ADVERTISEMENT

ಲಕ್ಷ ಲೀಟರ್‌ ಹಾಲು ಉತ್ಪಾದನೆ ಗುರಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 9:39 IST
Last Updated 22 ಜುಲೈ 2017, 9:39 IST

ಅರಕಲಗೂಡು: ರಾಜ್ಯದ 46 ಹಾಲು ಉತ್ಪಾದಕರ ಸಹಕಾರ ಸಂಘಗಳ ಬಲವರ್ಧನೆಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹ 36.50 ಲಕ್ಷ ಕೊಡುಗೆಯಾಗಿ ನೀಡುತ್ತಿರುವುದು ಹೈನುಗಾರಿಕೆಗೆ ನೀಡುತ್ತಿರುವ ಉತ್ತೇಜನವಾಗಿದೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಖಾತೆ ಸಚಿವ ಎ.ಮಂಜು ತಿಳಿಸಿದರು.

ಪಟ್ಟಣದ ಚನ್ನಬಸವೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಅನುದಾನ ವಿತರಿಸಿ ಅವರು ಮಾತನಾಡಿದರು.

ಹೈನುಗಾರಿಕೆ ರೈತರಿಗೆ ಉಪಕಸುಬಾಗಿತ್ತು. ವಿವಿಧ ಕಾರಣಗಳಿಂದ ಕೃಷಿಯಲ್ಲಿ ನಷ್ಟ ಅನುಭವಿಸುತ್ತಿರುವ ರೈತರಿಗೆ ಹೈನುಗಾರಿಕೆ ಆರ್ಥಿಕವಾಗಿ ಬಲ ತುಂಬಿ ಹೆಚ್ಚು ಆದಾಯ ಗಳಿಸಿಕೊಡುತ್ತಿರುವ ಕಾರಣ ಬಹಳಷ್ಟು ರೈತರು ಇದನ್ನೆ ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಇದರ ಪರಿಣಾಮ ಹಾಲಿನ ಉತ್ಪಾದನೆ ದಿನೇದಿನೇ ಹೆಚ್ಚುತ್ತಿದೆ ಎಂದರು.

ADVERTISEMENT

‘ರಾಜ್ಯದಲ್ಲಿ ಈ ಹಿಂದೆ ಪ್ರತಿದಿನ 54 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿತ್ತು. ನಾನು ಸಚಿವನಾದ ಬಳಿಕ ಇಲಾಖೆಯಲ್ಲಿ ತಂದ ಸುಧಾರಣೆ, ಪಶುಭಾಗ್ಯದಂತಹ ಯೋಜನೆ ಹಾಗೂ ಸರ್ಕಾರ ಹಾಲು ಉತ್ಪಾದಕರಿಗೆ ನೀಡುತ್ತಿರುವ ಸಹಾಯಧನದ ಪರಿಣಾಮ ಇಂದು ದಿನವೊಂದಕ್ಕೆ 77.60ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಕರ್ನಾಟಕ ಹಾಲು ಉತ್ಪಾದನೆಯಲ್ಲಿ ದೇಶದಲ್ಲೆ ಎರಡನೆ ಸ್ಥಾನ ಹೊಂದಿದ್ದರೆ, ಹಸುವಿನ ಹಾಲು ಉತ್ಪಾದನೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಹೈನುಗಾರಿಕೆಗೆ ಇನ್ನೂ ಹೆಚ್ಚಿನ ಉತ್ತೇಜನ ನೀಡಿ ದಿನಕ್ಕೆ ಒಂದು ಲಕ್ಷ ಲೀಟರ್‌ ಹಾಲು ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು. 

ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ವಿಭಾಗದ ನಿರ್ದೇಶಕ ಎ.ಶ್ರೀಹರಿ  ಪ್ರಾಸ್ತಾವಿಕವಾಗಿ ಮಾತನಾಡಿ, ‘ಸಂಸ್ಥೆಯು 4 ಲಕ್ಷ ಮಹಿಳಾ ಸ್ವಸಹಾಯ ಸಂಘಗಳ ಮೂಲಕ 40 ಲಕ್ಷ ಮಹಿಳೆಯರನ್ನು ಸ್ವಾವಲಂಬಿಯಾಗಿಸಿದೆ. ಹೈನುಗಾರಿಕೆ ಪ್ರೋತ್ಸಾಹಿಸಿ ರೈತರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡುವ ಉದ್ದೇಶದಿಂದ 3,133 ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ ನಿರ್ಮಾಣ ಹಾಗೂ ಇತರೆ ಉಪಕರಣ ಖರೀದಿಗೆ ₹ 12.46 ಕೋಟಿ ನೆರವು ನೀಡಿದೆ’ ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ದೊಡ್ಡಮಠದ ಮಠಾಧೀಶ ಮಲ್ಲಿಕಾರ್ಜುನ ಸ್ವಾಮೀಜಿ, ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ಕೆ.ಸತೀಶ್‌ ಮಾತನಾಡಿದರು. ಜಿ.ಪಂ. ಸದಸ್ಯ ಎಸ್‌.ಪಿ.ರೇವಣ್ಣ, ಪ.ಪಂ. ಅಧ್ಯಕ್ಷ ಎಚ್‌.ಎಂ.ನಿರಂಜನ್‌, ಗ್ರಾಮಾಭಿವೃದ್ಧಿ ಸಂಸ್ಥೆಯ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಎಸ್‌.ಪಿ.ಗಂಗಾಧರ್‌, ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಕೆ.ಜಯಂತಿ, ಜಿ.ಪಂ ಮಾಜಿ ಸದಸ್ಯ ಕೆ.ಬೈರೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.