ADVERTISEMENT

ಶುದ್ಧ ನೀರಿನ ಘಟಕಗಳೇ ಗಲೀಜು

ಕೆ.ಎಸ್.ಸುನಿಲ್
Published 27 ನವೆಂಬರ್ 2017, 7:24 IST
Last Updated 27 ನವೆಂಬರ್ 2017, 7:24 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಶುದ್ಧ ನೀರಿನ ಘಟಕ ಬಂದ್‌ ಆಗಿದೆ.
ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಶುದ್ಧ ನೀರಿನ ಘಟಕ ಬಂದ್‌ ಆಗಿದೆ.   

ಹಾಸನ: ನಗರದ ವಿವಿಧೆಡೆ ಆರಂಭಿಸಿರುವ ಶುದ್ಧ ನೀರಿನ ಘಟಕಗಳು ನಿರ್ವಹಣೆ ಇಲ್ಲದೆ ಅನೈರ್ಮಲ್ಯ ತಾಣವಾಗಿದೆ. ಹಾಗಾಗಿ ಜನರು ನೀರು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ.

ನಗರಸಭೆ ವತಿಯಿಂದ ಪ್ರಮುಖ ಸ್ಥಳಗಳಲ್ಲಿ ತೆರೆದಿರುವ ಶುದ್ಧ ನೀರಿನ ಘಟಕಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಸಾರ್ವಜನಿಕರು ಈ ನೀರನ್ನು ಕುಡಿಯಲು ಬಳಸುವುದಕ್ಕಿಂತ ಇತರೆ ಕಾರ್ಯಕ್ಕೆ ಬಳಸುವುದೇ ಹೆಚ್ಚಾಗಿದೆ. ಜಿಲ್ಲಾಧಿಕಾರಿ ಕಚೇರಿ ಮತ್ತು ಮೂರನೇ ವಾರ್ಡ್‌ ಘಟಕಗಳಿಗೆ ಬೀಗ ಜಡಿಯಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಆವರಣ, ಶಂಕರೀಪುರಂ ಉದ್ಯಾನವನ, ಕಟ್ಟಿನಕೆರೆ ಮಾರುಕಟ್ಟೆ, ಮಹಾರಾಜ ಉದ್ಯಾನವನ, ಸಂತೇಪೇಟೆ ವೃತ್ತದಲ್ಲಿ ತಲಾ ₹ 10 ಲಕ್ಷ ವೆಚ್ಚದಲ್ಲಿ ಘಟಕ ನಿರ್ಮಿಸಲಾಗಿದೆ.

ADVERTISEMENT

ಕಟ್ಟಿನಕೆರೆ ಮಾರುಕಟ್ಟೆ, ಹೇಮಾವತಿ ಉದ್ಯಾನ ಮತ್ತು ಸಂತೇಪೆಟೆ ವೃತ್ತದ ಘಟಕಗಳಲ್ಲಿ ನೀರು ಲಭ್ಯ ಇದೆ. ಆದರೆ ಸಮರ್ಪಕ ನಿರ್ವಹಣೆ ಆಗುತ್ತಿಲ್ಲ. ಘಟಕದ ಸುತ್ತ ಸ್ವಚ್ಛತೆ ಇಲ್ಲ. ಕೆಲವು ಕಡೆ ಪಾಚಿ ಕಟ್ಟಿಕೊಂಡು, ನೀರು ಪೋಲಾಗುತ್ತಿದೆ.

ಸಂಜೆ ಆಗುತ್ತಿದ್ದಂತೆ ಕೆಲವರು ಮದ್ಯ ಸೇವಿಸಲು ಘಟಕದ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಮದ್ಯದ ಪಾಕೇಟ್‌ಗಳನ್ನು ಅಲ್ಲಿಯೇ ಬಿಸಾಡಿ ಹೋಗುವುದರಿಂದ ಜನರು ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ. ಕೈ ತೊಳೆಯಲು ಬೇಸಿನ್‌ ಅಳವಡಿಸಲಾಗಿದೆ. ಗುಟ್ಕಾ, ಪಾನ್‌ ಉಗಿದು ನೀರು ಹಾಕದೆ ಹೋಗುವುದರಿಂದ ಸ್ಥಳದಲ್ಲಿ ಕೆಟ್ಟ ವಾಸನೆ ಬರುತ್ತಿದೆ.

