ADVERTISEMENT

ಧಾರ್ಮಿಕ ತಾಣದಲ್ಲಿ ಅಭಿವೃದ್ಧಿ ಪರ್ವ

ರೇವಗ್ಗಿ: 51 ಅಡಿಯ ರೇವಣಸಿದ್ಧೇಶ್ವರ ಮೂರ್ತಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 6:06 IST
Last Updated 16 ಫೆಬ್ರುವರಿ 2017, 6:06 IST
ಕಾಳಗಿ: ಹೈದರಾಬಾದ್ ಕರ್ನಾಟಕ ಪ್ರದೇಶದ ಲಕ್ಷಾಂತರ ಭಕ್ತರ ಆರಾಧ್ಯದೈವವಾಗಿರುವ ಚಿತ್ತಾಪುರ ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ ರೇವಣಸಿದ್ಧೇಶ್ವರ ತಪೋಭೂಮಿ ಈಗ ಅಭಿವೃದ್ಧಿ ಪಥದತ್ತ ಸಾಗಿದೆ. 
 
ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಈ ದೇವಸ್ಥಾನಕ್ಕೆ ಸಾಕಷ್ಟು ಆದಾಯ ಇದ್ದರೂ ಇಚ್ಛಾಶಕ್ತಿ ಕೊರತೆಯಿಂದ ಬಹು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. 
 
ಈಚೆಗೆ ದೇವಸ್ಥಾನ ಸಮಿತಿಯ ಆಡಳಿತ ಚುಕ್ಕಾಣಿ ಹಿಡಿದಿರುವ ಸೇಡಂ ಉಪ ವಿಭಾಗಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಅವರು ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೇವಣಸಿದ್ಧೇಶ್ವರ ಜಾಗೃತ ತಾಣದ ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿದ್ದಾರೆ. 
 
ಮುಜರಾಯಿ ಇಲಾಖೆ ಮತ್ತು ಭಕ್ತರ ನೆರವಿನೊಂದಿಗೆ ಅಭಿವೃದ್ಧಿ ಕಾರ್ಯ ಕೈಗೊಂಡಿರುವ ಅವರು ಗುಡ್ಡದ ಚಿತ್ರಣವನ್ನೆ ಬದಲಾಯಿಸುವ ಕೆಲಸಕ್ಕೆ ಕೈಹಾಕಿದ್ದನ್ನು ನೋಡಿದರೆ ಈ ಕ್ಷೇತ್ರ ಮುಂದೊಂದು ದಿನ ನಾಡಿನ ಪ್ರಸಿದ್ಧ ಯಾತ್ರಾ ಸ್ಥಳ ಆಗುವಲ್ಲಿ ಸಂದೇಹವಿಲ್ಲ ಎಂದು ಭಕ್ತ ಶಿವಶರಣಪ್ಪ ಕಮಲಾಪುರ ಹೇಳುತ್ತಾರೆ. 
 
ದೇವಸ್ಥಾನದ ಗುಡ್ಡದ ಮೇಲೆ 120x200 ಚದರ ಅಡಿ ವಿಶಾಲವಾದ ಸ್ಥಳದಲ್ಲಿ ಧ್ಯಾನ ವಿಹಾರ ನಿರ್ಮಿಸಲಾ ಗುತ್ತಿದೆ. 51 ಅಡಿ ಎತ್ತರದ ರೇವಣ ಸಿದ್ಧೇಶ್ವರ ಭವ್ಯ ಮೂರ್ತಿಯನ್ನು ಭೆಡಸೂರ ಎಂ.ತಾಂಡಾದ ಭಕ್ತರೊ ಬ್ಬರು ದೇಣಿಗೆಯಾಗಿ ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ.
ಬಗೆಬಗೆಯ ಹೂವಿನ ಗಿಡಗಳು ಮತ್ತು ಹಸಿರು ಹುಲ್ಲು ಹಾಸಿನೊಂದಿಗೆ ಮೇಳೈಸುವ ನಾಲ್ಕು ಉದ್ಯಾನವನ ಗಳಲ್ಲಿ 240x150 ಚದರ ಅಡಿ ಅಗಲದ ಒಂದರಲ್ಲಿ 15 ಅಡಿ ಎತ್ತರದ ನಂದಿ, ಶಿವನಮೂರ್ತಿ ಸ್ಥಾಪನೆಗೆ ಕಾಳಗಿಯ ಭಕ್ತರು ಆಸಕ್ತಿತೋರಿದ್ದಾರೆ.
 
150x100 ಚದರ ಅಡಿ ವಿಸ್ತೀರ್ಣದ ಉದ್ಯಾನದಲ್ಲಿ ಆಕಳು ಮತ್ತು ಆಕಳು ಕರು, ಬಿತ್ತನೆಗೆ ಸಜ್ಜಾದ ನೊಗಹೊತ್ತ ಎತ್ತುಗಳೊಂದಿಗೆ ಅನ್ನದಾತರ ಶಿಗ್ಗಾಂವಿಯ ಕಲಾಕೃತಿ ಗಳು ನೋಡುಗರ ಕೈಬೀಸಿ ಕರೆಯಲಿವೆ. 
 
