ADVERTISEMENT

‘ಪ್ರತಿ ಟನ್‌ ಕಬ್ಬಿಗೆ ₹3,100 ಕೊಡಿಸಿ’

ಸಂಗೂರು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ರೈತ ಮುಖಂಡ ಶಿವಾನಂದ ಗುರುಮಠ ಸವಾಲು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 9:32 IST
Last Updated 23 ಮಾರ್ಚ್ 2017, 9:32 IST
‘ಪ್ರತಿ ಟನ್‌ ಕಬ್ಬಿಗೆ ₹3,100 ಕೊಡಿಸಿ’
‘ಪ್ರತಿ ಟನ್‌ ಕಬ್ಬಿಗೆ ₹3,100 ಕೊಡಿಸಿ’   

ಹಾವೇರಿ: ‘ಸಂಗೂರು ಸಕ್ಕರೆ ಕಾರ್ಖಾನೆಗೆ 2016–17ನೇ ಸಾಲಿನಲ್ಲಿ ರೈತರು ಪೂರೈಸಿದ ಪ್ರತಿ ಟನ್‌ ಕಬ್ಬಿಗೆ ₹3,100  ದರವನ್ನು ಆಡಳಿತ ಮಂಡಳಿ ಕೊಡಿಸಬೇಕು. ಆ ಮೂಲಕ ಆಡಳಿತ ಮಂಡಳಿ ರೈತರ ಪರವಾಗಿದೆ ಎಂಬುದನ್ನು ಸಾಬೀತು ಪಡಿಸಬೇಕು’ ಎಂದು ಕರ್ನಾಟಕ ಪ್ರದೇಶ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಿವಾನಂದ ಗುರುಮಠ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟನ್ ಕಬ್ಬಿಗೆ ₹3 ಸಾವಿರ ನೀಡಬೇಕು ಎಂದು ಒತ್ತಾ ಯಿಸಿ, ಈ ಹಂಗಾಮಿನ ಆರಂಭದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್‌, ಟ್ರಕ್‌ಗಳನ್ನು ತಡೆದು  ಪ್ರತಿಭಟನೆ ನಡೆಸಿದ್ದರು. ದರ ಘೋಷಿಸದೇ ಕಬ್ಬು ನುರಿಸಲು ಬಿಡುವುದಿಲ್ಲ ಎಂದು 4 ದಿನ ತಡೆ ಮಾಡಿದ್ದರು.

ಐದನೇ ದಿನ ರಾತ್ರಿ 11ಕ್ಕೆ ಕಾರ್ಖಾನೆಯವರ ಜೊತೆ ಶಾಮೀಲಾಗಿ ₹2,625 ಮೊದಲ ಕಂತು ಪಡೆಯಲು ಒಪ್ಪಿಕೊಂಡಿದ್ದರು. ಅನಂತರ, ಇತರ ಕಾರ್ಖಾನೆಯವರು ನೀಡುವ ದರವನ್ನೇ ನೀಡಬೇಕು ಎಂದು ಹೇಳಿಕೆ ನೀಡಿದ್ದರು. ಹೀಗೆ ವಿಭಿನ್ನ ನಿಲುವು ತಳೆಯುವ ಆಡಳಿತ ಮಂಡಳಿ ಸದಸ್ಯರು, ಟನ್‌ ಕಬ್ಬಿಗೆ ₹3,100 ದರವನ್ನು  ಕೊಡಿಸುವ ಮೂಲಕ ರೈತರ ಪರವಾದ ಕಾಳಜಿ ಯನ್ನು ಸಾಬೀತು ಪಡಿಸಬೇಕು’ ಎಂದು ಸವಾಲು ಹಾಕಿದರು.

‘ಈ ಹಂಗಾಮಿನಲ್ಲಿ ರೈತರು ಕಬ್ಬು ಪೂರೈಸಿ 4 ತಿಂಗಳು ಕಳೆದಿವೆ. ಆದರೆ, ಸಂಗೂರು ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರು ಜಿ.ಎಂ. ಶುಗರ್ಸ್ ಕಂಪೆನಿಯು ಇನ್ನೂ ಮೊದಲ ಕಂತಿನ ಹಣವನ್ನೇ ನೀಡಿಲ್ಲ. 2015–16ನೇ ಸಾಲಿನಲ್ಲಿ ರೈತರಿಗೆ ಕೇವಲ ₹2,315 ದರ ನೀಡುವ ಮೂಲಕ  ₹70ರಿಂದ 80 ಕೋಟಿ ಲಾಭ ಮಾಡಿಕೊಂಡಿದ್ದಾರೆ. ಈ ಬಾರಿ ಸಕ್ಕರೆ ದರವು ₹42 ಇದೆ. ಹೀಗಾಗಿ ₹3,100 ಕೊಡಲೇಬೇಕು’ ಎಂದು ಆಗ್ರಹಿಸಿದರು.

