ADVERTISEMENT

‘ಸಂಪುಟದ ಅಂಗಳದಲ್ಲಿ ಆಣೂರು ಬಹುಗ್ರಾಮ ನೀರು ಯೋಜನೆ’

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 4:14 IST
Last Updated 10 ಸೆಪ್ಟೆಂಬರ್ 2017, 4:14 IST

ಬ್ಯಾಡಗಿ: ‘ತಾಲ್ಲೂಕಿನ ಆಣೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪುಟದ ಸಭೆಯ ಮುಂದಿದ್ದು ಸಭೆಯ ಅನುಮೋದನೆ ಪಡೆದ ಬಳಿಕ ಟೆಂಡರ್‌ ಪ್ರಕ್ರಿಯೆ ಆರಂಭಗೊಳ್ಳಲಿದೆ’ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಸದರಿ ಯೋಜ ನೆಗೆ ತಾಂತ್ರಿಕ ಮಂಜೂರಾತಿ ಸಿಕ್ಕಿದ್ದು, ಪ್ರಕ್ರಿಯೆತಳು ಅಂತಿಮ ಹಂತದಲ್ಲಿವೆ’ ಎಂದು ತಿಳಿಸಿದರು.‘ಈ ಯೋಜನೆ ಕಾರ್ಯಗತಗೊಂಡರೆ ಬ್ಯಾಡಗಿ ವಿಧಾನ ಸಭಾ ಕ್ಷೇತ್ರದ ರಾಣೆಬೆನ್ನೂರು ಮತ್ತು ಬ್ಯಾಡಗಿ ತಾಲ್ಲೂಕಿನ ಹಳ್ಳಿಗಳ
ಕುಡಿಯುವ ನೀರಿನ ಬವಣೆ ನೀಗಲಿದೆ. ಮೊದಲ ಹಂತದಲ್ಲಿ ಅಸುಂಡಿ, ಬೆನಕನಕೊಂಡ, ಸುಣಕಲ್‌ ಬಿದರಿ, ಸರವಂದ ಉಕ್ಕುಂದ, ಬೆಳಕೇರಿ ಸೇರಿದಂತೆ 17 ಕೆರೆಗಳನ್ನು ತುಂಬಿಸಲಾಗುವುದು’ ಎಂದು ವಿವರಿಸಿದರು.

‘ಆಣೂರು, ಶಿಡೇನೂರ, ನಂದಿಹಳ್ಳಿ, ಅಂಗರಗಟ್ಟಿ ಕೆರೆಗಳನ್ನು ಇದರಲ್ಲಿ ಸೇರ್ಪಡೆ ಮಾಡುವಂತೆ ಸ್ಥಳೀಯ ಗ್ರಾಮಸ್ಥರ ಜೊತೆಗೆ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಆಣೂರು ಎತ್ತರ ಪ್ರದೇಶದಲ್ಲಿ ಇರುವುದರಿಂದ ಮೊದಲು ಸುಣಕಲ್‌ ಬಿದರಿ ಕೆರೆ ತುಂಬಿಸಿ ಎರಡನೇ ಹಂತದಲ್ಲಿ ಅಲ್ಲಿಂದ ಲಿಫ್ಟ್‌ ಮಾಡಿಸಿ ಆಣೂರು, ಶಿಡೇನೂರ, ನಂದಿಹಳ್ಳಿ, ಅಂಗರಗಟ್ಟಿ ಕೆರೆಗಳನ್ನು ತುಂಬಿಸಲಾಗುವುದೆಂದು ಭರವಸೆ ನೀಡಿದ್ದಾರೆ. ಹೀಗಾಗಿ 2ನೇ ಹಂತದಲ್ಲಿ ಕೆರೆಗಳನ್ನು ತುಂಬಿಸಲು ಆದ್ಯತೆ ನೀಡಲಾಗುವುದು’ ಎಂದರು.

ADVERTISEMENT

ಪಾಲಿಟೆಕ್ನಿಕ್‌ ಮುಂದಿನ ವರ್ಷದಿಂದ ಕಾರ್ಯಾರಂಭ: ‘ಬ್ಯಾಡಗಿ ಪಟ್ಟಣಕ್ಕೆ ಪಾಲಿಟೆಕ್ನಿಕ್‌ ಕಾಲೇಜು ಮಂಜೂರಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದೆ’ ಅವರು ಹೇಳಿದರು.

‘ಅದಕ್ಕಾಗಿ ಹಂಸಭಾವಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನ ಐದು ಎಕರೆ ಜಾಗ ಗುರುತಿಸಲಾಗಿದೆ. ₹8 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ನೀಲ ನಕ್ಷೆ ರೂಪಿಸಲಾಗಿದೆ’ ಎಂದು ವಿವರಿಸಿದರು.

ಐಟಿಐ ಕಾಲೇಜು: ‘ತಾಲ್ಲೂಕಿನ ಮೋಟೆ ಬೆನ್ನೂರನಲ್ಲಿ ಕಳೆದ ಎರಡು ವರ್ಷದಿಂದ ಐಟಿಐ ಕಾಲೇಜು ಆರಂಭಗೊಂಡಿದೆ. ಗ್ರಾಮದ ಹೊರವಲಯದ ಕೋಟಿ ಗುಡ್ಡದ ಬಳಿ ಒಂದು ಎಕರೆ ಜಾಗ ಗುರುತಿ ಸಲಾಗಿದ್ದು ₹2.5ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ’ ಎಂದು ಶಾಸಕ ಶಿವಣ್ಣನವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.