ಭಕ್ತರಿಗೆ ಅನ್ನದಾಸೋಹ ಸೇವೆಗಾಗಿ ಕಲಬುರ್ಗಿಯ ಭಕ್ತರೊಬ್ಬರು ದಾಸೋಹ ಭವನ ನಿರ್ಮಾಣ ವೆಚ್ಚ ವಹಿಸಿಕೊಂಡಿ ದ್ದಾರೆ. ಪರ್ವತ ರಾತ್ರಿ ಹೊತ್ತಿನಲ್ಲಿ ಝಗಮಗಿಸಲು ಭಕ್ತರು ಹೈಮಾಸ್ಟ್ ದೀಪದ ವ್ಯವಸ್ಥೆ ಮಾಡಿದ್ದಾರೆ ಎಂದು ಸೇಡಂ ಉಪವಿಭಾಗಾಧಿಕಾರಿ, ದೇವಸ್ಥಾನದ ಆಡಳಿತಾಧಿಕಾರಿಯೂ ಆದ ಭೀಮಾಶಂಕರ ತೆಗ್ಗಳ್ಳಿ ತಿಳಿಸಿದರು. 
 
ಗುಡ್ಡದ ಕೆಳಗಿನ ಕಂದಗೂಳ ಕ್ರಾಸ್– ಅರಣಕಲ್ ಮುಖ್ಯರಸ್ತೆಯ ಗುಡ್ಡದು ದ್ದಕ್ಕೂ ವಿಶಾಲವಾಗಿ ಅಭಿವೃದ್ಧಿಪಡಿಸಿ ರಸ್ತೆ ನಡುವೆ ವಿಭಜಕ ನಿರ್ಮಿಸಲಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಹೂವು, ಹಣ್ಣು ವ್ಯಾಪಾರಿಗಳಿಗೆ ಸುಸಜ್ಜಿತ 50 ಮಳಿಗೆಗಳ ನಿರ್ಮಾಣ ಮಾಡಲಾಗಿದೆ.
ರೇವಗ್ಗಿ ರಸ್ತೆಯಿಂದ ಗುಡ್ಡದ ಮೇಲ್ಭಾಗದ ಸುತ್ತಲು ವಿಶಾಲವಾದ ಸಿಮೆಂಟ್ ಕಾಂಕ್ರಿಟ್ ರಸ್ತೆ, ಸುತ್ತಲೂ ಆವರಣಗೋಡೆ ಮತ್ತು ಕಬ್ಬಿಣದ ಗ್ರೀಲ್‌ ಅಳವಡಿಸಲಾಗುತ್ತಿವೆ. ಎರಡು ಮಹಾದ್ವಾರ, ಮೆಟ್ಟಿಲುಗಳ ನಿರ್ಮಾಣ, ಆಡಳಿತಾಧಿಕಾರಿ ಕಚೇರಿ ಸ್ಥಾಪನೆ ಕೆಲಸ ಭರದಿಂದ ಸಾಗಿದೆ. 
 
ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾರ್ಚ್ ಮೊದಲ ವಾರದಲ್ಲಿ ಪೂರ್ಣಗೊಳಿಸಿ ರೇಣುಕಾಚಾ ರ್ಯರ ಜಯಂತಿಯಂದು ‘ರೇವಗ್ಗಿ ಉತ್ಸವ’ ಏರ್ಪಡಿಸಿ ನಾಡಿಗೆ ಸಮರ್ಪಿಸುವ ವಿಚಾರ ಹೊಂದಲಾಗಿದೆ ಎಂದು  ಭೀಮಾಶಂಕರ ತೆಗ್ಗಳ್ಳಿ ಹೇಳಿದರು.
ಗುಂಡಪ್ಪ ಕರೆಮನೋರ
 
* ಬಹು ವರ್ಷಗಳ ಬಳಿಕ ಅಭಿವೃದ್ಧಿ ಹೊಂದುತ್ತಿರುವ ರೇವಗ್ಗಿ ರೇವಣಸಿದ್ಧೇಶ್ವರ ತಪೋಭೂಮಿ ಭಕ್ತರ ಕಣ್ಮನ ಸೆಳೆಯುತ್ತಿದೆ. ಇದು ನಾಡಿನ ಪ್ರಸಿದ್ಧ ಯಾತ್ರಾ ಸ್ಥಳವಾಗಲಿದೆ
- ರಾಜೇಶ ಗುತ್ತೇದಾರ, ಜಿ.ಪಂ ಸದಸ್ಯ,ಅರಣಕಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.