ADVERTISEMENT

₹ 2.57 ಕೋಟಿ ಉಳಿತಾಯ ಬಜೆಟ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 10:34 IST
Last Updated 17 ಮಾರ್ಚ್ 2018, 10:34 IST

ರಾಣೆಬೆನ್ನೂರು: ಇಲ್ಲಿನ ನಗರಸಭೆ ಡಾ. ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಆಶಾ ಗುಂಡೇರ ಅವರು 2018–19ನೇ ಸಾಲಿನ ಒಟ್ಟು ₹ 2.57 ಕೋಟಿ ಉಳಿತಾಯ ಬಜೆಟ್‌ ಮಂಡಿಸಿದರು.

ನಗರಸಭೆಗೆ ವಿವಿಧ ಮೂಲಗಳಿಂದ ಒಟ್ಟು ಆದಾಯ ಒಟ್ಟು ₹ 68.96ಕೋಟಿ ಆದಾಯ ಮತ್ತು ₹ 66.30 ಕೋಟಿ ಖರ್ಚು ತೋರಿಸಲಾಗಿದೆ. ಒಟ್ಟು ₹ 2.57 ಕೋಟಿ ಉಳಿತಾಯ ಬಜೆಟ್‌ ಅಂದಾಜಿಸಲಾಗಿದೆ.

ನಗರಸಭೆ ಸ್ವಂತ ಆದಾಯ: ನಗರಸಭೆಯ ಆರಂಭಿಕ ಶುಲ್ಕದ ಸ್ವಂತ ಆದಾಯ ಒಟ್ಟು ₹ 16.26 ಕೋಟಿ, ಅದರಲ್ಲಿ ಆಸ್ತಿ ತೆರಿಗೆ ₹ 3.55 ಕೋಟಿ, ಮಳಿಗೆ ಬಾಡಿಗೆ ₹ 1.88 ಕೋಟಿ, ನೀರಿನ ಕಂದಾಯ ₹ 2.96, ಅಭಿವೃದ್ದಿ ಕರ ₹ 4.25 ಕೋಟಿ, ಕಟ್ಟಡ ಪರವಾನಗಿ ₹ 28 ಲಕ್ಷ, ವ್ಯಾಪಾರ ಪರವಾನಗಿ ₹ 12.91 ಲಕ್ಷ, ಎಸ್‌ಡಬ್ಲೂಎಂ ಶುಲ್ಕ ₹ 88.52, ಸಂತೆಶುಲ್ಕ ಹಾಗೂ ಇತರೆ ಕರ ಮತ್ತು ಆದಾಯ ₹ 1.24 ಕೋಟಿ ಒಳಗೊಂಡಿದೆ.

ADVERTISEMENT

ರಾಜಸ್ವ ಅನುದಾನ: ನಗರಸಭೆ ಒಟ್ಟು ₹ 3,079 ಕೋಟಿ, ರಾಜಸ್ವ ಅನುದಾನ ಲಭ್ಯವಿದ್ದು, ಅದರಲ್ಲಿ ಎಸ್‌ಎಫ್‌ಸಿ ವೇತನ ಅನುದಾನ ₹ 4 ಕೋಟಿ, ವಿದ್ಯುತ್‌ ಅನುದಾನ ₹ 5 ಕೋಟಿ, ಮುಕ್ತ ನಿಧಿ ₹5.30 ಹಾಗೂ ನಲ್ಮ್‌ ಯೋಜನೆ ಅನುದಾನದಲ್ಲಿ ರಾಜಸ್ವ ವೆಚ್ಚಗಳಿಗೆ ಸಂಬಂಧಿಸಿದಂತೆ ವರ್ಗಾವಣೆ ಮಾಡಿದ ₹ 50 ಲಕ್ಷ ಒಳಗೊಂಡಿದೆ.

ರಾಜಸ್ವ ಪಾವತಿಗಳು: ನಗರಸಭೆ ರಾಜಸ್ವ (ಖರ್ಚು) ₹ 22.88 ಕೋಟಿ ಇದೆ. ಅದರಲ್ಲಿ ವೇತನ ಪಾವತಿ ₹ 4.14 ಕೋಟಿ, ಎಸ್‌ಡಬ್ಲೂಎಂ ಹೊರಗುತ್ತಿಗೆ ಮತ್ತು ಮನೆ ಮನೆ ಕಸ ಸಂಗ್ರಹಣೆಗೆ ₹ 5 ಕೋಟಿ, ಬೀದಿ ದೀಪದ ಹೊರಗುತ್ತಿಗೆ ₹ 40 ಲಕ್ಷ, ನೀರು ಪೂರೈಕೆ ವಿದ್ಯುತ್‌ ಬಿಲ್‌ ₹ 2.50 ಕೋಟಿ, ಬೀದಿ ದೀಪ ವಿದ್ಯುತ್‌ ಬಿಲ್‌ ₹ 1.80 ಕೋಟಿ, ದಾಸ್ತಾನು ಖರೀದಿ ₹ 1.15 ಕೋಟಿ, ದುರಸ್ತಿ ಮತ್ತು ನಿರ್ವಹಣೆಗೆ ₹ 91 ಲಕ್ಷ ಹಾಗೂ ಇತರೆ ಎಲ್ಲ ರಾಜಸ್ವ ವೆಚ್ಚ ₹ 90 ಲಕ್ಷ ಆಗಿದೆ.

