ADVERTISEMENT

‘ಸೈಕಲ್‌ ಸವಾರರು ನಿರ್ಗತಿಕರು ಅಲ್ಲ’

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 8:41 IST
Last Updated 19 ಜುಲೈ 2017, 8:41 IST
‘ಕರ್ನಾಟಕದ ದರ್ಶನ’ ಸೈಕಲ್ ಜಾಥಾ ಮಂಗಳವಾರ ಹಾವೇರಿ ಜಿಲ್ಲೆಯ ಶಿಗ್ಗಾವಿ ತಲುಪಿತು
‘ಕರ್ನಾಟಕದ ದರ್ಶನ’ ಸೈಕಲ್ ಜಾಥಾ ಮಂಗಳವಾರ ಹಾವೇರಿ ಜಿಲ್ಲೆಯ ಶಿಗ್ಗಾವಿ ತಲುಪಿತು   

ಶಿಗ್ಗಾವಿ: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಸಿಬ್ಬಂದಿಯಲ್ಲಿ ಏಕತೆ ಹಾಗೂ ಆರೋಗ್ಯ  ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದರ್‌ನಿಂದ ಬೆಂಗಳೂರಿನ ತನಕ ಹಮ್ಮಿಕೊಂಡಿರುವ ‘ಕರ್ನಾಟಕದ ದರ್ಶನ’ ಸೈಕಲ್ ಜಾಥಾ ಮಂಗಳವಾರ ಹಾವೇರಿ ಜಿಲ್ಲೆಯ ಶಿಗ್ಗಾವಿ ತಲುಪಿತು.

ಗದುಗಿನಿಂದ ಸವಣೂರು ಮೂಲಕ ಶಿಗ್ಗಾವಿ ತಲುಪಿದ 52 ಜನರು ಇರುವ ತಂಡವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಂಶಿಕೃಷ್ಣ ಹಾಗೂ ಗಂಗೇಬಾವಿಯ ಮೀಸಲು ಪೊಲೀಸ್‌ ತುಕಡಿಯ ಕಮಾಂಡೆಂಟ್‌ ಎಂ.ಬಿ.ಪ್ರಸಾದ್ ನೇತೃತ್ವದ ತಂಡ ಸ್ವಾಗತಿಸಿತು.

ಈ ವೇಳೆ ಮಾತನಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರರಾವ್‌, ‘ರಾಜ್ಯ ಮೀಸಲು ಪೊಲೀಸ್‌ ಇಲಾಖೆಯು ಜನರ ರಕ್ಷಣೆಯ ಜೊತೆಗೆ ಮಾನವ ಸಂಪನ್ಮೂಲದ ಬೃಹತ್‌ ಭಂಡಾರವಾಗಬೇಕು. ಮೀಸಲು ಪೊಲೀಸ್‌ ಇಲಾಖೆಯಲ್ಲಿನ ನೌಕರರಿಗೆ ಜನಸಂಪರ್ಕದ ಕೊರತೆ ಕಾಡುತ್ತಿದೆ. ಹೀಗಾಗಿ ನೌಕರರ ಅಕಾಲಿಕ ಮರಣ, ಆತ್ಮಹತ್ಯೆ ಪ್ರಕರಣ ಘಟಿಸಿವೆ. ಇಂಥ ಮನಸ್ಥಿತಿಯನ್ನು ಬದಲಿಸಲು  ಹಾಗೂ ಕೆಎಸ್‌ಆರ್‌ಪಿಯನ್ನು ಜನಸ್ನೇಹಿ ಗೊಳಿಸಲು ಯತ್ನಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ ಮೀಸಲು ಪೊಲೀಸ್‌ ಪಡೆಯ ಒಟ್ಟು 12 ತುಕಡಿಗಳಿವೆ.  ಎರಡು ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ತುಕಡಿಗಳಿವೆ. ಮೀಸಲು ಪೊಲೀಸ್ ತರಬೇತಿ ಎರಡು ಕೇಂದ್ರಗಳಿವೆ. ರಾಜ್ಯದ ಪ್ರತಿ ಮೀಸಲು ಪೊಲೀಸ್‌ ತುಕಡಿಯಿಂದ ತಲಾ 3 ಜನರನ್ನು ಆಯ್ಕೆ ಮಾಡಿ, ಜಾಥಾದಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೆ ಕೆಲವು ತುಕಡಿಗಳ ಅಧಿಕಾರಿಗಳು, ತರಬೇತಿ ದಾರರು ಸೇರಿದಂತೆ ಒಟ್ಟು 52 ಜನರು ತಂಡದಲ್ಲಿದ್ದೇವೆ’ ಎಂದು ವಿವರಿಸಿದರು.


