ADVERTISEMENT

ಕಾರ್ಯಕರ್ತರಿಂದ ಕಪ್ಪು ಹಣದ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 6:43 IST
Last Updated 9 ನವೆಂಬರ್ 2017, 6:43 IST
‘ನೋಟು ರದ್ದತಿ’ಗೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಹಾವೇರಿ ನಗರದಲ್ಲಿನ ಪಕ್ಷದ ಜಿಲ್ಲಾ ಕಾರ್ಯಾಲಯದ ಮುಂದೆ ಸಂಭ್ರಮ ಆಚರಿಸಿದರು
‘ನೋಟು ರದ್ದತಿ’ಗೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಹಾವೇರಿ ನಗರದಲ್ಲಿನ ಪಕ್ಷದ ಜಿಲ್ಲಾ ಕಾರ್ಯಾಲಯದ ಮುಂದೆ ಸಂಭ್ರಮ ಆಚರಿಸಿದರು   

ಹಾವೇರಿ: ₹ 500 ಮತ್ತು ₹ 1,000 ಮುಖಬೆಲೆಯ ನೋಟು ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಬುಧವಾರ ಪಕ್ಷದ ಜಿಲ್ಲಾ ಕಾರ್ಯಾಲಯದ ಮುಂಭಾಗದಲ್ಲಿ ‘ಕಪ್ಪು ಹಣ’ದ ಪ್ರತಿಕೃತಿ ದಹಿಸಿ ಸಂಭ್ರಮ ಆಚರಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ಮಾತನಾಡಿ, ‘ಕಪ್ಪು ಹಣ ಮತ್ತು ಭಷ್ಟಾಚಾರ ದೇಶದ ಅರ್ಥ ವ್ಯವಸ್ಥೆಯನ್ನು ಹದಗೆಡಿಸುತ್ತಿದೆ. ದೇಶದಲ್ಲಿ ನಕಲಿ ನೋಟಿನ ಹಾವಳಿ ಹೆಚ್ಚಾಗಿತ್ತು, ಇದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ನವೆಂಬರ್ 8ರಂದು ದಿಟ್ಟ ನಿರ್ಧಾರ ತೆಗೆದುಕೊಂಡರು. ಅಂದಿನ ಅಧಿಕ ಮೊತ್ತದ ₹ 500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದರು’ ಎಂದರು.

‘ದೇಶದ ಹಿತದೃಷ್ಟಿಯ ಈ ನಿರ್ಧಾರದಿಂದ ತಮ್ಮ ಸ್ಥಾನ ಮತ್ತು ಪಕ್ಷಕ್ಕೆ ಹಿನ್ನಡೆ ಆದರೂ ಪರವಾಗಿಲ್ಲ, ದೇಶದ ಭದ್ರತೆ ಮತ್ತು ಅರ್ಥ ವ್ಯವಸ್ಥೆ ಸರಿ ಮಾಡುವ ನಿಟ್ಟಿನಲ್ಲಿ ಮುಂದಾದರು. ಅವರು ದೇಶವನ್ನು ಗಮನದಲ್ಲಿಟ್ಟು ನಿರ್ಧಾರ ತೆಗೆದುಕೊಂಡರು’ ಎಂದರು.

ADVERTISEMENT

‘ಇದರಿಂದ ಕಪ್ಪು ಕುಳಗಳಿಗೆ ನಡುಕ ಉಂಟಾಗಿತ್ತು. ನಿದ್ದೆ ಮಾತ್ರೆ ಸೇವಿಸಿ ಮಲಗುವ ಪರಿಸ್ಥಿತಿ ಉಂಟಾಯಿತು. ಆಗ, ಪಾಕಿಸ್ತಾನದಿಂದ ಬರುವ ನಕಲಿ ನೋಟುಗಳನ್ನು ತಡೆಗಟ್ಟಲು ಅನಿವಾರ್ಯವಾಗಿತ್ತು. ಇದನ್ನು ದೇಶದ ಜನತೆ ಸ್ವಾಗತಿಸಿದರು. ಇಂತಹ ಐತಿಹಾಸಿಕ ನಿರ್ಧಾರದ ದಿನವನ್ನು ‘ಸಂಭ್ರಮ’ವಾಗಿ ಆಚರಿಸುತ್ತಿದ್ದೇವೆ’ ಎಂದರು.
‘ಇದರಿಂದ ವಿಶ್ವವೇ ಭಾರತದತ್ತ ತಿರುಗಿ ನೋಡಿತು. ನಕಲಿ ನೋಟುಗಳು ಕಡಿಮೆಯಾಯಿತು’ ಎಂದರು.

ಯುವ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ನಂಜುಡೇಶ್ವರ ಕಳ್ಳೇರ ನೇತೃತ್ವ ವಹಿಸಿದ್ದರು. ಪಕ್ಷದ ಮುಖಂಡರಾದ ಸಿದ್ದರಾಜ ಕಲಕೋಟಿ, ನಿರಂಜನ ಹೇರೂರ, ಮುತ್ತಯ್ಯ ಕಿತ್ತೂರಮಠ, ಶಿವರಾಜ ಹರಿಜನ, ಮಾಲತೇಶ ಜಾಧವ, ಈರಪ್ಪ ಲಮಾಣಿ, ಪರಮೇಶ್ವರ ಮೇಗಳಮನಿ, ಶ್ರೀಪಾದ ಬೆಟಗೇರಿ, ಮಲ್ಲೇಶಪ್ಪ ಹರಿಜನ, ಸುರೇಶ ದೊಡ್ಡಮನಿ, ಪ್ರಸನ್ನ ಕುಮಾರ ಸಜ್ಜನ ಶೆಟ್ಟರ, ಹನುಮಂತಪ್ಪ ದೇವಗಿರಿ, ಪ್ರಭು ಹಿಟ್ನಳ್ಳಿ, ಪ್ರಕಾಶ ಉಜನಿಕೊಪ್ಪ, ವೆಂಕಟೇಶ ದೈವಜ್ಞ, ಮಂಜುನಾಥ ಮಡಿವಾಳರ, ರಮೇಶ ಪಾಲನಕರ, ಸಂತೋಷ ಆಲದಕಟ್ಟಿ, ವರುಣ ಆನವಟ್ಟಿ, ರಾಮು ಮಾಳಗಿ, ವಿಜಯಕುಮಾರ ಚಿನ್ನಿಕಟ್ಟಿ, ಕರಬಸಪ್ಪ ಹಳದೂರ, ಲತಾ ಬಡ್ನಿಮಠ, ರೇಣುಕಾ ಮೇಲ್ಮುರಿ, ಚನ್ನಪ್ಪ ಪಾಟೀಲ, ಪಾರ್ವತಿ ಪಾಟೀಲ, ರಾಜೇಶ್ವರಿ ಸರಾವರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.