ADVERTISEMENT

ವಿಧಾನಸಭೆಯಲ್ಲಿ ಧರಣಿ: ರೇವಣ್ಣ ಎಚ್ಚರಿಕೆ

ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳದ ಜಿಲ್ಲಾಡಳಿತ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:13 IST
Last Updated 31 ಜನವರಿ 2017, 7:13 IST
ವಿಧಾನಸಭೆಯಲ್ಲಿ ಧರಣಿ: ರೇವಣ್ಣ ಎಚ್ಚರಿಕೆ
ವಿಧಾನಸಭೆಯಲ್ಲಿ ಧರಣಿ: ರೇವಣ್ಣ ಎಚ್ಚರಿಕೆ   

ಹಾಸನ: ಜಿಲ್ಲೆಯಲ್ಲಿ ಬರಗಾಲ ಆವರಿಸಿ ದ್ದರೂ ಕುಡಿಯಲು ನೀರು ಪೂರೈಸಲು ಕ್ರಮ ಕೈಗೊಳ್ಳದ ಜಿಲ್ಲಾಡಳಿತದ ಕ್ರಮ ಖಂಡಿಸಿ ವಿಧಾನಸಭೆಯಲ್ಲಿ ಧರಣಿ ನಡೆಸಲಾಗುವುದು ಎಂದು ಶಾಸಕ ಎಚ್‌.ಡಿ.ರೇವಣ್ಣ ಎಚ್ಚರಿಸಿದರು.

ಮಳೆ ಇಲ್ಲದೆ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ. ಕೊಳವೆ ಬಾವಿ ಕೊರೆಸಲು ಆಗುತ್ತಿಲ್ಲ. ಜನರು ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಶಾಸಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಬೇಕಿತ್ತು.  ಯೋಧನ ಅಂತಿಮ ಸಂಸ್ಕಾರ ಮುಗಿದ ಬಳಿಕ ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯುವ ನೀರಿನ ಕಾಮಗಾರಿಗೆ ₹ 1.35 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಅನುದಾನ ಬಂದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದ ಎಂದು ರೇವಣ್ಣ ಸವಾಲು ಹಾಕಿದರು.

ಫಸಲ್‌ ಬಿಮಾ ಬೆಳೆ ವಿಮೆ ಯೋಜನೆಯಲ್ಲಿ 2015–16ನೇ ಸಾಲಿನಲ್ಲಿ 51,612 ರೈತರು 46,650 ಹೆಕ್ಟೇರ್‌ ಪ್ರದೇಶಕ್ಕೆ ₹ 3.59 ಕೋಟಿ ಪ್ರೀಮಿಯಂ ಪಾವತಿ ಮಾಡಿದ್ದಾರೆ.  ₹ 11,67 ಕೋಟಿ ವಿಮೆ ಹಣ ಬಂದಿದೆ. ಆದರೆ ರೈತರಿಗೆ ಈ ಬಾರಿ ಸರಿಯಾಗಿ ಜಾಗೃತಿ ಮೂಡಿಸಿಲ್ಲ ಮತ್ತು ಪಹಣಿ ನೀಡುತ್ತಿಲ್ಲ. ಹೀಗಾಗಿ 2016–17 ನೇ ಸಾಲಿನಲ್ಲಿ 10,067 ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಬೆಳೆ ವಿಮೆ ಪಾವತಿ ಸಂಖ್ಯೆ ಕಡಿಮೆ ಆಗಿದೆ. ಪಹಣಿ ನೀಡಲು ಗ್ರಾಮ ಲೆಕ್ಕಾಧಿಕಾರಿಗಳು ರೈತರನ್ನು ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ವಿ.ಚೈತ್ರಾ ಮತ್ತು ಸಚಿವ ಎ.ಮಂಜು ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ತಹಶೀಲ್ದಾರ್‌ಗಳ ಸಭೆ ಕರೆದು ಡಿ.ಸಿ ಸ್ಪಷ್ಟ ಸೂಚನೆ ನೀಡುತ್ತಿಲ್ಲ. ದೇಶಕ್ಕಾಗಿ ಪ್ರಾಣ ಬಿಟ್ಟ ಯೋಧನ ಮನೆಗೆ ಮೂರು ದಿನದ ನಂತ ಹೋಗಿ ಆತನ ತಾಯಿಗೆ ಕೈ ತುತ್ತು ನೀಡಿ ನಾಟಕವಾಡಿದ್ದಾರೆ. ಅವರ ಮನೆಗೆ ನೂರಾರು ಜನರು ಭೇಟಿ ನೀಡುತ್ತಿರುತ್ತಾರೆ, ನೆಂಟರು ಬರುತ್ತಿರುತ್ತಾರೆ. ಜಿಲ್ಲಾಡಳಿತ ವತಿಯಿಂದ ಊಟ ಹಾಗೂ ಪೆಂಡಾಲ್‌ ವ್ಯವಸ್ಥೆ ಮಾಡಬೇಕಿತ್ತು. ಸಾಧ್ಯವಿಲ್ಲವೆಂದರೆ ಪಕ್ಷದ ವತಿಯಿಂದ ವ್ಯವಸ್ಥೆ ಮಾಡಲಾಗುವುದು. ಮೃತ ಯೋಧನ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ನೀಡಬೇಕು. ಅವರ ತಂದೆ, ತಾಯಿ ಬಡವರು. ಶೀಟ್‌ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ನುಡಿದರು.
ಗೋಷ್ಠಿಯಲ್ಲಿ ಶಾಸಕರಾದ ಎಚ್‌.ಕೆ.ಕುಮಾರಸ್ವಾಮಿ, ಎಚ್‌.ಎಸ್‌. ಪ್ರಕಾಶ್‌ ಇದ್ದರು.

ಹಾಲು ಖರೀದಿ ದರ ₹ 1.50 ಹೆಚ್ಚಳ
ಹಾಸನ:
ನವೆಂಬರ್‌ನಲ್ಲಿ ಗಳಿಸಿರುವ ಲಾಭಂಶದಲ್ಲಿ ಹಾಲು ಉತ್ಪಾದಕರ ಖರೀದಿ ದರ ಪ್ರತಿ ಕೆ.ಜಿ ಗೆ ₹ 1.50 ಹೆಚ್ಚಿಸಲಾಗಿದೆ ಎಂದು ಹಾಸನ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್‌.ಡಿ.ರೇವಣ್ಣ ಹೇಳಿದರು. ಈ ಹೆಚ್ಚಳದಿಂದ ಪ್ರತಿ ಕೆ.ಜಿ 3.5 ಜಿಡ್ಡಿನ ಹಾಲಿಗೆ ₹ 25.50 ನೀಡಿದಂತೆ ಆಗುತ್ತದೆ. ಇದರಿಂದ 9 ಸಾವಿರ ಕುಟುಂಬಕ್ಕೆ ಅನುಕೂಲವಾಗಿದೆ ಎಂದರು.

**

ADVERTISEMENT

ಕುಡಿಯುವ ನೀರು ಯೋಜನೆಗೆ ಹಣ ಬಂದಿಲ್ಲ. ಬಿಡುಗಡೆ ಆಗಿದ್ದನ್ನು ಸಾಬೀತುಪಡಿಸಿದರೆ ರಾಜೀನಾಮೆ ನೀಡಲು ಸಿದ್ಧ
- ಎಚ್‌.ಡಿ.ರೇವಣ್ಣ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.