‘ಬೀದರಿನಿಂದ ಈತನಕ ಒಟ್ಟು 936 ಕಿಲೋ ಮೀಟರ್‌ ವ್ಯಾಪ್ತಿ ಕ್ರಮಿಸ ಲಾಗಿದ್ದು, ಇನ್ನು ಮುಂದೆ ಶಿವಮೊಗ್ಗ, ಮಂಗಳೂರ, ಹಾಸನ, ಮೈಸೂರು ಮೂಲಕ ಬೆಂಗಳೂರು ತಲುಪಲಿದ್ದೇವೆ. ಇನ್ನೂ 800 ಕಿಲೋ ಮೀಟರ್‌ಗಳಷ್ಟು ಪ್ರಯಾಣ ಮಾಡಲಿದ್ದೇವೆ. ಒಟ್ಟು 25 ಜಿಲ್ಲೆಗಳಲ್ಲಿ 1756 ಕಿಲೋ ಮೀಟರ್‌ ಸಂಚಾರ ನಮ್ಮ ಗುರಿ’ ಎಂದು ಮಾಹಿತಿ ನೀಡಿದರು.

ನಿರ್ಗತಿಕರಲ್ಲ: ‘ಸೈಕಲ್‌ ಸವಾರರು ನಿರ್ಗತಿಕರು ಎಂಬ ಭಾವನೆ ದೂರವಾಗಬೇಕು. ಸೈಕಲ್‌ ಸವಾರಿ ಮೂಲಕ ಹೊಸ ಚೈತನ್ಯ, ಉತ್ಸಾಹ ಮತ್ತು ದೈಹಿಕ ಶಕ್ತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ನಮ್ಮಲ್ಲಿ ಶಕ್ತಿ ಸಾಮರ್ಥ್ಯವಿದ್ದರೆ ಮಾತ್ರ ಇತರರನ್ನು ರಕ್ಷಣೆ ಸುಲಭವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಗಂಗೇಬಾವಿ ಮೀಸಲು ಪೊಲೀಸ್‌ ತುಕಡಿ ಕಮಾಂ ಡೆಂಟ್‌ ಎಂ.ಬಿ.ಪ್ರಸಾದ ಮಾತನಾಡಿ ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಂಶಿಕೃಷ್ಣ, ರಾಜ್ಯ ಮೀಸಲು ಪೊಲೀಸ್‌ ಇಲಾಖೆ ಗುಪ್ತದಳದ ಎಸ್ಪಿ ಕ್ಯಾಪ್ಟನ್‌, ಅಯ್ಯಪ್ಪ, ರಾಜ್ಯ ಮೀಸಲು ಪೊಲೀಸ್ ಇಲಾಖೆ ಕ್ರೀಡಾ ಅಧಿಕಾರಿ ಸುಮಂತ ಇದ್ದರು.

* *  

ಇಡೀ ತಂಡ ಮಂಗಳವಾರ ರಾತ್ರಿ ಗಂಗೇಬಾವಿಯಲ್ಲಿ ವಾಸ್ತವ್ಯ ಹೂಡಲಿದ್ದು, ಬುಧವಾರ ಬೆಳಿಗ್ಗೆ ಹಾವೇರಿ, ಕಾಗಿನೆಲೆ ಮೂಲಕ ಶಿವಮೊಗ್ಗಕ್ಕೆ ಪ್ರವಾಸ ಬೆಳೆಸಲಿದೆ
ಎಂ.ಬಿ.ಪ್ರಸಾದ್, ಕಮಾಂಡೆಂಟ್‌ ಕೆಎಸ್‌ಆರ್‌ಪಿ 10ನೇ ತುಕಡಿ, ಗಂಗೇಬಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.