ADVERTISEMENT

ಪರಿಸರ ಸಂರಕ್ಷಣೆ; ನಮ್ಮೆಲ್ಲರ ಹೊಣೆ

ವಿಶ್ವ ಭೂದಿನಾಚರಣೆ ಕಾರ್ಯಕ್ರಮದಲ್ಲಿ ವಿಶ್ವೇಶ್ವರಿ ತಿವಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 9:58 IST
Last Updated 24 ಏಪ್ರಿಲ್ 2018, 9:58 IST

ಕಲಬುರ್ಗಿ: ‘ಪ್ರಪಂಚದ ಪ್ರತಿ ಜೀವಿಯ ಆರೋಗ್ಯ ನಮ್ಮ ಪರಿಸರದ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ಅದರ ಸಂರಕ್ಷಣೆ ಮಾಡದೆ ಹೋದರೆ ಮಾನವ ಕುಲಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ’ ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಸದಸ್ಯೆ ಡಾ. ವಿಶ್ವೇಶ್ವರಿ ತಿವಾರಿ ಹೇಳಿದರು.

ನಗರದ ರಾಮ ಮಂದಿರ ಸಮೀಪದ ವಿವೇಕಾನಂದ ವಿದ್ಯಾ ನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳು ಶಾಲಾ ದಿನಗಳಿಂದಲೇ ಪರಿಸರ ಸಂರಕ್ಷಣೆ ಬಗ್ಗೆ ಆಸಕ್ತಿ ವಹಿಸಬೇಕು. ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಬೇಸಿಗೆಯಲ್ಲಿ ಮನೆಯ ಮುಂದೆ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರಿನ ತೊಟ್ಟಿಗಳನ್ನು ಇಡಬೇಕು. ನೀರು ಅತ್ಯಮೂಲ್ಯ, ನೀರಿಲ್ಲದೆ ಬದುಕಲು ಅಸಾಧ್ಯ. ಹೀಗಾಗಿ ನೀರನ್ನು ಮಿತವಾಗಿ ಬಳಸಬೇಕು’ ಎಂದು ತಿಳಿಸಿದರು.

ADVERTISEMENT

ವಿಜ್ಞಾನ ಶಿಕ್ಷಕ ಮಲ್ಲಿನಾಥ ಕಣ್ಣಿ ಮಾತನಾಡಿ, ‘ಮಾನವನ ದುರಾಸೆಗಳಿಗೆ ಅರಣ್ಯ ನಾಶವಾಗುತ್ತಿದೆ. ಕಾಡಿನಲ್ಲಿ ಇರಬೇಕಾದ ಪ್ರಾಣಿ, ಪಕ್ಷಿಗಳು ನಾಡಿನೊಳಗೆ ನುಗ್ಗುತ್ತಿರುವುದು ವಿಷಾದನೀಯ. ನಮಗೆ ಬದುಕಲು ಪರಿಸರ ಉಚಿತವಾಗಿ ಉತ್ತಮ ಗಾಳಿ, ನೀರು, ಆಹಾರ, ಬೆಳಕು ಎಲ್ಲವನ್ನೂ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ನಾವು ನಮ್ಮ ಜೀವಮಾನದಲ್ಲಿ ಕನಿಷ್ಠ ಒಂದು ಮರವನ್ನು ನೆಟ್ಟರೆ ಅದು ನಮ್ಮ ಮುಂದಿನ ಜನಾಂಗಕ್ಕೆ ನೀಡಬಹುದಾದ ದೊಡ್ಡ ಕೊಡುಗೆಯಾಗಿದೆ’ ಎಂದರು.

ಪ್ರಾಚಾರ್ಯ ಸಿದ್ದಪ್ಪ ಭಗವತಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಗಳು ಮಕ್ಕಳಿಗೆ ಕೇವಲ ಪಠ್ಯ ಜ್ಞಾನ ನೀಡಿದರೆ ಸಾಲದು. ಅದರ ಜೊತೆಗೆ ಪರಿಸರ ಕಾಳಜಿ, ಉತ್ತಮ ಸಂಸ್ಕೃತಿ ಹಾಗೂ ಚಿತ್ರಕಲೆ, ನೃತ್ಯ, ಸಂಗೀತಗಳಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಅವರನ್ನು ಪ್ರೋತ್ಸಾಹಿಸಬೇಕು’ ಎಂದರು. ಇಂಗ್ಲೀಷ್ ಶಿಕ್ಷಕಿ ಸಹನಾ ಸ್ವಾಗತಿಸಿದರು, ಸಹ ಶಿಕ್ಷಕ ಮಾಣಿಕಪ್ರಭು ವಂದಿಸಿದರು.

ಚಿತ್ರಕಲಾ ಸ್ಪರ್ಧೆ ವಿಜೇತರು: ಪ್ರಥಮ: ಮೇರು ಸುದೇಶ ದೊಡ್ಡಪಾಳ್ಯ (ಕೇಂದ್ರೀಯ ವಿದ್ಯಾಲಯ), ಸಿದ್ದೇಶ ಅನಿಲ, ವಿನಾಯಕ ರಾಘವೇಂದ್ರ, ಆದಿತ್ಯ ಕಟೆಗೇರಿ ಹಾಗೂ ಸಮೀರ್ ರಾಜಬಕ್ಸರ್ (ವಿವೇಕಾನಂದ ವಿದ್ಯಾ ನಿಕೇತನ).
ದ್ವಿತೀಯ: ಸಿದ್ರಾಮೇಶ್ವರ, ಭೂಮಿಕಾ ರವೀಂದ್ರ, ಮನೋಜ ಗಂಗಾಧರ (ಕೇಂದ್ರೀಯ ವಿದ್ಯಾಲಯ), ಭಾಗ್ಯಶ್ರೀ ಬಸವರಾಜ (ಸೇಂ ಮೇರಿ), ಪ್ರಜ್ವಲ್ ಬಲಭೀಮ (ವಿವೇಕಾನಂದ ವಿದ್ಯಾ ನಿಕೇತನ),
ತೃತೀಯ: ಸೃಷ್ಟಿ ಬಸವರಾಜ (ಕೇಂದ್ರೀಯ ವಿದ್ಯಾಲಯ), ಸುಪ್ರೀತಾ ಸೂರ್ಯಕಾಂತ (ಸೇಂಟ್ ಜೋಸೆಫ್ ಕಾನ್ವೆಂಟ್), ಓಂ ಭೂತಾಲಿ, ಶ್ರೀಶಾಂತ ಮಲಕಣ್ಣ ಹಾಗೂ ಬಸವರಾಜ ಬಲಭೀಮ (ವಿವೇಕಾನಂದ ವಿದ್ಯಾ ನಿಕೇತನ).

**

ಮಕ್ಕಳು ತಮ್ಮ ವಿಚಾರಗಳನ್ನು, ಭಾವನೆಗಳನ್ನು ವ್ಯಕ್ತಪಡಿಸಲು ಚಿತ್ರಕಲೆ ಉತ್ತಮ ಮಾಧ್ಯಮ. ಈ ಮೂಲಕ ತಮ್ಮ ಅನಿಸಿಕೆಗಳನ್ನು ಹೊರಹಾಕಲು ಸಾಧ್ಯ
– ಸುವರ್ಣಾ ಭಗವತಿ, ಸಂಸ್ಥೆಯ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.