ADVERTISEMENT

ಆಸಿಡ್ ದಾಳಿ ಸಮಾಜಕ್ಕೆ ಅಂಟಿದ ಕಳಂಕ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2017, 5:24 IST
Last Updated 1 ಸೆಪ್ಟೆಂಬರ್ 2017, 5:24 IST

ಹಾವೇರಿ: ‘ಆಸಿಡ್ ದಾಳಿಯು ಸಮಾಜಕ್ಕೆ ಅಂಟಿದ ಕಳಂಕವಾಗಿದ್ದು, ದಾಳಿಗಾರರು ಸಮಾಜದಲ್ಲಿ ಜೀವಿಸಲು ಅನರ್ಹರರು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಸುನೀಲ್‌ಕುಮಾರ ಸಿಂಗ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪಂಚಾಯ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಪೊಲೀಸ್ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಗರದಲ್ಲಿನ ತಾಲ್ಲೂಕು ಆರೋಗ್ಯ ಭವನದಲ್ಲಿ ಗುರುವಾರ ನಡೆದ ‘ಆಸಿಡ್ ದಾಳಿ ಮತ್ತು ದೌರ್ಜನ್ಯಕ್ಕೆ ಒಳಗಾದವರಿಗೆ ಕಾನೂನು ಸೇವೆಗಳ ಕುರಿತು ಸಾಕ್ಷರತಾ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

‘ದ್ವೇಷ ಸಾಧಿಸಲು, ಸಾಕ್ಷಿ ನಾಶ ಪಡಿಸಲು, ಜೀವನಪರ್ಯಂತ ಕೊರಗುವಂತೆ ಮಾಡಲು ಕೆಲ ದುಷ್ಕರ್ಮಿಗಳು ಇಂತಹ ಹೀನ ಕೃತ್ಯಗಳಲ್ಲಿ ತೊಡಗುತ್ತಾರೆ. ಈ ಬಗ್ಗೆ ಮಹಿಳೆಯರು ಎಚ್ಚರ ವಹಿಸಬೇಕು. ದಾಳಿಗೊಳಗಾದ ಮಹಿಳೆಯರು ಧೃತಿಗೆಡದೇ ಕಾನೂನನು ಮೂಲಕ ಹೋರಾಟ ನಡೆಸಬೇಕು’ ಎಂದರು.

ADVERTISEMENT

‘ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಉಚಿತ ಕಾನೂನು ಸಲಹೆಗಳನ್ನು ನೀಡಲಾಗುವುದು’ ಎಂದರು. ‘ಆಸಿಡ್‌ ದಾಳಿಕೋರರಿಗೆ ಭಾರತೀಯ ದಂಡ ಸಂಹಿತೆ ಕಲಂ 326/ಎ ಪ್ರಕಾರ 10 ವರ್ಷದಿಂದ ಜೀವಾವಧಿ ತನಕ ಶಿಕ್ಷೆ ವಿಧಿಸಲು ಅವಕಾಶವಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಸರ್ಕಾರದಿಂದ ₹1 ಲಕ್ಷದ ವರೆಗೆ ಸಹಾಯ ನೀಡಲು ಅವಕಾಶವಿದೆ’ ಎಂದರು.

ನಗರ ಪೊಲೀಸ್‌ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಬಸವರಾಜ ಹಳಬಣ್ಣನವರ ಮಾತನಾಡಿ, ‘ಮಹಿಳೆ ಅಥವಾ ಯುವತಿಯರೊಂದಿಗೆ ಯಾರೇ ಅಸಭ್ಯವಾಗಿ ವರ್ತಿಸಿದರೂ ಪೊಲೀಸ್‌ ಠಾಣೆಗೆ ದೂರು ನೀಡಿ.  ಪೊಲೀಸ್‌ ಸಿಬ್ಬಂದಿಯೇ ಅನುಚಿತವಾಗಿ ವರ್ತಿಸಿದರೆ ‘ಪೋಲಿಸ್‌ ದೂರು ಪ್ರಾಧಿಕಾರ’ಕ್ಕೆ ದೂರು ನೀಡಿ’ ಎಂದರು.

ವಕೀಲ ಡಿ.ಟಿ.ಬಳಿಯಣ್ಣನವರ ಮಾತನಾಡಿ, ‘ಪ್ರತಿಯೊಬ್ಬ ಮಹಿಳೆಯರು ತಮಗೆ ಬೇಕಾದ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಸಂಸ್ರಸ್ತ ಮಹಿಳೆಯರಿಗೆ ಕಾನೂನುಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದರು. ‘ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸಂತ್ರಸ್ತರ ಪರಿಹಾರ ನಿಧಿಯಿಂದ ಪರಿಹಾರ ಹಾಗೂ ಉಚಿತ ಚಿಕಿತ್ಸೆ ನೀಡಲಾಗುವುದು’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಡ್ಡಿ ಮಾತನಾಡಿದರು. ಪ್ರಧಾನ ಸಿವಿಲ್‌ ನ್ಯಾಯಾಧೀಶ ಲಕ್ಷ್ಮಿ ಗರಗ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯ ದರ್ಶಿ ಡಿ.ಎನ್.ನಾಯ್ಡು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ನಾಗರಾಜ ನಾಯಕ,  ಡಾ.ಪ್ರಭಾಕರ ಕುಂದೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.