ADVERTISEMENT

ಶ್ವೇತಪತ್ರ ಹೊರಡಿಸಲು ಕಾಂಗ್ರೆಸ್‌ ಒತ್ತಾಯ

ದೇಶದಲ್ಲಿ ಗರಿಷ್ಠ ಮುಖಬೆಲೆಯ ನೋಟು ರದ್ದು ಪರಿಣಾಮ; ಜನಸಾಮಾನ್ಯರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 9:18 IST
Last Updated 3 ಜನವರಿ 2017, 9:18 IST

ಹಾಸನ: ದೇಶದಲ್ಲಿ ಗರಿಷ್ಠ ಮುಖಬೆಲೆಯ ನೋಟು ರದ್ದತಿಯ ನಂತರ ಎಷ್ಟು ಕಪ್ಪು ಹಣ ಪತ್ತೆ ಮಾಡಲಾಗಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್‌ ಆಗ್ರಹಿಸಿದೆ.

ನೋಟು ರದ್ದತಿ 50 ದಿನದ ನಂತರ ಪ್ರಧಾನಿ ಮೋದಿ ಅವರು ಮಾಡಿದ ಭಾಷಣದಲ್ಲಿ ಕಿರು ಬಜೆಟ್‌ ಬಗ್ಗೆ ಹೇಳಿದ್ದಾರೆ ಹೊರತು ಯಾವುದೇ ಹೊಸ ವಿಷಯ ಇಲ್ಲ.  ಈ ವರೆಗೂ ಎಷ್ಟು ಹಣ ಬ್ಯಾಂಕ್‌ಗಳಿಗೆ ಜಮಾ ಆಗಿದೆ ಹಾಗೂ ಕಪ್ಪುಹಣದ ಬಗ್ಗೆಯೂ ಮಾಹಿತಿ ನೀಡಿಲ್ಲ. ಇದರಿಂದ ಯಾರಿಗೂ ಅನುಕೂಲವಾಗಿಲ್ಲ.

ಪೂರ್ವಸಿದ್ಧತೆ ಇಲ್ಲದೆ ನೋಟು ರದ್ದುಗೊಳಿಸಿರುವುದರಿಂದ ಜನ ಸಾಮಾನ್ಯರು ಮತ್ತು ಬಡವರಿಗೆ ಸಾಕಷ್ಟು ತೊಂದರೆ ಆಗಿದೆ. 100 ಜನ ಶ್ರೀಮಂತರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ ಎಂದು ಸಚಿವ ಎ.ಮಂಜು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ನೋಟು ರದ್ದು ಬಳಿಕ ದೇಶದಲ್ಲಿ  ಇದುವರೆಗೂ 8–9 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಸಲಾಗಿದೆ. ವಿದೇಶದಿಂದ ಕಪ್ಪುಹಣ ತರುವುದಾಗಿ ಕೊಟ್ಟ ಮಾತು ಉಳಿಸಿಕೊಂಡಿಲ್ಲ.ಪ್ರಧಾನಿ ಅವರದ್ದು ಸರ್ವಾಧಿಕಾರಿ ಧೋರಣೆ, ಸಂಪುಟ ಸಭೆಯಲ್ಲೂ ಚರ್ಚಿಸದೆ, ಆರ್ಥಿಕ ತಜ್ಞರ ಜತೆ ಸಮಾಲೋಚನೆ ನಡೆಸದೆ ತೀರ್ಮಾನ ಕೈಗೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

₹ 1.6 ಲಕ್ಷ ಕೋಟಿ ಶ್ರೀಮಂತರ ಸಾಲ ಮನ್ನಾ ಮಾಡಲಾಗಿದೆ. ಆದರೆ ಮಳೆ ಇಲ್ಲದೆ ಬೆಳೆ ನಾಶವಾಗಿದೆ. ರೈತರ ಸಾಲ ಮನ್ನಾ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಬಿಪಿಎಲ್‌ ಕಾರ್ಡ್‌ ಹೊಂದಿರುವವರ ಖಾತೆಗೆ ₹ 25 ಸಾವಿರ ಹಣ ಜಮಾ ಮಾಡಬೇಕು. ನುಡಿದಂತೆ ನಡೆದಕೊಳ್ಳದ ಕಾರಣ ಪ್ರಧಾನಿ ಮೋದಿ ಅವರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಶೀಘ್ರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು. ಕನ್ನಡ ಮಾಧ್ಯಮ ಶಾಲೆಗೆ ಅನುಮತಿ ಪಡೆದು ಇಂಗ್ಲಿಷ್‌ ಶಾಲೆಯನ್ನು  ನಡೆಸುತ್ತಿದ್ದಾರೆ ಎಂದು ಶಾಸಕ ಎಚ್‌.ಎಸ್‌.ಪ್ರಕಾಶ್‌ಗೆ ಸಚಿವರು ತಿರುಗೇಟು ನೀಡಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ್‌ ಮಾತನಾಡಿ, ಮೋದಿ ಅವರ ಭಾಷಣ ಜನರ ನಿರೀಕ್ಷೆಗೆ ತಕ್ಕಂತೆ ಇಲ್ಲ. ಐದು ರಾಜ್ಯಗಳ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ರೀತಿ ಮಾಡಲಾಗಿದೆ. ಬ್ಯಾಂಕ್‌ನಲ್ಲಿ ಹಣ ಜಮಾ ಮಾಡಲು ಸರದಿ ಸಾಲಿನಲ್ಲಿ ನಿಂತು 115 ಜನ ಮೃತಪಟ್ಟಿದ್ದಾರೆ. ಆದರೆ ಇದುವರೆಗೂ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿಲ್ಲ. ನೋಟು ರದ್ದತಿಯಿಂದ ಆಗಿರುವ ತೊಂದರೆ ಕುರಿತು ಜನರಿಗೆ ಅರಿವು ಮೂಡಿಸಲು ಜ. 7ರಂದು ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. 9ರಂದು ಮಹಿಳಾ ಘಟಕ ಪ್ರತಿಭಟನೆ ನಡೆಸಲಿದೆ ಎಂದು ವಿವರಿಸಿದರು.

ತಮಿಳುನಾಡಿನ ಮಾಜಿ ಸಂಸದ, ರಾಜ್ಯ ಉಸ್ತುವಾರಿ ವಿಶ್ವನಾಥನ್‌ ಮಾತನಾಡಿ, ಜ. 11ರಂದು ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಸಮಾವೇಶದಲ್ಲಿ ನೋಟು ರದ್ದತಿಯಿಂದ ಆಗಿರುವ ತೊಂದರೆ ಕುರಿತು ಚರ್ಚಿಸಲಾಗುವುದು ಎಂದು  ಹೇಳಿದರು. ಗೋಷ್ಠಿಯಲ್ಲಿ ಮೃಗಾಲಯ ಪ್ರಾಧಿಕಾರ ಅಧ್ಯಕ್ಷೆ ಮಲ್ಲಿಗೆ ವಿರೇಶ್‌, ವಿಧಾನ ಪರಿಷತ್‌ ಸದಸ್ಯ ಗೋಪಾಲಕೃಷ್ಣ, ನಾರಾಯಣಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.