ADVERTISEMENT

ಮಳೆ: ರೈಲು ಹಳಿಗೆ ಬಿದ್ದ ಮರ

​ಪ್ರಜಾವಾಣಿ ವಾರ್ತೆ
Published 18 ಮೇ 2015, 6:26 IST
Last Updated 18 ಮೇ 2015, 6:26 IST

ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ಸಂಜೆ ಸುರಿದ ಗಾಳಿ– ಮಳೆಗೆ ರೈಲು ಹಳಿಗೆ ಮರಬಿದ್ದು, ಕೆಲಹೊತ್ತು ಸಂಚಾರ ವ್ಯತ್ಯಯಗೊಂಡರೆ, ಸಿಡಿಲಿಗೆ ಆಕಳು ಹಾಗೂ ಕುರಿ ಸತ್ತ ಘಟನೆಗಳು ವರದಿಯಾಗಿದೆ.

ಕೆಲವು ದಿನಗಳಿಂದ ಮುಂಗಾರಿನಂತೆ ಅನುಭವ ನೀಡುತ್ತಿರುವ ಮಳೆಯು ಭಾನುವಾರ ಸಂಜೆ ಧಾರಾಕಾರವಾಗಿ ಸುರಿಯಿತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆಯ ವೇಳೆಗೆ ಏಕಾಏಕಿ ಗಾಳಿ, ಸಿಡಿಲು, ಗುಡುಗು ಸಹಿತ ಮಳೆ ಬಂತು. ಸುಮಾರು ಅರ್ಧ ತಾಸು ಎಡೆಬಿಡದೇ ಸುರಿದ ಮಳೆಗೆ ರಸ್ತೆಯಲ್ಲಿ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿತು. ಸಂಚಾರದಲ್ಲಿ ಹಲವು ವಾಹನಗಳು ರಸ್ತೆಯಲ್ಲಿ ಸಾಲು ಸಾಲಾಗಿ ನಿಂತಿರುವುದು ಕಂಡುಬಂದಿತು. ಹಲವೆಡೆ ರೆಂಬೆಕೊಂಬೆಗಳು ಮುರಿದು ಬಿದ್ದಿದ್ದು, ವಿದ್ಯುತ್ ವ್ಯತ್ಯಯಗೊಂಡಿತು. 

ಕರ್ಜಗಿ ಮತ್ತು ಸವಣೂರ ರೈಲು ನಿಲ್ದಾಣ ಮಧ್ಯೆದ ಕಳಸೂರ ಬಳಿ ರೈಲು ಹಳಿಗೆ ಮರ ಬಿದ್ದ ಪರಿಣಾಮ ಕೆಲಕಾಲ ರೈಲು ಸಂಚಾರದಲ್ಲಿ ವಿಳಂಬವಾಗಿದೆ. ಹುಬ್ಬಳ್ಳಿ– ಅರಸೀಕರೆಗೆ ಮತ್ತು ಬೆಂಗಳೂರು –ಬೆಂಗಳೂರು ಪ್ಯಾಸೆಂಜರ್ ಸ್ವಲ್ಪ ವಿಳಂಬಗೊಂಡಿತು.  ಘಟಮಾ ಸ್ಥಳಕ್ಕೆ ಬಂದ ಗ್ಯಾಂಗ್‌ಮನ್‌ ಹಳಿಗೆ ಬಿದ್ದ ಮರವನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಲ್ಲೂಕಿನ ನಾಗನೂರಿನಲ್ಲಿ ಮಳೆಗೆ ಮರದಡಿಯಲ್ಲಿ ನಿಂತಿದ್ದ ಸಂಗಪ್ಪ ಹೆಸಳ್ಳಿ ಎಂಬವರ ಆಕಳೊಂದು ಸಿಡಿಲಿಗೆ ಸತ್ತರೆ, ಕೊಳ್ಳೂರು ಬಳಿ ಕೆಲವು ಕುರಿಗಳು ಸಿಡಿಲಿಗೆ ಸಾವಿಗೀಡಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.