ADVERTISEMENT

ವನಮಹೋತ್ಸವ ನಿರಂತರವಾಗಿರಲಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 6:43 IST
Last Updated 15 ಜುಲೈ 2017, 6:43 IST

ಹಾಸನ: ‘ತಾಯಿ ಪ್ರೀತಿಗೆ ಹೇಗೆ ಬೆಲೆ ಕಟ್ಟಲು ಸಾಧ್ಯವಿಲ್ಲವೋ ಅದರಂತೆ ವನ ಮಹೋತ್ಸವವನ್ನು ವರ್ಷದಲ್ಲಿ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೇ ನಿರಂತರವಾಗಿ ಆಚರಿಸಬೇಕು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಪ್ರಾದೇಶಿಕ ಅರಣ್ಯ ವಿಭಾಗ ಮತ್ತು ಸಾಮಾಜಿಕ ಅರಣ್ಯ ವಿಭಾಗ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಆಶ್ರಯದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಕಾರ್ಯಾಗಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ನೀರಿಗಾಗಿ ಅರಣ್ಯ ಅಭಿಯಾನ ವನ ಮಹೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಬರ ಆವರಿಸಿದೆ. ಇಂದು ಹಾಸನ ಎಂದರೆ ಮಲೆನಾಡು ಎಂಬ ಭಾವನೆ ಕಾಣುತ್ತಿಲ್ಲ. ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು,  ಪರಿಸರ ಸಂರಕ್ಷಣೆ ಗಮನ ಹರಿಸಬೇಕು.  ಪ್ರತಿಯೊಬ್ಬರು ವರ್ಷವಿಡಿ ಅರಣ್ಯ ರಕ್ಷಣೆಗೆ ಮುಂದಾಗಬೇಕು.  ಅರಣ್ಯ ಇಲಾಖೆಯಿಂದ ಸುಮಾರು 15.20 ಲಕ್ಷ ಸಸಿಗಳನ್ನು ಆಂದೋಲನದ ರೀತಿ ಬೆಳೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ADVERTISEMENT

ಶಾಸಕ ಎಚ್‌.ಎಸ್‌.ಪ್ರಕಾಶ್‌ ಮಾತ ನಾಡಿ, ‘ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆ ಆಗುತ್ತಿಲ್ಲ. ಕಾವೇರಿ ಉಗಮ ಸ್ಥಾನವಾದ ಮಡಿಕೇರಿಯಲ್ಲೇ ಮಳೆ ಆಗಿಲ್ಲ. ಹವಾಮಾನ ವೈಪರಿತ್ಯದಿಂದ ಕಲಬುರ್ಗಿ, ಬೀದರ್‌ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ಪರಿಸರ ನಾಶದಿಂದ ಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷಗಳು ನಡೆಸುತ್ತಿವೆ. ಮಕ್ಕಳಿಗೆ ರೋಬೋಟ್ ಮಾದರಿಯ ಕಾಡು ಪ್ರಾಣಿಗಳನ್ನು ತೋರಿಸುವ ಕಾಲ ಬಂದಿದೆ.

ಮೂರು ವರ್ಷದಿಂದ ಈಚೆಗೆ ಜನಿಸಿದ ಮಕ್ಕಳು ಮಳೆ ನೋಡಿಲ್ಲ. ಹಾಗಾಗಿ ಮಕ್ಕಳಿಗೆ ಬಾಲ್ಯದಿಂದಲೇ  ಅರಣ್ಯ ನಾಶದಿಂದ ಉಂಟಾಗುವ ದುಷ್ಟರಿಣಾಮಗಳ ಬಗ್ಗೆ ತಿಳಿ ಹೇಳಬೇಕು. ಪೋಷಕರು ಮಕ್ಕಳ ಭವಿಷ್ಯಕ್ಕೆ ಹಣ ಕೂಡಿಡುವ ಬದಲು ಬೆಲೆ ಬಾಳುವ ಮರಗಳನ್ನು ಬೆಳೆಸಿದರೆ ಕಷ್ಟ ಕಾಲದಲ್ಲಿ ಆಸರೆಯಾಗುತ್ತವೆ ಎಂದು ಸಲಹೆ ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್‌.ಮಂಜುನಾಥ್‌ ಮಾತನಾಡಿ,  ‘ಮರಗಳು ಕೈಗಾರಿಕೆಗಳು ಹೊರಬರುವ ವಿಷ ಅನಿಲ ಹೀರಿ ಉಸಿರಾಟಕ್ಕೆ ಆಮ್ಲಜನಕ ನೀಡುವುದಲ್ಲದೆ ಮಳೆ ಮಾರುತಗಳನ್ನು ತಡೆಯುವಲ್ಲೂ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ತಿಳಿಸಿದರು. ರಸ್ತೆ ಬದಿಯ ಮರಗಳನ್ನು ಪೋಷಣೆ ಮಾಡುತ್ತಿರುವ ಅಪ್ಪಣ್ಣ, ರಂಗಯ್ಯ, ಧರ್ಮಶೇಖರ್, ಆನಂದ್, ರಂಗಸ್ವಾಮಿ ಅವರಿಗೆ ಮರಪಟ್ಟಿ ಪ್ರಮಾಣ ಪತ್ರ ವಿತರಿಸಲಾಯಿತು.

ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಪಿ.ಮೋಹನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ  ಬಿ.ಟಿ.ಸತೀಶ್, ವನ್ಯಜೀವಿ ಪರಿಪಾಲಕ ಕವನ್ ಅಶೋಕ್, ಜಗದೀಶ್‌, ಉಪ ಅರಣ್ಯಸಂರಕ್ಷಣಾಧಿಕಾರಿ ಕ್ರಾಂತಿ ಎನ್.ಇ, ಅನುಪಮಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಎ ಪರಮೇಶ್, ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಯಶವಂತ್‌ ಕುಮಾರ್   ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.