ADVERTISEMENT

ಶಕ್ತಿಶಾಲಿ ಆಟಕ್ಕೆ ಬೇಕಿದೆ ಪ್ರೋತ್ಸಾಹ,ಬಲ

ರಾಜ್ಯಮಟ್ಟದ ‘ಖೇಲೋ ಇಂಡಿಯಾ’ ಕಬಡ್ಡಿ ಪಂದ್ಯಾಟ; ಜಿ.ಪಂ. ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 6:10 IST
Last Updated 13 ಜನವರಿ 2017, 6:10 IST
ಹಾವೇರಿ: ‘ಕಬಡ್ಡಿ ಶಕ್ತಿಶಾಲಿ ಆಟ, ಈ ಆಟಕ್ಕೆ ಹೆಚ್ಚಿನ ಪ್ರೋತ್ಸಾಹದ ಮೂಲಕ ಶಕ್ತಿ ತುಂಬ ಬೇಕು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಹೇಳಿದರು.
 
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕೇಂದ್ರ ಕ್ರೀಡಾ ಸಚಿವಾಲಯ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳ ಸಹಯೋಗದಲ್ಲಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ‘ಕಬಡ್ಡಿ ಖೇಲೋ ಇಂಡಿಯಾ’ ಕ್ರೀಡಾಕೂಟವನ್ನು ಬುಧವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
 
‘ನೆಲದ ಆಟವಾದ ಕಬಡ್ಡಿ ಬೆಳವಣಿಗೆಗೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬರಲಾಗಿದೆ. ರಾಷ್ಟ್ರ, ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಗಳ ಆತಿಥ್ಯ ವಹಿಸಿದ ಹೆಮ್ಮೆ ಹಾವೇರಿಗೆ ಇದೆ. ಸೋಲು ಗೆಲುವು ಸಹಜ. ಗೆಲುವಿನ ಗುರಿಯೊಂದಿಗೆ ಕ್ರೀಡಾ ನಿಯಮಗಳಿಗೆ ಬದ್ಧವಾಗಿ ಆಟವಾಡಬೇಕು. ಸೋತಾಗ ನಿರಾಶರಾಗದೇ, ‘ಸೋಲೆ ಗೆಲುವಿನ ಸೋಪಾನ’ಎಂದರು. 
 
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ‘ಭಾರತದ ಪುರಾತನ ಆಟವಾದ ಕಬಡ್ಡಿಗೆ ಈಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಕಾರ್ಪೋರೇಟ್ ಸಂಸ್ಥೆಗಳು ಕಬಡ್ಡಿ ಆಟಕ್ಕೆ ಪ್ರಾಯೋಜಕತ್ವ ನೀಡುತ್ತಿವೆ. ಕಬಡ್ಡಿ ಆಟ ಇನ್ನೂ ಹೆಚ್ಚಿನ ಬೆಳವಣಿಗೆ ಹೊಂದಬೇಕಾಗಿದೆ’ ಎಂದರು.
 
‘ಹಾವೇರಿ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ರಾಜ್ಯ ಸರ್ಕಾರವು ₹1 ಕೋಟಿ ಅನುದಾನ ಮಂಜೂರು ಮಾಡಿದೆ. ಪ್ರೇಕ್ಷಕರ ಗ್ಯಾಲರಿ, ವಾಯು ವಿಹಾರಿಗಳಿಗೆ ವಾಕಿಂಗ್‌ ಪಾತ್ ಮತ್ತು ಕ್ರೀಡಾಂಗಣದ ಸಮಗ್ರ ಸೌಂದರ್ಯೀಕರಣದ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು. 
 
ನಗರಸಭೆ ಅಧ್ಯಕ್ಷೆ ಪಾರ್ವತಮ್ಮ ಹಲಗಣ್ಣನವರ, ಉಪ ವಿಭಾಗಾಧಿಕಾರಿ ಬಸವರಾಜ ಸೋಮಣ್ಣನವರ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ  ಮಮತಾಜಬಿ ತಡಸ, ಹಿರಿಯ ಕ್ರೀಡಾಪಟು ರವಿ ಶೆಟ್ಟೆಣ್ಣನವರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷ್ಮೀ, ಜಿಲ್ಲಾ ಹಾಕಿ ಅಸೋಷನ್ ಅಧ್ಯಕ್ಷ ರಮೇಶ ಆನವಟ್ಟಿ, ವಾರ್ತಾಧಿಕಾರಿ  ಡಾ.ಬಿ.ಆರ್. ರಂಗನಾಥ ಇದ್ದರು. 
 
ತಂಡಗಳು: ಕ್ರೀಡಾಕೂಟದಲ್ಲಿ ವಿಜಯಪುರ, ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ನಗರ, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಕೊಪ್ಪಳ, ಮೈಸೂರು, ಮಂಡ್ಯ, ಗದಗ, ಹಾಸನ, ಚಿಕ್ಕಮಗಳೂರು, ರಾಮನಗರ, ಧಾರವಾಡ, ಚಿಕ್ಕಬಳ್ಳಾಪುರ, ಬೆಳಗಾವಿ, ದಾವಣಗೆರೆ, ದಕ್ಷಿಣ ಕನ್ನಡ, ಯಾದಗಿರಿ, ರಾಯಚೂರು, ಚಿತ್ರದುರ್ಗ, ಬಾಗಲಕೋಟೆ ತಂಡಗಳು ಪಾಲ್ಗೊಂಡಿವೆ. 
 
14  ಮತ್ತು 17 ವಯೋಮಾನದೊಳಗಿನ ಬಾಲಕ ಮತ್ತು ಬಾಲಕಿಯರು ಸೇರಿದಂತೆ ಒಟ್ಟು 4 ವಿಭಾಗಗಳಲ್ಲಿ ಪೈಪೋಟಿ ನಡೆಯುತ್ತಿವೆ.
 
**
ರಾಜ್ಯ ಸರ್ಕಾರವು ₹1 ಕೋಟಿ ಅನುದಾನದಲ್ಲಿ ಹಾವೇರಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸುತ್ತಿದೆ
-ಸಂಜೀವಕುಮಾರ ನೀರಲಗಿ
ಅಧ್ಯಕ್ಷರು, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.