ADVERTISEMENT

‘ಬೇಕಾಬಿಟ್ಟಿ ಕೆಲಸ ಮಾಡುವ ಸಿಬ್ಬಂದಿ’

ಪೌರಕಾರ್ಮಿಕರ, ಸ್ವಚ್ಛತಾ ನಿರೀಕ್ಷಕರ ಹಾಜರಿ ಪರಿಶೀಲನೆ: ಸಚಿವ ಲಮಾಣಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 5:52 IST
Last Updated 12 ಜುಲೈ 2017, 5:52 IST

ಹಾವೇರಿ: ‘ನಗರದ ಸ್ವಚ್ಛತೆ ಕಾಯ್ದುಕೊಳ್ಳುವ ಬಗ್ಗೆ ಪೌರಕಾರ್ಮಿಕರು, ಸ್ವಚ್ಛತಾ ನಿರೀಕ್ಷಕರು ಹಾಗೂ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹರಿಹಾಯ್ದರು.

ರಾಜೇಂದ್ರ ನಗರ, ಸುಭಾಸ್‌ ಸರ್ಕಲ್‌, ರೈಲ್ವೆ ನಿಲ್ದಾಣ ರಸ್ತೆ, ನಾಗೇಂದ್ರನಮಟ್ಟಿ, ಎಂ.ಜಿ.ರಸ್ತೆ, ನಡುವಿನಮಠದ ಓಣಿ, ಪುರದ ಓಣಿ ಸೇರಿದಂತೆ ವಿವಿಧ ವಾರ್ಡ್‌ಗಳಿಗೆ ಮಂಗಳವಾರ ಬೆಳಿಗ್ಗೆ 5.30ರ ಸುಮಾರಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ ಸಚಿವರು, ಪೌರ ಕಾರ್ಮಿಕರ ಹಾಗೂ ಸ್ವಚ್ಛತಾ ನಿರೀಕ್ಷಕರ ಹಾಜರಾತಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬೆಳಿಗ್ಗೆ ಪರಿಶೀಲನೆ ನಡೆಸಿದ ವೇಳೆ 121 ಪೌರಕಾರ್ಮಿಕರ ಪೈಕಿ ಕೇವಲ 25 ಮಂದಿ ಇದ್ದರು. ನಾಲ್ಕೂ ಸ್ವಚ್ಛತಾ ನಿರೀಕ್ಷಕರು ಗೈರಾಗಿದ್ದರು. ಪ್ರತಿನಿತ್ಯ ಬೆಳಿಗ್ಗೆ 5.30ಕ್ಕೆ ಹಾಜರಾಗಬೇಕಿದ್ದ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ನೀರಿಕ್ಷರು ಬೆಳಿಗ್ಗೆ 8 ಗಂಟೆಯಾದರೂ ಬರಲಿಲ್ಲ. ಕೆಲವು ಪೌರಕಾರ್ಮಿಕರು ‘ವಾಟ್ಸ್ ಆ್ಯಪ್‌’,  ‘ಫೇಸ್‌ಬುಕ್‌’ ಎಂದು ರಸ್ತೆ ಬದಿಯಲ್ಲಿ ಮೊಬೈಲ್‌ ಹಿಡಿದು ಕುಳಿತ್ತಿ ದ್ದರೆ, ತಡವಾಗಿ ಬಂದವರು ಕೆಲ ಹೊತ್ತು ನಿಂತು ವಾಪಸ್‌ ಮನೆಗೆ ಹೋಗಿದ್ದರು. ಇವರಿಗೆ ನಗರಸಭೆ ಕೆಲಸವು ಬೇಕಾಬಿಟ್ಟಿಯಾಗಿದೆ’ ಎಂದು ಗರಂ ಆದರು.

