ADVERTISEMENT

ಹಾವೇರಿ: ಜವಳಿ ಕೈಗಾರಿಕೆಗೆ ಉತ್ತೇಜನ

ಕೃಷಿ ಪೂರಕ ಉದ್ಯೋಗ ಸೃಷ್ಟಿಗೆ ಜಿಲ್ಲಾ ಕೈಗಾರಿಕೆ ಕೇಂದ್ರ, ಜಿಲ್ಲಾಡಳಿತದ ಜಂಟಿ ಪ್ರಯತ್ನ

ಹರ್ಷವರ್ಧನ ಪಿ.ಆರ್.
Published 31 ಜುಲೈ 2015, 11:03 IST
Last Updated 31 ಜುಲೈ 2015, 11:03 IST

ಹಾವೇರಿ: ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಹಾವೇರಿ ಜಿಲ್ಲೆಯಲ್ಲಿ ಸಿದ್ಧ ಉಡುಪು ತಯಾರಿಸುವ (ಜವಳಿ ಕೈಗಾರಿಕೆ) ‘ಶಾಹಿ ಎಕ್ಸ್‌ಪೋರ್ಟ್ಸ್‌’ ಕಂಪೆನಿಯು ಹೊಸ ಘಟಕ ಸ್ಥಾಪಿಸಲು ಪ್ರಸ್ತಾವ ಸಲ್ಲಿಸಿದ್ದು, ಸುಮಾರು ಮೂರು ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಚಿಗುರೊಡೆದಿದೆ. ಜಿಲ್ಲೆಯಲ್ಲಿ ಜವಳಿ ಉದ್ಯಮ ಉತ್ತೇಜನಕ್ಕೆ  ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಜಿಲ್ಲಾಡಳಿತ ಮುಂದಡಿ ಇಟ್ಟಿದೆ.

‘ಪ್ರಸ್ತುತ ತುಮಕೂರು, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ಸಿದ್ಧ ಉಡುಪು ತಯಾರಿಕೆ ಹಾಗೂ ರಫ್ತುವಿನ  ಉದ್ಯಮ ಹೊಂದಿರುವ ಶಾಹಿ ಎಕ್ಸ್‌ಪೋರ್ಟ್ಸ್‌ ಈಗಾಗಲೇ ಪ್ರಸ್ತಾವ ಸಲ್ಲಿಸಿದೆ. ಹಾವೇರಿ ಹಾಗೂ ಮೋಟೆಬೆನ್ನೂರು ಮಧ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ–4ರ ಬದಿಯಲ್ಲಿ ಸುಮಾರು 12 ಎಕರೆ ಜಾಗ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ (ಡಿಐಸಿ)ದ ಜಂಟಿ ನಿರ್ದೇಶಕ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಆರಂಭಿಕವಾಗಿ ₨ 40 ಕೋಟಿ ಬಂಡವಾಳದಲ್ಲಿ ಜವಳಿ ಉದ್ಯಮ ಸ್ಥಾಪಿ ಸುವುದಾಗಿ ಅವರು ತಿಳಿಸಿದ್ದಾರೆ. ಸ್ಥಳೀಯ ವಾಗಿ ಉಡುಪು ಸಿದ್ಧಪಡಿಸಿ ರಫ್ತು ಮಾಡುವುದು ಅವರ ಪ್ರಮುಖ ಉದ್ದೇಶ ವಾಗಿದೆ. ಕೈಗಾರಿಕೆ ಸ್ಥಾಪನೆಗೆ ಡಿಐಸಿ ಹಾಗೂ ಜಿಲ್ಲಾಡಳಿತವು ಪ್ರೋತ್ಸಾ ಹಿಸಿದ್ದು, ಮುಂದಿನ ಪ್ರಕ್ರಿಯೆಗಳಿಗೆ ಸಂಪೂರ್ಣ ಸಹಕಾರ ನೀಡ ಲಾಗುವುದು’ ಎಂದರು.

‘ಜಿಲ್ಲೆಯು ಹತ್ತಿ ಬೆಳೆಯ ಪ್ರಮುಖ ಪ್ರದೇಶವಾಗಿದೆ. ಇನ್ನೊಂದೆಡೆ ಕೈಗಾರಿಕೆ ಗಳಿಗೆ ಇಲ್ಲಿ ಕಾರ್ಮಿಕರ ಲಭ್ಯತೆ ಸುಲಭ ವಾಗಲಿದೆ. ಇಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಮತ್ತಿತರ ಪ್ರದೇಶಕ್ಕಿಂತ ಇತರ ವೆಚ್ಚವೂ ಕಡಿಮೆ ಇದೆ. ನಾಲ್ಕು ನದಿಗಳಿರುವ ಪರಿಣಾಮ ನೀರಿನ ಲಭ್ಯತೆಯೂ ಇದೆ. ಜಿಲ್ಲೆಯ ಮಧ್ಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದು, ರೈಲು ಸಂಪರ್ಕವೂ ಸಮೀಪದಲ್ಲಿದೆ. 100 ಕಿ.ಮೀ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣವೂ ಇದೆ. ಕಾರವಾರ, ಮಂಗ ಳೂರು ಬಂದರುಗಳ ಮೂಲಕ ವಿದೇಶಿ ರಫ್ತು ಸಾಧ್ಯ. ಈ ನಿಟ್ಟಿನಲ್ಲಿ  ಜವಳಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಕಚ್ಚಾ ವಸ್ತುವಾಗಿ ಬಳಸುವ ಕೈಗಾರಿಕೆಗಳ ಬೆಳವಣಿಗೆಗೆ ಜಿಲ್ಲೆ ಪ್ರಸಕ್ತವಾಗಿದೆ.