ವಿರೋಧ ಪಕ್ಷದ ಸದಸ್ಯ ರಾಮಪ್ಪ ಭೀ. ಕೋಲಕಾರ ಮಾತನಾಡಿ, ‘ಸಾರ್ವಜನಿಕರ ಹಿತದೃಷ್ಟಿಯಿಂದ ಸಾಧಾರಣ ಸಭೆಯಲ್ಲಿ ಬಜೆಟ್‌ ಮಂಡಿಸಲು ಅವಕಾಶ ನೀಡಲಾಗಿದೆ. ಬಜೆಟ್‌ ಹೊರತು ಪಡಿಸಿ ಇತರೆ ವಿಷಯಗಳನ್ನು ಸಾಮಾನ್ಯ ಸಭೆಯಲ್ಲಿ ಚರ್ಚೆಯನ್ನು ಮುಂದೂಡಬೇಕು’ ಎಂದು ಸೂಚನೆ ನೀಡಿದರು.

ಅಧ್ಯಕ್ಷೆ ಗುಂಡೇರ ಅವರು ಮತಕ್ಕೆ ಹಾಕಿದಾಗ ಪರವಾಗಿ 16 ಮತಗಳು ಬಂದವು. ಅಧ್ಯಕ್ಷೆ ಆಶಾ ಗುಂಡೇರ ಅವರು ತಮ್ಮ ಮತ ಚಲಾಯಿಸಿದರು. ಶಾಸಕ ಕೆ.ಬಿ.ಕೋಳಿವಾಡ ಅವರು ಸಭೆಗೆ ಹಾಜರಾಗಿ ಆಡಳಿತದ ಪರ ಕೈ ಎತ್ತುವ ಮೂಲಕ ಮತ ಚಲಾಯಿಸಿದಾಗ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ನಂತರ ಅಧ್ಯಕ್ಷರು ಇನ್ನುಳಿದ ವಿಷಯಗಳನ್ನು ಚರ್ಚಿಸಲು ಒಪ್ಪಿಗೆ ಸೂಚಿಸಿದರು.

ಕಳೆದ ಬಾರಿ ಸಭೆಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಉಪ ಸೂಚನೆಯನ್ನು ಮತಕ್ಕೆ ಹಾಕಿದಾಗ ವಿರೋಧ ಪಕ್ಷದ ಸದಸ್ಯರ ಮತಗಳು ಹೆಚ್ಚಾಗಿದ್ದವು. ಆಡಳಿತ ಪಕ್ಷಕ್ಕೆ ಮುಖಭಂಗವಾಗಿದ್ದರಿಂದ ಸಭೆ ಮುಂದೂಡಲಾಗಿತ್ತು.

ಗುರುವಾರ ನಡೆದ ಸಭೆಗೆ ಶಾಸಕರು ಸಭೆಗೆ ಗೈರಾಗಿದ್ದರೆ ಮತ್ತೆ ಆಡಳಿತ ಪಕ್ಷಕ್ಕೆ 15 ಮತಗಳು ಬಂದು, ಒಂದು ಮತ ಕಡಿಮೆಯಾಗಿ, ವಿರೋಧ ಪಕ್ಷದವರು 16 ಮತಗಳನ್ನು ಹೊಂದಿ ಅವಿಶ್ವಾಸ ಮಂಡಿಸುವ ಸಾಧ್ಯತೆ ಇತ್ತು. ನಂತರ ಅಧ್ಯಕ್ಷರು ಸಭೆ ಮುಂದುವರೆಸಿ 22 ವಿಷಯಗಳಿಗೆ ಅನುಮೋದನೆ ಪಡೆದರು.

ನಗರಸಭೆ ಉಪಾಧ್ಯಕ್ಷೆ ವಸಂತಮ್ಮ ಮೇದಾರ, ಪೌರಾಯುಕ್ತ ಡಾ.ಮಹಾಂತೇಶ ಎನ್, ಸಹಾಯಕ ಪಾಲಿಕೆ ಎಂಜಿನಿಯರ್‌ ಎಂ.ವಿ.ಗಿರಡ್ಡಿ, ಜಿ.ಜಿ. ಕಾಟಿ, ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.