ADVERTISEMENT

ನೀರು ಇದೆ, ಪೂರೈಸಲು ಏನು ಸಮಸ್ಯೆ?

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 5:44 IST
Last Updated 21 ಏಪ್ರಿಲ್ 2017, 5:44 IST
ಕಲಬುರ್ಗಿ ಪತ್ರಿಕಾ ಭವನದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್‌ ಠಾಕೂರ್‌, ರಾಜ್ಯ ಸಮಿತಿ ಸದಸ್ಯ ದೇವೇಂದ್ರಪ್ಪ ಕಪನೂರ, ಖಜಾಂಚಿ ಚಂದ್ರಕಾಂತ ಹಾವನೂರ ಸನ್ಮಾನಿಸಿದರು. ವಾರ್ತಾಧಿಕಾರಿ ಜಿ.ಚಂದ್ರಕಾಂತ ಇದ್ದರು
ಕಲಬುರ್ಗಿ ಪತ್ರಿಕಾ ಭವನದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್‌ ಠಾಕೂರ್‌, ರಾಜ್ಯ ಸಮಿತಿ ಸದಸ್ಯ ದೇವೇಂದ್ರಪ್ಪ ಕಪನೂರ, ಖಜಾಂಚಿ ಚಂದ್ರಕಾಂತ ಹಾವನೂರ ಸನ್ಮಾನಿಸಿದರು. ವಾರ್ತಾಧಿಕಾರಿ ಜಿ.ಚಂದ್ರಕಾಂತ ಇದ್ದರು   

ಕಲಬುರ್ಗಿ: ‘ಸಾಕಷ್ಟು ನೀರು ಲಭ್ಯವಿ ದ್ದರೂ ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಸಲು ಏನು ಕಷ್ಟ?’. –ಇದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಪ್ರಶ್ನೆ! ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗುರುವಾರ ಇಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಈ ವಿಷಯ ಪ್ರಸ್ತಾಪವಾಯಿತು.
ಜಲಮಂಡಳಿ ಅಧಿಕಾರಿಗೆ ದೂರವಾಣಿ ಕರೆ ಮಾಡಿದ ಸಚಿವರು, ‘ನೀರು ಪೂರೈಕೆಯಲ್ಲಿ ವಿಳಂಬ ಮಾಡ­ಬೇಡಿ’ ಎಂದು ತಾಕೀತು ಮಾಡಿದರು.

‘ನಗರದಲ್ಲಿ ಕಲುಷಿತ ನೀರು ಪೂರೈಕೆಯಾದರೆ ನನ್ನ ಗಮನಕ್ಕೆ ತನ್ನಿ, ನಾನೇ ಖುದ್ದಾಗಿ ಅಲ್ಲಿಗೆ ಭೇಟಿ ನೀಡಿ ಸರಿಮಾಡಿಸುತ್ತೇನೆ’ ಎಂದು ತಿಳಿಸಿದರು. ‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಮೇ ತಿಂಗಳಲ್ಲಿ 65 ಗ್ರಾಮಗಳಿಗೆ ಸಮಸ್ಯೆ ತಲೆದೋರ­ಬಹುದು ಎಂದು ಅಂದಾಜಿಸಲಾಗಿದೆ. ತಾಲ್ಲೂಕುವಾರು ಸಭೆ ನಡೆಸಿ ಪರಿಸ್ಥಿತಿ ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಲಾ­ಗುತ್ತಿದೆ’ ಎಂದು ಹೇಳಿದರು.

ಸಿಬ್ಬಂದಿ ಹೆಚ್ಚಳ: ‘ಕಲಬುರ್ಗಿಯ ಜಯದೇವ ಹೃದ್ರೋಗ ಆಸ್ಪತ್ರೆಗೆ ಆರಂಭದಲ್ಲಿ ರೋಗಿಗಳ ಕೊರತೆ ಇತ್ತು. ಈಗ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದು, ಅರೆ ವೈದ್ಯಕೀಯ ಸಿಬ್ಬಂದಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದರು. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರವನ್ನು ಕಲಬುರ್ಗಿ­ಯಲ್ಲಿ ಸ್ಥಾಪಿಸಲಾಗುತ್ತಿದ್ದು, ₹7 ಕೋಟಿ ಮೊತ್ತದ ಕಟ್ಟಡ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಪ್ರಾದೇಶಿಕ ಕಚೇರಿಯನ್ನು ಕಲಬುರ್ಗಿಯಲ್ಲಿ ಸ್ಥಾಪಿಸುವ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದು ಹೇಳಿದರು.

ADVERTISEMENT

ಅಕ್ರಮಕ್ಕೆ ಕಡಿವಾಣ: ‘ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲಾಗಿದೆ. ಅಕ್ರಮ ಜಲ್ಲಿ ಘಟಕಗಳನ್ನು ಪತ್ತೆ ಹಚ್ಚಿ ಅವುಗಳನ್ನು ಮುಚ್ಚಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು’ ಎಂದುಅವರು ಹೇಳಿದರು.‘ಎರಡು ವರ್ಷಗಳಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಮತ್ತು ತಾಂಡಾಗಳಿಗೆ ಡಾಂಬರ್‌ ರಸ್ತೆ ನಿರ್ಮಿಸಲಾಗುವುದು. ಕಲಬುರ್ಗಿ ನಗರದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮೇ ತಿಂಗಳಲ್ಲಿ ಪೂರ್ಣಗೊಳಿಸುವಂತೆ ನಿರ್ದೇ­ಶನ ನೀಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.