ಕೃಷಿ ಆಧಾರಿತ ಕೈಗಾರಿಕೆಗಳಿಗೆ ಜಿಲ್ಲೆಯ ವಾತಾವರಣವು ಪೂರಕವಾಗಿದ್ದರೆ, ಇತ್ತ ಕೃಷಿ ಉತ್ಪನ್ನಗಳಿಗೆ ಬೇಡಿಕೆ, ಉದ್ಯೋಗ ಸೃಷ್ಟಿಯ ಕಾರಣ ರೈತ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಭದ್ರತೆ ದೊರೆಯಲಿದೆ. ಈ ನಿಟ್ಟಿನಲ್ಲಿ ಜವಳಿ ಉದ್ಯಮವು ಜಿಲ್ಲೆಯಲ್ಲಿ ಹೆಚ್ಚಿನ ಭರವಸೆ ಮೂಡಿಸಿದೆ. ಜವಳಿ ಕಾರ್ಖಾನೆ ಮಾತ್ರವಲ್ಲ, ಶಿಗ್ಗಾವಿಯ ಅಂಬುಜಾ ಕಂಪೆನಿಯು ತನ್ನ ಘಟಕದ ವಿಸ್ತರಣೆ ಮಾಡಲಿದೆ.  ಆಗ ಇನ್ನಷ್ಟು ಉದ್ಯೋಗಾವಕಾಶ ಸೃಷ್ಟಿ ಯಾಗುವ ನಿರೀಕ್ಷೆ ಇದೆ. ಅಲ್ಲದೇ ಸಾಂಬಾರು ಮಂಡಳಿಯ ಯೋಜನೆ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ. 

ಗಣಜೂರು ಚಿನ್ನದ ಗಣಿ!
ಹಾವೇರಿಯ ಗಣಜೂರು ಬಳಿ ಡೆಕ್ಕನ್‌ ಎಕ್ಸ್‌ಪ್ಲೊರೇಷನ್‌ ಸರ್ವೀಸಸ್‌ ಕಂಪೆನಿಯು ಚಿನ್ನದ ಲೋಹ (golden metal) ತಯಾರಿಸುವ ಘಟಕ ಸ್ಥಾಪಿಸುವ ಕುರಿತು ಡಿಐಸಿಗೆ ಪ್ರಸ್ತಾವ ಸಲ್ಲಿಸಿದೆ. ಅದಕ್ಕಾಗಿ ಸುಮಾರು 145 ರಿಂದ 200 ಎಕರೆ ಭೂಮಿ ಕೇಳಿದೆ. ಈ ಭೂಮಿಯನ್ನು ಕೆಐಎಡಿಬಿ ಅಥವಾ ಜಿಲ್ಲಾಧಿಕಾರಿ ಸಮಿತಿ ಮೂಲಕ ಪಡೆಯ ಬಹುದು. ಆದರೆ, ಸ್ಥಳೀಯ ರೈತರ ಒಪ್ಪಿಗೆ, ಗಣಿಗಾರಿಕೆ ಪರವಾನಗಿ ಮತ್ತಿತರ ಪ್ರಕ್ರಿಯೆಗಳು ನಡೆಯ ಬೇಕಾಗಿದೆ. ₨ 267 ಕೋಟಿ ಯೋಜನೆಯ ಈ ಘಟಕ ಆರಂಭಗೊಂಡರೆ ಸುಮಾರು 218 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ.  ‘ಚಿನ್ನದ ಗಣಿಗಾರಿಕೆಗೆ ಕೇಂದ್ರದಿಂದ ಪರವಾನಗಿ ದೊರೆತಿದೆ ಎಂದು ಕಂಪೆನಿ ಅಧಿಕಾರಿಗಳು ಮೌಖಿಕವಾಗಿ ತಿಳಿಸಿ ದ್ದಾರೆ’ ಎಂದು ಜಂಟಿ ನಿರ್ದೇಶಕ ಕುಮಾರಸ್ವಾಮಿ ತಿಳಿಸಿದರು.

ಟಾಟಾ ಮೆಟಾಲಿಕ್ಸ್‌: ‘ಸುಮಾರು 1,400 ಎಕರೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಉದ್ದೇಶಿಸಿದ ಟಾಟಾ ಮೆಟಾಲಿಕ್ಸ್‌ ಕಂಪೆನಿ ಜೊತೆ ನಾವು ನಿರಂತರ ಸಂಪರ್ಕ ದಲ್ಲಿದ್ದೇವೆ. ಗಣಿಗಾರಿಕೆಗೆ ಪರವಾನಗಿ ದೊರೆತ ತಕ್ಷಣವೇ ಪ್ರಕ್ರಿಯೆ ಆರಂಭಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಗಣಿಗಾರಿಕೆ ಆರಂಭಿಸಿದರೆ, ಇಲ್ಲಿನ ಹಲವರಿಗೆ ಉದ್ಯೋಗ ದೊರೆಯಲಿದೆ ಎಂಬ ವಿಶ್ವಾಸವಿದೆ’ ಎಂದೂ  ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಹತ್ತಿ ಬೆಳೆ ಪ್ರಮುಖವಾಗಿರುವ ಹಾವೇರಿ ಜಿಲ್ಲೆಯು ಜವಳಿ ಉದ್ಯಮಕ್ಕೆ ಪೂರಕವಾಗಿದೆ. ಇದರಿಂದ ಹೆಚ್ಚಿನ ಉದ್ಯೋಗವೂ ದೊರೆಯಲಿವೆ
-ಕುಮಾರಸ್ವಾಮಿ ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ (ಡಿಐಸಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.