ADVERTISEMENT

ಬೆಲೆ ಕುಸಿತ; ದಾಳಿಂಬೆ ಬೆಳೆಗಾರರು ಕಂಗಾಲು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 7:22 IST
Last Updated 20 ಏಪ್ರಿಲ್ 2017, 7:22 IST
ಅರಸೀಕೆರೆಯಲ್ಲಿ ಬೆಳೆಗಾರರೊಬ್ಬರು ಬೆಲೆ ಕುಸಿತದಿಂದ ಕಟಾವು ಮಾಡದೇ ಗಿಡದಲ್ಲಿಯೇ ಬಿಟ್ಟಿರುವ ದಾಳಿಂಬೆ ಹಣ್ಣು (ಎಡಚಿತ್ರ). ಮಾರಾಟಕ್ಕೆ ಸಿದ್ಧವಾಗಿರುವ ದಾಳಿಂಬೆ ಹಣ್ಣು
ಅರಸೀಕೆರೆಯಲ್ಲಿ ಬೆಳೆಗಾರರೊಬ್ಬರು ಬೆಲೆ ಕುಸಿತದಿಂದ ಕಟಾವು ಮಾಡದೇ ಗಿಡದಲ್ಲಿಯೇ ಬಿಟ್ಟಿರುವ ದಾಳಿಂಬೆ ಹಣ್ಣು (ಎಡಚಿತ್ರ). ಮಾರಾಟಕ್ಕೆ ಸಿದ್ಧವಾಗಿರುವ ದಾಳಿಂಬೆ ಹಣ್ಣು   

ಅರಸೀಕೆರೆ: ಸತತ ಬರದಿಂದಾಗಿ ಸಂಕಷ್ಟದಲ್ಲಿದ್ದ ರೈತರಿಗೆ ದಿಢೀರ್ ದಾಳಿಂಬೆ ಬೆಲೆ ಕುಸಿತ ಮತ್ತಷ್ಟು ಚಿಂತೆಗೀಡು ಮಾಡಿದೆ.ಮಾರ್ಚ್‌ ಅಂತ್ಯಕ್ಕೆ  ಕೆ.ಜಿ ದಾಳಿಂಬೆ ದರ ₹ 85ರಿಂದ ₹100 ಇತ್ತು. ಆದರೆ ಏಪ್ರಿಲ್‌ ಮೊದಲ ವಾರದಲ್ಲಿ  ₹ 40ರಿಂದ ₹ 45ಕ್ಕೆ ಕುಸಿದಿದೆ. ಅರ್ಧದಷ್ಟು ಬೆಲೆ ಕಡಿಮೆ ಆಗಿರುವುದು ಬೆಳೆಗಾರರ ನಿದ್ದೆಗೆಡಿಸಿದೆ. ದರ ಕುಸಿತಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಕೆಲವು ಖರೀದಿದಾರರು ಹಣ್ಣಿನ ಬಣ್ಣ ಸರಿಯಾಗಿಲ್ಲ, ಎಂದು ಹೇಳಿದರೆ, ಮತ್ತೆ ಕೆಲವರು ಗಿಡಗಳಿಗೆ ನೀರಿನ ಅಂಶ ಕಡಿಮೆ ಆಗಿರುವುದರಿಂದ ಹಣ್ಣಿನ ಗಾತ್ರ ಚಿಕ್ಕದಾಗಿದೆ ಎನ್ನುತ್ತಿದ್ದಾರೆ.

ಕೊಳವೆ ಬಾವಿಯಲ್ಲಿ ನೀರಿಲ್ಲದೆ ಇರುವುದರಿಂದ ಹಸಿರು ಬಣ್ಣದ ಹಣ್ಣನ್ನೇ ಮಾರುಕಟ್ಟೆಗೆ ತರುತ್ತಿದ್ದಾರೆ’ ಎಂದು ದಾಳಿಂಬೆ ವರ್ತಕ ಮೈಸೂರಿನ ಗಿರೀಶ್‌ ಹೇಳುತ್ತಾರೆ.‘ಹಣ್ಣು ಕಟಾವು ಮಾಡಿದ ವಾರದೊಳಗೆ  ಒಡೆಯುತ್ತವೆ. ಇದರಿಂದ ಗ್ರಾಹಕರು ಹೆಚ್ಚು ಬೆಲೆ ಕೊಡಲು ಹಿಂದೆೇಟು ಹಾಕುತ್ತಾರೆ. ಕೆ.ಜಿ. ₹ 40ಕ್ಕೆ ಮಾರಾಟ ಮಾಡಿದರೆ ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ’ ಎನ್ನುತ್ತಾರೆ ವರ್ತಕ ಅಮೀರ್‌ ಜಾನ್‌.

ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಕಾರಣ ಕೊಳವೆ ಬಾವಿಗಳಲ್ಲಿನ ನೀರು ಬರಿದಾ ಗುತ್ತಿರುವುದು ರೈತರ ನಿದ್ದೆಗೆಡಿಸಿದೆ. ದಾಳಿಂಬೆ ತೋಟ ಉಳಿಸಿಕೊಳ್ಳಲು ಹೊಸದಾಗಿ ಕೊಳವೆ ಬಾವಿ ಕೊರೆಸಿದರೂ 650ರಿಂದ 900 ಅಡಿ ಆಳ ಕೊರೆಸಿದರೂ ನೀರಿಲ್ಲ. ನೀರಿನ ಸಮಸ್ಯೆಯಿಂದಾಗಿ ತೋಟವನ್ನು ಉಳಿಸಿಕೊಳ್ಳಲು ಕಣಕಟ್ಟೆ ಹೋಬಳಿಯ ಕೆಲವು ಬೆಳೆಗಾರರು ಟ್ಯಾಂಕರ್‌ ನೀರಿಗೆ ಮೊರೆ ಹೋಗಿದ್ದಾರೆ.

ADVERTISEMENT

‘ಪ್ರತಿದಿನ ಗಿಡವೊಂದಕ್ಕೆ 60 ಲೀಟರ್‌ನಷ್ಟು ನೀರು ಕೊಟ್ಟರೆ ಉತ್ತಮ ಇಳುವರಿ ಹಾಗೂ ಬಣ್ಣ ಬರುತ್ತದೆ. ಆದರೆ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರಿಲ್ಲದೆ ಇರುವುದರಿಂದ ಕೇವಲ 15 ಲೀಟರ್‌ ನೀರು ಸಿಗುತ್ತಿದೆ. ಇದರಿಂದ ಹಣ್ಣುಗಳ ಗಾತ್ರ ಚಿಕ್ಕದಾಗಿದೆ. ಅಲ್ಲದೆ ಬಿಸಿಲಿನ ತಾಪಕ್ಕೆ ಗಿಡಗಳಲ್ಲೇ ಕಾಯಿ ಒಡೆಯುತ್ತಿವೆ. ಏನು ಮಾಡುವುದು ಗೊತ್ತಾಗುತ್ತಿಲ್ಲ’ ಎಂದು ಬೆಳೆಗಾರ ಶಿವಮೂರ್ತಿ ಅಳಲು ತೋಡಿಕೊಂಡರು.

‘ಗಿಡದಲ್ಲಿ ಕನಿಷ್ಟ 20 ರಿಂದ 30 ಕಾಯಿಗಳು ಒಡೆದು ಹೋಗಿವೆ.  ತಿಂಗಳು ಮೊದಲೇ ಹಣ್ಣುಗಳನ್ನು ಕಟಾವು ಮಾಡಿ ಮಾರಾಟ ಮಾಡಬೇಕು ಎನ್ನಿಸಿದೆ. ಬಿಸಿ ಲಿನ ತಾಪಕ್ಕೆ ಉದುರಿದ ಕಾಯಿಗಳಿಂದ ಲೇ ಸಾವಿರಾರು ರೂಪಾಯಿ ನಷ್ಟವಾಗಿ ದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೊಳವೆ ಬಾವಿ, ಔಷಧ, ಕೂಲಿ, ಗೊಬ್ಬರಕ್ಕೆಂದು ಸುಮಾರು ಒಂದು ಲಕ್ಷಕ್ಕೂ ಅಧಿಕ ವೆಚ್ಚ ಮಾಡಿದ್ದೇನೆ. ಈ ಬಾರಿ ಸುಮಾರು 350 ಕ್ಕೂ ಹೆಚ್ಚು ಬಾಕ್ಸ್‌ ಸಿಗಬಹುದು ಎಂಬ ನಿರೀಕ್ಷೆ ಇತ್ತು.  ಕಳೆದ ಒಂದು ವಾರದ ಬೆಲೆ ಲೆಕ್ಕದಲ್ಲಿ ಸುಮಾರು ₹ 5 ಲಕ್ಷ ಸಿಗುತ್ತಿತ್ತು. ಆದರೆ ಬೆಲೆ ಕುಸಿತದಿಂದ ಸುಮಾರು ₹ 70 ಸಾವಿರ ದಿಂದ ₹ 90 ಸಾವಿರ ಸಿಗಬಹುದು’ ಎಂದು ಅವರು ನಷ್ಟದ ಲೆಕ್ಕಾಚಾರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.