ADVERTISEMENT

‘ಕಾರ್ಯಕರ್ತರ ವಿಶ್ವಾಸ ಮರೆಯಲಾಗದು’

ಅಪಾರ ಬೆಂಬಲಿಗರ ನಡುವೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಶಿವರಾಮ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 8:25 IST
Last Updated 20 ಏಪ್ರಿಲ್ 2018, 8:25 IST

ಮುಂಡಗೋಡ: ‘ಶಾಸಕನಾಗುವ ಮೊದಲು ಹೊಂದಿದ್ದ ಪ್ರೀತಿ, ವಿಶ್ವಾಸ ಇಂದಿಗೂ ಕಾರ್ಯಕರ್ತರಲ್ಲಿದೆ. ಅದೇ ನನ್ನ ಗೆಲುವಿಗೆ ಪ್ರಮುಖ ಅಂಶ’ ಎಂದು ಶಾಸಕ ಶಿವರಾಮ ಹೆಬ್ಬಾರ್‌ ಹೇಳಿದರು.

ಗುರುವಾರ ಇಲ್ಲಿ ಮಾತನಾಡಿದ ಅವರು, ‘ಹಿಂದುಳಿದ ವರ್ಗದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿ ಶಕೆ ಆರಂಭವಾಗಿದೆ. ವಿಶೇಷವಾಗಿ ಯಲ್ಲಾಪುರ ಕ್ಷೇತ್ರದಲ್ಲಿ ₹ 800 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಅನ್ನದಾತನ ಬಾಳು ಹಸನಾಗಿಸುವ ನಿಟ್ಟಿನಲ್ಲಿ ನೀರಾವರಿ ಕ್ಷೇತ್ರಕ್ಕೆ ₹400 ಕೋಟಿ, ರಸ್ತೆ, ಸೇತುವೆ ಇತರೆ ಅಭಿವೃದ್ಧಿ ಕಾರ್ಯಗಳಿಗೆ ₹ 250 ಕೋಟಿ ಹಣವನ್ನು ಕ್ಷೇತ್ರದಲ್ಲಿ ವಿನಿಯೋಗಿಸಲಾಗಿದೆ’ ಎಂದರು.

‘ಕಳೆದ ಐದು ವರ್ಷಗಳಲ್ಲಿ ಒಂದು ಕಡೆ ಅಭಿವೃದ್ಧಿ, ಇನ್ನೊಂದು ಕಡೆ ಜನಸ್ನೇಹಿ ಆಡಳಿತ, ಮತ್ತೊಂದು ಕಡೆ ಕಾಂಗ್ರೆಸ್‌ ಸರ್ಕಾರ ಬಡವರು, ಮಹಿಳೆಯರು, ವಿದ್ಯಾರ್ಥಿಗಳಿಗೆ ನೀಡಿರುವ ವಿಶೇಷ ಕಾರ್ಯಕ್ರಮ ಚುನಾವಣೆಗೆ ದೊಡ್ಡ ಮೈಲಿಗಲ್ಲು ಆಗಲಿವೆ. ಮುಂದಿನ ಅವಧಿಗೆ ಮತದಾರರು ನನ್ನನ್ನು ಗೆಲ್ಲಿಸುತ್ತಾರೆ’ ಎಂದರು.

ADVERTISEMENT

ಹೆಬ್ಬಾರ್ ನಾಮಪತ್ರ ಸಲ್ಲಿಕೆ

ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ ಅಪಾರ ಬೆಂಗಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದರು. ಪತ್ನಿ ವನಜಾಕ್ಷಿ ಹೆಬ್ಬಾರ, ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ವಿಜಯ ಮಿರಾಶಿ, ಕೆಪಿಸಿ‌ಸಿ ಸದಸ್ಯ ಸಿ.ಎಫ್ ನಾಯ್ಕ ಇದ್ದರು.  ಚುನಾವಣಾಧಿಕಾರಿ ಮಹಾಂತೇಶಪ್ಪ ಎಂ. ನಾಮಪತ್ರ ಸ್ವೀಕರಿಸಿದರು.ಇದಕ್ಕೂ ಮುನ್ನ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
‘ಕಾರ್ಯಕರ್ತರು ಚುನಾವಣೆಯನ್ನು ಹಗುರಾಗಿ ಪರಿಗಣಿಸಬಾರದು. ಕಳೆದ ಬಾರಿ 25 ಸಾವಿರ ಮತ ಅಂತರದಿಂದ ಗೆಲ್ಲಿಸಲಾಗಿತ್ತು. ಈ ಬಾರಿಯೂ ಮತದಾರರು 50 ಸಾವಿರಕ್ಕೂ ಅಧಿಕ ಮತದ ಅಂತರದಿಂದ ಗೆಲ್ಲಿಸಲು ಶ್ರಮಿಸಬೇಕು’ ಎಂದರು.ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ ಮಾತನಾಡಿ, ‘ಮುಂದಿನ 22 ದಿನ ಕಾರ್ಯಕರ್ತರು ಅವರ ಗೆಲುವಿಗಾಗಿ ಶ್ರಮಿಸಬೇಕು ಎಂದರು.

ಕೆ.ಪಿ.ಸಿ.ಸಿ ಸದಸ್ಯ ಸಿ.ಎಫ್ ನಾಯ್ಕ, ಪಕ್ಷದ ಮುಖಂಡರಾದ ಆರ್.ಎನ್.ಹೆಗಡೆ ಗೋರ್ಸಗದ್ದೆ, ಎಚ್.ಎಂ.ನಾಯ್ಕ ಮಾತನಾಡಿದರು. ಮುಂಡಗೋಡ ಬ್ಲಾಕ್ ಅಧ್ಯಕ್ಷ ರವಿ ಗೌಡ ಪಾಟೀಲ್, ಪ್ರಮುಖರಾದ ವಿಜಯ ಮಿರಾಶಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭವ್ಯಾ ಶೆಟ್ಟಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಶಿರೀಷ ಪ್ರಭು, ಹೆಬ್ಬಾರರ ಪತ್ನಿ ವನಜಾಕ್ಷಿ ಹೆಬ್ಬಾರ, ಪುತ್ರ ವಿವೇಕ ಹೆಬ್ಬಾರ, ಪುತ್ರಿ ಶ್ರುತಿ ರಾವ್, ಸೊಸೆ ದಿವ್ಯಾ ಹೆಬ್ಬಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.