ADVERTISEMENT

ಕಪ್ಪುಪಟ್ಟಿ ಧರಿಸಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 7:47 IST
Last Updated 21 ಏಪ್ರಿಲ್ 2017, 7:47 IST

ಹಾವೇರಿ: ಜಿಲ್ಲೆಯಲ್ಲಿ ಗುರುವಾರ ಆರಂಭಗೊಂಡ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮೌಲ್ಯಮಾಪನದಲ್ಲಿ ಕಪ್ಪುಪಟ್ಟಿ ಧರಿಸಿಕೊಂಡು ಪಾಲ್ಗೊಳ್ಳುವ ಮೂಲಕ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರು ಪ್ರತಿಭಟನೆ ನಡೆಸಿದರು.ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ನೇತೃತ್ವದಲ್ಲಿ ಶಿಕ್ಷಕರು ಕಪ್ಪು ಪಟ್ಟಿ ಧರಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ. ಹನು ಮಂತಪ್ಪ, ‘ರಾಜ್ಯ ಸರ್ಕಾರ 2006ರಲ್ಲಿ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಬೇಕು. ಬದಲಾಗಿ, ಹಿಂದಿನ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು. ಈ ಉದ್ದೇಶದಿಂದ ಸರ್ಕಾರದ ಗಮನ ಸೆಳೆ ಯಲು ಕಪ್ಪುಪಟ್ಟಿ ಧರಿಸಿ ಮೌಲ್ಯಮಾಪ ನಕ್ಕೆ ಹಾಜರಾಗುತ್ತಿದ್ದೇವೆ’ ಎಂದರು.

‘ನೂತನ ಪಿಂಚಣಿ ಯೋಜನೆ ಯಿಂದಾಗಿ ಈ ಬಾರಿ ಸಾವಿರಕ್ಕೂ ಹೆಚ್ಚು ಅನುದಾನಿತ ಶಾಲಾ ನೌಕರರು ಪಿಂಚಣಿ ರಹಿತವಾಗಿ ನಿವೃತ್ತರಾಗಲಿದ್ದಾರೆ. ಅನು ದಾನಿತ ನೌಕರರ ಸಮಸ್ಯೆಗಳ ಬಗ್ಗೆ 11 ವರ್ಷಗಳಿಂದ ಹೋರಾಟ ನಡೆಸುತ್ತಿ ದ್ದರೂ, ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.‘2006ರ ನೂತನ ಪಿಂಚಣಿ ಯೋಜನೆಯು ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಅನ್ವಯಿಸುತ್ತಿಲ್ಲ. ಹೀಗಾಗಿ, ಅನುದಾನಿತ ನೌಕರರ ಭವಿ ಷ್ಯಕ್ಕೆ ಭದ್ರತೆ ಇಲ್ಲದಾಗಿದೆ. ಅದಕ್ಕಾಗಿ ಹಳೇ ಪಿಂಚಣಿ ಯೋಜನೆ ಜಾರಿಯ ಜೊತೆಗೆ, ಸಂಸ್ಥೆ ಅನುದಾನಕ್ಕೆ ಒಳ ಪಡುವ ಮೊದಲಿನ ಸೇವೆಯನ್ನೂ ಕೂಡ ಕಡ್ಡಾಯವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.