ADVERTISEMENT

ಲಕ್ಮಣೇಶ್ವರ ದೇವಾಲಯ ಜೀರ್ಣೋದ್ಧಾರ ಕಾರ್ಯ ಚುರುಕು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 8:16 IST
Last Updated 3 ಸೆಪ್ಟೆಂಬರ್ 2017, 8:16 IST

ಹೊಳೆನರಸೀಪುರ: ಪಟ್ಟಣದ ರಿವರ್‌ಬ್ಯಾಂಕ್‌ ರಸ್ತೆ (ಹೇಮಾವತಿ ನದಿದಡದ ರಸ್ತೆ)ಯಲ್ಲಿರುವ ಸುಮಾರು 600 ವರ್ಷಗಳ ಹಿಂದಿನ ಲಕ್ಷ್ಮಣೇಶ್ವರ ದೇವಾಲಯ ಜೀರ್ಣೋದ್ಧಾರ ಕಾರ್ಯ ಸುಮಾರು ₹ 2 ಕೋಟಿ ವೆಚ್ಚದಲ್ಲಿ ಭರದಿಂದ ನಡೆಯುತ್ತಿದೆ. ಸುಂದರ ವಾತಾವರಣದಲ್ಲಿದ್ದ ಲಕ್ಷ್ಮಣೇಶ್ವರ ದೇವಾಲಯ, ನವಗ್ರಹ ದೇವಾಲಯ, ಅರಳಿಕಟ್ಟೆ ಶಿಥಿಲಗೊಂಡು ಬೀಳುವ ಹಂತ ತಲುಪಿದ್ದವು.

ಶಿವರಾತ್ರಿ ಸಮಯದಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದ ಶಾಸಕ ಎಚ್‌.ಡಿ.ರೇವಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ಗಳಿಗೆ ಹಾಗೂ ವಾಸ್ತುಶಿಲ್ಪಿಗೆ ದೇವಾಲಯ ನವೀಕರಣಕ್ಕೆ ಅಗತ್ಯ ವೆಚ್ಚದ ಅಂದಾಜುಪಟ್ಟಿ ತಯಾರಿಸಿಕೊಡಲು ಸೂಚಿಸಿದ್ದರು. ದೇವಾಲಯಕ್ಕೆ ಕಾಂಪೌಂಡ್‌, ಮುಖಮಂಟಪ, ಗೋಪುರ, ಅರ್ಚಕರ ನಿವಾಸ ಹಾಗೂ ದೇವಾಲಯಕ್ಕೆ ಬರುವವರಿಗಾಗಿ ಸ್ಥಳಾವಕಾಶ ಕಲ್ಪಿಸುವ ಕಾಮಗಾರಿಗೆ ಸುಮಾರು ₹ 2 ಕೋಟಿ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಲಾಯಿತು.

ಸರ್ಕಾರದ ಅನುದಾನ ಬಂದಿದ್ದು ಕೆಲಸ ಆರಂಭಿಸಲಾಗಿದೆ. ಅನುದಾನ ಸಾಲದಿದ್ದರೆ ಶಾಸಕರ ನಿಧಿ ಹಾಗೂ ಸಂಸದರ ನಿಧಿಯಿಂದ ಹಣದಿಂದ ದೇವಾಲಯ ಜೀರ್ಣೋದ್ಧಾರ ಗೊಳಿಸಲು ನಿರ್ಧರಿಸಲಾಗಿದೆ.

ADVERTISEMENT

ಗರ್ಭಗುಡಿಯಲ್ಲಿದ್ದ ಲಕ್ಷ್ಮಣೇಶ್ವರ ದೇವರನ್ನು ಅಲ್ಲಿಯೇ ಉಳಿಸಿ ದೇವರಮೇಲೆ ಬಿಸಿಲು, ಮಳೆ ಬೀಳದಂತೆ ಪ್ಲಾಸ್ಟಿಕ್‌ ಚೀಲದಿಂದ ಮುಚ್ಚಲಾಗಿದೆ. ಗರ್ಭಗುಡಿಯ ಕೆಲಸ ಮುಗಿಯುತ್ತಿದ್ದಂತೆ ಪ್ರಾಂಗಣ, ಕಾಂಪೌಂಡ್‌, ಮುಖ ಮಂಟಪ, ಗೋಪುರ, ಅರ್ಚಕರ ನಿವಾಸಗಳನ್ನು ಕಟ್ಟಲು ಸೂಚಿಸಿದ್ದಾರೆ ಎಂದು ದೇವಾಲಯ ನಿರ್ಮಾಣಕಾರರು ತಿಳಿಸಿದ್ದಾರೆ.

ಗಣೇಶೋತ್ಸವಕ್ಕೆ ಶಾಶ್ವತ ಕಟ್ಟಡ: ಪಟ್ಟಣದಲ್ಲಿ ಗಣೇಶೋತ್ಸವಕ್ಕೆ ಸುಮಾರು ₹ 20 ಲಕ್ಷ ವೆಚ್ಚದಲ್ಲಿ ಶಾಶ್ವತ ಪೆಂಡಾಲ್‌ ನಿರ್ಮಾಣಕ್ಕೆ ಶಾಸಕ ಎಚ್.ಡಿ.ರೇವಣ್ಣ ಚಾಲನೆ ನೀಡಲಿದ್ದಾರೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

ಗಣೇಶೋತ್ಸವ ಆರಂಭಕ್ಕೆ ಬಂದಿದ್ದ ಶಾಸಕರಿಗೆ ಪ್ರತಿ ವರ್ಷ ಪೆಂಡಾಲ್‌ ಬಾಡಿಗೆಗೆ ₹ 2 ಲಕ್ಷಕ್ಕಿಂತಲೂ ಹೆಚ್ಚು ಹಣ ವ್ಯಯವಾಗುತ್ತಿದೆ ಎಂದು ವಿವರಿಸಿದಾಗ ಮುಂದಿನ ವರ್ಷದ ವೇಳೆಗೆ ಶಾಶ್ವತ ಪೆಂಡಾಲ್‌ ನಿರ್ಮಿಸೋಣ ಎಂದು ಭರವಸೆ ನೀಡಿದ್ದು ಗಣೇಶೋತ್ಸವದ ನಂತರ ಈ ಪೆಂಡಾಲ್‌ ಆವರಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿ 1 ವರ್ಷದವರೆಗೆ ಆದಾಯ ಬರುವಂತೆ ಮಾಡೋಣ ಎಂದು ತಿಳಿಸಿದ್ದಾರೆ ಎಂದು ಸಮಿತಿಯ ಸದಸ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.