನ ಅರಮನೆಗಿಂತ ನೆಮ್ಮದಿಯ ಗುಡಿಸಲು ಲೇಸು’ ಎಂದು ಸ್ವತಂತ್ರ ಕೃಷಿ ಬದುಕಿನತ್ತ ಹೆಜ್ಜೆ ಹಾಕಿ ದರು. ಆರಂಭದಲ್ಲಿ ಸಹಜವಾಗಿ ಟೀಕೆಗೆ ಗುರಿಯಾದರು. ‘ನಾವು ಮಾಡದಿರು ವುದನ್ನು ಇವನು ಮಾಡುತ್ತಾನೆಯೇ? ಎಂದು ರೈತರು ಪ್ರಶ್ನಿಸಿದ್ದು ಉಂಟು. ಆದರೆ, ತಮ್ಮ ಸಾಧನೆಯ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು.

ಬರಗಾಲದ ಹಣೆಪಟ್ಟಿ ಹೊತ್ತಿರುವ ಜಾವಗಲ್‌ನ ಬರಡು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದು ಲಾಭ ಮಾಡುತ್ತಿದ್ದಾರೆ. ತೆಂಗು, ಅಡಿಕೆ, ಸಪೋಟಾ ಹಾಗೂ ವಿವಿಧ ಜಾತಿಯ ಮಾವು, ಬಾಳೆ, ಜಾಯಿಕಾಯಿ, ಹುಣಸೆ, ಮೇವಿನ ಬೆಳೆ, ಔಷಧದ ಗಿಡ–ಮರಗಳು ಹಸಿರಿನಿಂದ ನಳನಳಿಸುತ್ತಿದೆ.

ಕೃಷಿ ಉಪ ಕಸುಬುಗಳಾದ ಹೈನು ಗಾರಿಕೆ, ತೋಟದ ಬೆಳೆಗಳ ನರ್ಸರಿ, ಮರುಪೂರಣ, ಬದುಗಳ ನಿರ್ಮಾಣ ದಿಂದ ಮಳೆ ನೀರಿನ ಸಮರ್ಥ ಬಳಕೆ, ಹನಿ ಹಾಗೂ ತುಂತುರು ನೀರಾವರಿ ಅಳವಡಿಸಿಕೊಂಡು ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಿ ಗುಣಮಟ್ಟದ ಫಸಲು ಪಡೆಯುತ್ತಿದ್ದಾರೆ. ಕೃಷಿ ಚಟು ವಟಿಕೆಗೆ ಪತ್ನಿ, ಮಗನ ಸಹಕಾರವೂ ಇದೆ.

ಸಾವಯುವ ಕೃಷಿಗೆ ಮಹತ್ವ ಕೊಡುತ್ತಿದ್ದಾರೆ. ಹೈನುಗಾರಿಕೆಯ ಜತೆಗೆ ಗೋಬರ್‌ ಗ್ಯಾಸ್‌ ಘಟಕ ಸ್ಥಾಪಿಸಿ, ಜೀವಾಮೃತ ತಯಾರಿಸಿ ಕೃಷಿಯಲ್ಲಿ ಬಳಸುತ್ತಿದ್ದಾರೆ. ಹೆಚ್ಚು ಹಸಿರೆಲೆ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಕೃಷಿ ತೋಟದ ತ್ಯಾಜ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಎಲೆ, ಬಾಳೆ ತರಗು, ಕೃಷಿ ತ್ಯಾಜ್ಯಗಳ ಬಳಕೆಯಿಂದ ಇವರ ಕೃಷಿ ಭೂಮಿಯಲ್ಲಿ ಎರೆಹುಳುಗಳ ಸಂಖ್ಯೆ ವೃದ್ಧಿಯಾಗುತ್ತಿದೆ.

ಸಂಶೋಧನಾ ಮಾದರಿಯ ಕೃಷಿ ಚಟುವಟಿಕೆಗಳನ್ನು ವೀಕ್ಷಿಸಿ ಸಲಹೆ ಪಡೆ ಯಲು ಬೇರೆ ಕಡೆಯಿಂದ ನೂರಾರು ರೈತರು ಹಾಗು ಹಲವು ಸಂಘ, ಸಂಸ್ಥೆಗಳ ಸದಸ್ಯರು ಭೇಟಿ ನೀಡುತ್ತಿದ್ದಾರೆ.

ಕೃಷಿಯಿಂದ ವಿಮುಖವಾಗುತ್ತಿರುವ ಯುವ ಜನರನ್ನು ಕೃಷಿಯಲ್ಲೇ ಉಳಿಸಲು ಶ್ರಮಿಸುತ್ತಿದ್ದಾರೆ. ಹಾಲು ಉತ್ಪಾದಕರ ಸಂಘ, ಭಾರತೀಯ ಕಿಸಾನ್ ಸಂಘ, ತೆಂಗು ಬೆಳೆಗಾರರ ಸಂಘದ ಪದಾಧಿಕಾರಿಯಾಗಿ ಸಾವಯವ ಕೃಷಿ ಪರಿವಾರದಲ್ಲಿ ನಿರ್ದೇಶಕ ರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಕೃಷಿ ಇಲಾಖೆಯ ಹಲವು ಕಾರ್ಯ ಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ರೈತರಲ್ಲಿ ಅರಿವು ಮೂಡಿಸಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ರಾಷ್ಟ್ರೀಯ ಕೃಷಿ ಮೇಳ, ತೋಟಗಾರಿಕೆ ಮೇಳ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿ ಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ, ಕೃಷಿ ವಿಶ್ವ ವಿದ್ಯಾಲಯದ ಕೃಷಿ ಮೇಳದ ಪ್ರಶಸ್ತಿ, ಬಾಗಲಕೋಟೆಯ ಕೃಷಿ ವಿಶ್ವ ವಿದ್ಯಾ ಲಯದ ಕೃಷಿ ಮೇಳ ಪ್ರಶಸ್ತಿ, ಅಪ್ರತಿಮ ಸಾಧನೆಗಾಗಿ ರಾಜ್ಯಮಟ್ಟದ ‘ಕೃಷಿ ಪಂಡಿತ’ ಪ್ರಶಸ್ತಿ ಸೇರಿದಂತೆ ಹಲವು ಸಂಘ–ಸಂಸ್ಥೆಗಳ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. 
- ಜಾವಗಲ್ ಸ್ಕಂದನ್ ಸಿಂಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.