‘ಸಂಗೂರು ಸಕ್ಕರೆ ಕಾರ್ಖಾನೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಕುಟುಂಬದ ಜಿ.ಎಂ. ಶುಗರ್ಸ್‌ ಗುತ್ತಿಗೆ ಪಡೆದಿದೆ. ಅವರು ಹಿರೇಕೆರೂರಿನ ಬಸವೇಶ್ವರ ಸಕ್ಕರೆ ಕಾರ್ಖಾನೆಯ ಆರಂಭಕ್ಕೆ ಪೂಜೆ ಯನ್ನೂ ಮಾಡಿದ್ದಾರೆ. ಆದರೆ, ಇಲ್ಲಿನ ರೈತರಿಗೆ ನ್ಯಾಯಯುತ ದರವನ್ನು ನೀಡುತ್ತಿಲ್ಲ. ಹೀಗಾಗಿ ಆಡಳಿತ ಮಂಡಳಿಯೇ ಈ ದರವನ್ನು ರೈತರಿಗ ಕೊಡಿಸಬೇಕು’ ಎಂದು ಒತ್ತಾಯಿಸಿದ ಅವರು, ‘ರೈತ ರನ್ನು ನಿರ್ಲಕ್ಷಿಸಿದ ಪರಿಣಾಮವೇ ಸಚಿವ ಸ್ಥಾನವನ್ನೂ ಕಳೆದುಕೊಂಡಿದ್ದಾರೆ’ ಎಂದರು. 

ಬಜೆಟ್: ‘ಈ ಬಾರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಜನಪರವಾಗಿಲ್ಲ. ಇದು ಢೋಂಗಿ ಸಮಾಜವಾದಿಯ ರೈತ ವಿರೋಧಿ ಬಜೆಟ್‌ಆಗಿದೆ’ ಎಂದು ಖಂಡಿಸಿದರು.

‘ಜಿಲ್ಲೆಯ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಆದರೆ, ಕೆಲವು ದಶಕ ಗಳಿಂದ ರಾಜಕಾರಣ ಮಾಡುತ್ತಿರು ವವರ ಆಸ್ತಿ ಮಾತ್ರ ಹೆಚ್ಚುತ್ತಲೇ ಇದೆ. ಈ ಮುಖಂಡರು ತಮ್ಮ ಆಸ್ತಿಯ ಮೂಲವನ್ನು ಬಹಿರಂಗ ಪಡಿಸಲಿ’ ಎಂದು ಸವಾಲು ಹಾಕಿದರು.

‘ಈಗಾಗಲೇ ಜನರಿಗೆ ಉಸುಕು, ನೀರು, ಕಟ್ಟಿಗೆ, ಖನಿಜಗಳು ಸಿಗದಾಗಿವೆ. ಜಿಲ್ಲೆಯ ರಾಜಕಾರಣಿಗಳ ಧೋರಣೆ ಇದೇ ರೀತಿಯಲ್ಲಿ ಮುಂದುವರಿದರೆ, ‘ಹಾವೇರಿ ಮರುಭೂಮಿ’ ಆಗಲಿದೆ’ ಎಂದರು.

ಚೀನಾ ಮಾದರಿ: ‘ಕಮ್ಯುನಿಸ್ಟ್ ಆಡ ಳಿತದ ಚೀನಾ ದೇಶ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದ್ದು, ಹಳ್ಳಿಗಳು ಸ್ವಾವಲಂಬನೆ ಹೊಂದುತ್ತಿವೆ’ ಎಂದ ಅವರು, ‘ಚೀನಾದವರು ಹಾವು, ಕಪ್ಪೆ, ಮಾಂಸ ತಿನ್ನುತ್ತಾರೆ ಎಂದು ನಮ್ಮ ದೇಶದ ನಾಯಕರು ಲೇವಡಿ ಮಾಡು ತ್ತಾರೆ. ಆದರೆ, ಇವರು ದೇಶವನ್ನೇ ಕೊಳ್ಳೆ ಹೊಡೆದು ತಿನ್ನುತ್ತಿದ್ದಾರೆ’ ಎಂದರು. ಸಂಘದ ಉಪಾಧ್ಯಕ್ಷ ಶಿವಯೋಗಿ ಬೆನ್ನೂರ ಇದ್ದರು.

*
ದಿನಕ್ಕೊಂದು ನಿಲುವಿನ ಮೂಲಕ ರೈತರನ್ನು ಹಾದಿ ತಪ್ಪಿಸುವ ಬದಲಾಗಿ, ಸಂಗೂರು ಸಕ್ಕರೆ ಕಾರ್ಖಾನೆ  ಆಡಳಿತ ಮಂಡಳಿ ಕಬ್ಬಿಗೆ ಸೂಕ್ತ ದರ ಕೊಡಿಸಲಿ.
-ಶಿವಾನಂದ ಗುರುಮಠ,
ರೈತರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.