ಜಿಲ್ಲಾಧಿಕಾರಿ ಕಚೇರಿ ಆವರಣದ ಘಟಕ ಬಂದ್‌ ಆಗಿದೆ. ಡಿ.ಸಿ ಕಚೇರಿ, ಕೋರ್ಟ್‌, ಜಿಲ್ಲಾ ಖಜಾನೆಗೆ ಬರುವ ಸಾರ್ವಜನಿಕರು ಹಣ ಕೊಟ್ಟು ನೀರಿನ ಬಾಟಲ್‌ಗಳನ್ನು ಖರೀದಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮೂರನೇ ವಾರ್ಡ್‌ನಲ್ಲಿ ನಗರಸಭೆ ಅಧ್ಯಕ್ಷ ಅನಿಲ್‌ ಕುಮಾರ್‌ ಮತ್ತು ವಾರ್ಡ್‌ ಸದಸ್ಯ ಸುರೇಶ್‌ ಕುಮಾರ್‌ ಅವರ ರಾಜಕೀಯ ತಿಕ್ಕಾಟದಿಂದ ಉದ್ಘಾಟನೆಯಾದ ದಿನವೇ ಘಟಕಕ್ಕೆ ಬೀಗ ಹಾಕಲಾಗಿದೆ.

‘ನಗರದಲ್ಲಿರುವ ನೀರಿನ ಘಟಕಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಮೂರನೇ ವಾರ್ಡ್‌ ಘಟಕವನ್ನು ಪಶುಸಂಗೋಪನೆ ಸಚಿವ ಎ.ಮಂಜು ಉದ್ಘಾಟಿಸಿದ ಕೆಲ ಗಂಟೆಯಲ್ಲಿ ನಗರಸಭೆ ಅಧ್ಯಕ್ಷರು ಬೀಗ ಹಾಕಿಸಿದ್ದಾರೆ. ಇದರಿಂದ ಜನರಿಗೆ ಶುದ್ಧ ನೀರು ಸಿಗದೆ ಸಮಸ್ಯೆಯಾಗಿದೆ’ ಎಂದು ನಗರಸಭೆ ಸದಸ್ಯ ಸುರೇಶ್‌ ಕುಮಾರ್ ಆರೋಪಿಸಿದರು.

‘ಕುಡಿಯುವ ನೀರಿನ ಘಟಕಗಳ ಬಳಿ ಗಲೀಜು ಮಾಡದಂತೆ ಸಾರ್ವಜನಿಕರಿಗೆ ಸಾಕಷ್ಟು ಬಾರಿ ಹೇಳಲಾಗಿದೆ. ಶುಚಿಯಾಗಿ ಇಟ್ಟುಕೊಳ್ಳುವುದು ಅವರ ಕರ್ತವ್ಯ. ಆದರೂ ಘಟಕದ ಸ್ಥಳವನ್ನು ಸ್ವಚ್ಛಗೊಳಿಸಲಾಗುವುದು. ಡಿ.ಸಿ ಕಚೇರಿ ಆವರಣದಲ್ಲಿರುವ ಘಟಕವನ್ನು ಹಿಂದಿನ ಜಿಲ್ಲಾಧಿಕಾರಿ ಅವಶ್ಯಕತೆ ಇಲ್ಲ ಎಂದು ಬಂದ್ ಮಾಡಿಸಿದ್ದಾರೆ’ ಎಂದು ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಅನಿಲ್‌ ಕುಮಾರ್‌ ಹೇಳಿದರು.

‘ಮೂರನೇ ವಾರ್ಡ್‌ ಘಟಕ ಆರಂಭಿಸುವಂತೆ ನಗರಸಭೆ ಸಿಬ್ಬಂದಿಗೆ ಕೀ ನೀಡಲಾಗಿದೆ. ನಗರಸಭೆಯಿಂದ ಮತ್ತೆ ಹೊಸದಾಗಿ 19 ಘಟಕಗಳ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.