ADVERTISEMENT

ನಗರ ವೀಕ್ಷಣೆ ಮುಗಿಸಿ ನಗರಸಭೆ ಕಚೇರಿಗೆ ಬಂದ ಸಚಿವರು, ಅಧಿಕಾರಿಗಳ ಹಾಜರಾತಿ ಪರಿಶೀಲಿಸಿದರು. ನಗರಸಭೆಯಲ್ಲೂ 12 ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದಿರಲಿಲ್ಲ. ಕೆಲವರು ಗೈರಾಗಿದ್ದರು. ‘ಹೀಗಾದರೆ ನಗರಸಭೆಯ ಕೆಲಸ ಮಾಡುವವರು ಯಾರು? ಹಿಂದೆ ಇದ್ದ ಪೌರಾಯುಕ್ತರೂ ಹೊರಟು ಹೋಗಿ ದ್ದಾರೆ’ ಎಂದರು.

ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದ, ಗೈರಾದ ಅಧಿಕಾರಿಗಳು ಹಾಗೂ ಸ್ವಚ್ಛತಾ ನಿರೀಕ್ಷಕರ ವಿವರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಸೂಕ್ತ ಕ್ರಮಕ್ಕೆ ಸೂಚಿಸುವುದಾಗಿ ಸಚಿವರು ತಿಳಿಸಿದರು.

‘ಪುರದ ಓಣಿ ಹಾಗೂ ರೈಲ್ವೆ ನಿಲ್ದಾಣ ರಸ್ತೆಯ ಒಳಚರಂಡಿಗಳು ತ್ಯಾಜ್ಯದಿಂದ ಕಟ್ಟಿಕೊಂಡಿವೆ. ಅವುಗಳನ್ನು ತಕ್ಷಣವೇ ಸರಿಪಡಿಸಬೇಕು.  ₹1 ಕೋಟಿ ವೆಚ್ಚದಲ್ಲಿ ನಗರದ ರೈಲ್ವೆ ಸೇತುವೆಯಿಂದ ಗುತ್ತಲ ರಸ್ತೆಯ ಮಾಲತೇಶ ಸಾ ಮಿಲ್‌ ತನಕ ರಾಜಕಾಲುವೆ ನಿರ್ಮಿಸಲಾಗುವುದು’ ಎಂದರು.

‘ಎಲ್ಲ ಸೌಲಭ್ಯಗಳನ್ನು ಸರ್ಕಾರದಿಂದ ನೀಡಿದ್ದೇವೆ. ಆದರೆ, ಕೆಲಸ ಮಾಡದೇ ಕಾಲ ಹರಣ ಮಾಡುತ್ತಿರುವ ಅಧಿಕಾರಿಗಳಿಂದ ನಗರ ಅಭಿವೃದ್ಧಿ ಕಾಣುವುದಾದರೂ ಹೇಗೆ?’ ಎಂದರು.

ಪ್ರಭಾರ ಪೌರಾಯುಕ್ತ ಬಸವರಾಜ ಸೋಮಣ್ಣನವರ ಮಾತನಾಡಿ, ‘ಪೌರಕಾರ್ಮಿಕರ ಹೊಸ ಟೆಂಡರ್‌ ಪ್ರಕ್ರಿಯೆ 5 ತಿಂಗಳ ಹಿಂದೆಯೇ ನಡೆಯಬೇಕಾಗಿತ್ತು. ಕಾರಣಾಂತರದಿಂದ ವಿಳಂಬವಾಗಿದೆ. ಈಗ ಹೊಸ ಟೆಂಡರ್‌ ಕರೆಯಲಾಗಿದೆ. ಸದ್ಯ ಕೆಲಸ ಮಾಡುತ್ತಿರುವವರನ್ನು ಮುಂದುವರಿಸಲಾಗಿದೆ’ ಎಂದರು. ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲ ಗಣ್ಣನವರ, ಸದಸ್ಯರಾದ ರತ್ನಾ ಭೀಮ ಕ್ಕನವರ, ಐ.ಯು.ಪಠಾಣ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.