ADVERTISEMENT

ಗರಿಗೆದರಿದ ಮೇವು ಸಂಗ್ರಹ ಚಟುವಟಿಕೆ

ಭತ್ತದ ಹುಲ್ಲಿಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 6:07 IST
Last Updated 10 ಜನವರಿ 2017, 6:07 IST
-ಕೆ.ಎಚ್.ನಾಯಕ
*
 
ಹಿರೇಕೆರೂರ: ರೈತರು ತಮ್ಮ ಜಾನುವಾರುಗಳಿಗೆ ಮೇವು ಸಂಗ್ರಹಿಸುವ ಚಟುವಟಿಕೆ ತಾಲ್ಲೂಕಿನಲ್ಲಿ ಗರಿಗೆದರಿದೆ. 
 
ಸ್ಥಳೀಯವಾಗಿ ಗೋವಿನ ಜೋಳದ ಸೊಪ್ಪೆ, ತೊಗರಿ ಹೊಟ್ಟು ಲಭ್ಯವಿದೆ. ಆದರೆ, ಗೋವಿನ ಜೋಳದ ಸೊಪ್ಪೆಗೆ ಹೋಲಿಸಿದರೆ ಭತ್ತದ ಹುಲ್ಲು ಜಾನುವಾರುಗಳಿಗೆ ಉತ್ತಮ ಎಂಬ ಭಾವನೆ ರೈತರಲ್ಲಿದ್ದು, ಭತ್ತದ ಹುಲ್ಲಿನ ಖರೀದಿ ಭರಾಟೆ ಜೋರಾಗಿದೆ.
 
ಸಮೀಪದ ಶಿಕಾರಿಪುರ, ಸೊರಬ, ಹೊನ್ನಾಳಿ ಮತ್ತಿತರ ಕಡೆಯಿಂದ ನಿತ್ಯವೂ ಹತ್ತಾರು ಟ್ರ್ಯಾಕ್ಟರ್‌ಗಳಷ್ಟು ಭತ್ತದ ಹುಲ್ಲು ತಾಲ್ಲೂಕಿನ ಹಳ್ಳಿಗಳನ್ನು ಸೇರುತ್ತಿದೆ. ಹರಿಹರ ತಾಲ್ಲೂಕು ತುಂಗಭದ್ರಾ ನದಿ ಅಚ್ಚುಕಟ್ಟು ಪ್ರದೇಶದ ಭತ್ತದ ಹುಲ್ಲು ಕೂಡ ತಾಲ್ಲೂಕಿಗೆ ಬರುತ್ತಿದೆ. ಹಿರೇಬೂದಿಹಾಳ, ಆಲದಗೇರಿ ಮುಂತಾದ ಗ್ರಾಮಗಳಿಗೆ ಹುಲ್ಲು ತಂದು ಇಲ್ಲಿ ಮಾರುತ್ತಿರುವ ದೃಶ್ಯ ಕಂಡು ಬಂತು.
 
‘ನಾವು ಭತ್ತದ ಹುಲ್ಲು ತರಬೇಕಾದರೆ 8–10 ಆಳುಗಳನ್ನು ಅಣಿ ಮಾಡಬೇಕು. ಟ್ರ್ಯಾಕ್ಟರ್ ಬಾಡಿಗೆ ಪಡೆದು ಹುಲ್ಲು ಹುಡುಕಿ ಹೋಗಿ, ತರಬೇಕು. ಇದಕ್ಕೆ ಎರಡು 
ದಿನ ಬೇಕಾಗುತ್ತದೆ. ನಮ್ಮ ಊರಿನಲ್ಲಿಯೇ ಒಳ್ಳೆ ಗುಣಮಟ್ಟದ ಹುಲ್ಲು ತಂದು ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ  ಯಾವುದೇ ಜಂಜಾಟ ಬೇಡ ಎಂದು ಇಲ್ಲಿಯೇ ಹುಲ್ಲು ಖರೀದಿಸುತ್ತಿದ್ದೇವೆ’ ಎಂದು ತಾಲ್ಲೂಕಿನ ಹಿರೇಬೂದಿಹಾಳ ಗ್ರಾಮದಲ್ಲಿ ಹುಲ್ಲು ಖರೀದಿಸುತ್ತಿದ್ದ ನಾಗಪ್ಪ ಕಲ್ಲಹನುಮಣ್ಣನವರ ತಿಳಿಸಿದರು.
 
‘ಕಳೆದ ಕೆಲವು ದಿನಗಳಿಂದ ನಿತ್ಯ ಇಲ್ಲಿ ಭತ್ತದ ಹುಲ್ಲು ತಂದು ಮಾರಾಟ ಮಾಡುತ್ತಿದ್ದೇವೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ನಮಗೂ ಸ್ವಲ್ಪ ಲಾಭ ಸಿಗುತ್ತದೆ’ ಎನ್ನುತ್ತಾರೆ ಹುಲ್ಲು ಮಾರಾಟಕ್ಕೆ ತಂದಿದ್ದ ಹರಿಹರ ತಾಲ್ಲೂಕು ನಂದಿತಾವರಗಿ ಗ್ರಾಮದ ಪ್ರಕಾಶ.
 
‘ತಾಲ್ಲೂಕನ್ನು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಪಕ್ಕದ ಜಿಲ್ಲೆಗಳಿಗೆ ಮೇವು ಮಾರಾಟ ಮಾಡುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಕೊಳವೆಬಾವಿ ಹೊಂದಿರುವ ರೈತರಿಗೆ ಗೋವಿನ ಜೋಳದ ಮೇವಿನ ಬೀಜಗಳನ್ನು ವಿತರಣೆ ಮಾಡಲಾಗಿದೆ’ ಎಂದು ಪಶುಸಂಗೋಪನಾ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.