ADVERTISEMENT

ಲಾರಿ ಮಾಲೀಕರ ಬೇಡಿಕೆ ಈಡೇರಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 7:00 IST
Last Updated 9 ಜನವರಿ 2017, 7:00 IST

ಹಾಸನ: ಲಾರಿ ನಿಲುಗಡೆ ಸಮಸ್ಯೆ ಪರಿಹಾರ, ಪೊಲೀಸರಿಂದ ಆಗುತ್ತಿರುವ ಕಿರುಕುಳ, ಮರಳು ಸರಬರಾಜು ಪ್ರಕ್ರಿಯೆ ಹಾಗೂ ಇತರೆ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎ.ಮಂಜು ಭರವಸೆ ನೀಡಿದರು.

ನಗರದ ಖಾಸಗಿ ರೆಸಾರ್ಟ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಲಾರಿ ಮಾಲೀಕರ ಸಂಘದ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದರು. ನಿತ್ಯ ನಗರದಲ್ಲಿ 600ಕ್ಕೂ ಅಧಿಕ ಲಾರಿಗಳು ಸಂಚರಿಸುತ್ತವೆ. ರಸ್ತೆ, ಪಾರ್ಕಿಂಗ್ ಸಮಸ್ಯೆಯಿಂದ ಲಾರಿ ಮಾಲೀಕರು ನಷ್ಟ ಅನುಭವಿಸು ವಂತಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಲಾ ಗುವುದು.

ಲಾರಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲು ಸಕಲೇಶಪುರದಲ್ಲಿ 8 ಎಕರೆ ಹಾಗೂ ಹಾಸನದ ಚನ್ನಪಟ್ಟಣದಲ್ಲಿ 10 ಎಕರೆ ಜಾಗ ಗುರುತಿಸಲಾಗಿದೆ. ಹಾಸನ ನಗರಾಭಿವೃದ್ಧಿ ಪ್ರಾಧಿಕಾರವು ಜಾಗ ನೀಡಲು ಸಮ್ಮತಿ ಸೂಚಿಸಿದ್ದು, ಇತರ ಅಭಿವೃದ್ಧಿ ಕಾಮಗಾರಿಗೆ ಸರ್ಕಾರ ನೆರವು ನೀಡಲಿದೆ. ಈ ಕುರಿತು ಜಿಲ್ಲಾಧಿಕಾರಿ ವಿ. ಚೈತ್ರಾ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ಪಾರ್ಕಿಂಗ್‌ಗಾಗಿ ನೂರಾರು ಮರಗಳ ನಾಶ ಮಾಡಬೇಕಾಗುತ್ತದೆ. ಆದ್ದರಿಂದ ಲಾರಿ ಮಾಲೀಕರ ಸಂಘವು ಹೊಸ ಸಸಿ ನೆಡುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಪೊಲೀಸರಿಂದ ಲಾರಿ ಚಾಲಕರು ಹಾಗೂ ಮಾಲೀಕರು ಹಿಂಸೆ ಅನುಭವಿಸುತ್ತಿದ್ದು, ಎಲ್ಲ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಎಚ್.ಡಿ.ದೇವೇಗೌಡ ಮಾತನಾಡಿ, ಕೇಂದ್ರ ಸರ್ಕಾರವು ಜಿಎಸ್‌ಟಿ ಕಾಯ್ದೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದೆ. ಇದರಿಂದ ಲಾರಿ ಮಾಲೀಕರ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಲಿದೆ ಎಂಬುದನ್ನು ವಿಶ್ಲೇಷಿಸ ಬೇಕು. ಲಾರಿ ಮಾಲೀಕರ ಸಮಸ್ಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಟ್ಟಕ್ಕೆ ತಲುಪಿಸುವ ಪ್ರಯತ್ನ ಮಾಡು ತ್ತೇನೆ. ಪೊಲೀಸ್ ಇಲಾಖೆಯಿಂದ ಲಾರಿ ಚಾಲಕರಿಗೆ ಭಾರಿ ಅನ್ಯಾಯವಾಗುತ್ತಿದ್ದು , ಆ ಕ್ಷೇತ್ರದಲ್ಲಿ ಬದಲಾವಣೆ ತರುವ ಅವಶ್ಯಕತೆಯಿದೆ ಎಂದರು.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಮಾತನಾಡಿ, ಪ್ರತಿ 20 ಕಿ.ಮೀ.ಗೆ ಪೊಲೀಸರು ಲಾರಿಗಳಿಗೆ ಅಡ್ಡ ಹಾಕಿ ಹಣ ವಸೂಲಿ ಮಾಡುತ್ತಾರೆ. ಈಚೆಗೆ ಉದ್ಯಮ ನಡೆಸುವುದು ಕಷ್ಟವಾಗಿದೆ. ಮರಳು ವಿತರಣೆಯಲ್ಲಿ ಸರಿಯಾದ ನೀತಿ ಅನುಸರಿಸದ ಕಾರಣ ಭಾರಿ ತೊಂದರೆಯಾಗುತ್ತಿದೆ. ಹಾಸನ ರೈಲ್ವೆ ನಿಲ್ದಾಣದಿಂದ ಸರಕು ಸಾಗಣೆ ಮಾಡುವ ಲಾರಿಗಳಿಗೆ ಪ್ರತ್ಯೇಕ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಹೇಳಿದರು.

ಶಾಸಕ ಎಚ್.ಎಸ್.ಪ್ರಕಾಶ್, ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್‌ಕುಮಾರ್, ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಟಿ. ಅಣ್ಣಾಜಿ, ಅಯ್ಯಪ್ಪ, ರಾಮೇಗೌಡ, ಕೃಷ್ಣಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.