ADVERTISEMENT

‘ಆರ್ಥಿಕ ಶಿಸ್ತಿನಿಂದ ಸ್ವಾವಲಂಬನೆ’

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 5:54 IST
Last Updated 3 ಫೆಬ್ರುವರಿ 2017, 5:54 IST
‘ಆರ್ಥಿಕ ಶಿಸ್ತಿನಿಂದ ಸ್ವಾವಲಂಬನೆ’
‘ಆರ್ಥಿಕ ಶಿಸ್ತಿನಿಂದ ಸ್ವಾವಲಂಬನೆ’   

ಕಲಬುರ್ಗಿ: ‘ನಿತ್ಯ ಬದುಕಿನಲ್ಲಿ ಆರ್ಥಿಕ ಶಿಸ್ತು ಅಳವಡಿಸಿಕೊಳ್ಳುವುದರಿಂದ ಸ್ವಾವಲಂಬನೆ ಗುಣ ಬೆಳೆಯುತ್ತದೆ’ ಎಂದು ಗೋದುತಾಯಿ ದೊಡ್ಡಪ್ಪ ಅಪ್ಪಾ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ನೀಲಾಂಬಿಕಾ ಶೇರಿಕಾರ ಅಭಿಪ್ರಾಯಪಟ್ಟರು.

ನಗರದ ಗೋದೂತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಗುರು­ವಾರ ಏರ್ಪಡಿಸಿದ್ದ ಉಪನ್ಯಾಸಕ ಸಿದ್ದಲಿಂಗರೆಡ್ಡಿ ಬರೆದ ‘ಮಾನಿಟರಿ ಎಕನಾಮಿಕ್ಸ್’ ಕೃತಿ ಬಿಡುಗಡೆ ಕಾರ್ಯ­ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಅರ್ಥಶಾಸ್ತ್ರವು ಜೀವನದ ಅತಿ ಪ್ರಮುಖ ಭಾಗವಾಗಿದೆ. ದೈನಂದಿನ ಜೀವನದ ಸಣ್ಣ ವೆಚ್ಚಗಳನ್ನು ಇತಿಮಿತಿ­ಯಲ್ಲಿ ಮಾಡಿದರೆ ಸುಖಿ ಜೀವನ ಸಾಗಿಸಬಹುದು. ಆದ್ದರಿಂದ ವಿದ್ಯಾರ್ಥಿ­ಗಳೆಲ್ಲರೂ ಅರ್ಥಶಾಸ್ತ್ರವನ್ನು ಶಾಸ್ತ್ರೀಯ­ವಾಗಿ ಅಧ್ಯಯನ ಮಾಡ­ಬೇಕು’ ಎಂದು ಸಲಹೆ ನೀಡಿದರು.

‘ಭವಿಷ್ಯದ ಭಾರತ ಡಿಜಿಟಲೀಕರಣ­ಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಹೊಸ ಹೊಸ ಸಂಶೋಧನೆಗಳು, ಪ್ರಯೋಗಗಳು ಆರ್ಥಿಕ ರಂಗದಲ್ಲಿ ನಡೆಯುತ್ತಿವೆ. ಹೀಗಾಗಿ ಎಲ್ಲರೂ ಅದರ ಸದುಪ­ಯೋಗ ಮಾಡಿಕೊಳ್ಳಬೇಕಾಗಿದೆ. ನಿರಂತರ ಬದಲಾವಣೆಗೆ ಹೊಂದಿ­ಕೊಳ್ಳುವುದು ಅನಿವಾರ್ಯವಾಗಿದೆ’ ಎಂದರು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ದಶರಥ ಮೇತ್ರಿ ಮಾತ­ನಾಡಿ ‘ಶಾಖೆಗಳು ಇಲ್ಲದ ಬ್ಯಾಂಕಗಳನ್ನು ನೋಡುವ ಕಾಲ ದೂರದಲ್ಲಿಲ್ಲ. ಇತ್ತೀಚಿಗೆ ಜನರು ಸ್ಮಾರ್ಟ್‌ ಫೋನ್‌ಗಳ ಮೂಲಕ ಬ್ಯಾಂಕಿಂಗ್ ವ್ಯವಹಾರ, ವ್ಯಾಪಾರ ಮಾಡುತ್ತಿರುವುದು ಆಶಾ­ದಾಯಕ ಬೆಳವಣಿಗೆ’ ಎಂದರು.

ವಿದ್ಯಾರ್ಥಿನಿ ಮಹಾಲಕ್ಷ್ಮೀ ಪುಸ್ತಕ ಕುರಿತು ಮಾತನಾಡಿದರು. ಕಾರ್ಯ­ಕ್ರಮ­ದಲ್ಲಿ ಕಾಲೇಜಿನ ವಿದ್ಯಾರ್ಥಿಗಳೇ ಪುಸ್ತಕ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.
ಡಾ.ದಶರಥ ಮೇತ್ರಿ, ವೈಶಾಲಿ, ಉಮಾದೇವಿ, ಪ್ರಿಯಾಂಕಾ ಇದ್ದರು. ಆರ್ಥಿಕವಾಗಿ ಹಿಂದುಳಿದ ಹಾಗೂ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು. ಕೃತಿಕಾರ ಸಿದ್ದಲಿಂಗರೆಡ್ಡಿ ಸ್ವಾಗತಿಸಿ­ದರು. ಹಣಮಂತ ಶೇರಿ ಖಜೂರಿ ನಿರೂಪಿಸಿದರು. ಚೈತ್ರಾ ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.