ADVERTISEMENT

ಭೂ ಅವ್ಯವಹಾರ: ಸಿಐಡಿ ತನಿಖೆಗೆ ಒತ್ತಾಯ

ಕುಸನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 107 ಎಕರೆ ಕೃಷಿ ಭೂಮಿ ವರ್ಗಾವಣೆ ಆರೋಪ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 4:56 IST
Last Updated 17 ಏಪ್ರಿಲ್ 2017, 4:56 IST
ಕಲಬುರ್ಗಿ:  ‘ನಗರದ ಸೇಡಂ ರಸ್ತೆಯ ಕುಸನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 107 ಎಕರೆ ಭೂಮಿಗೆ ಸಂಬಂಧಿಸಿದಂತೆ ಭಾರಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಿಐಡಿ ಅಥವಾ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಮಾಜಿ  ಸಚಿವ ಎಸ್‌.ಕೆ.ಕಾಂತಾ ಆಗ್ರಹಿಸಿದರು. 
 
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಅವ್ಯವಹಾರದಲ್ಲಿ ಪ್ರತಿಷ್ಠಿತ ಸಂಸ್ಥೆ ಮತ್ತು ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು’ ಎಂದರು. 
 
‘ಉತ್ತರ ಪ್ರದೇಶದ ಸೋಮಶೇಖರ ಸಿಂಗ್, ರಾಮಪಾಲ್ ರಾವತ್ ಮತ್ತು ಭಗವತ್ ಸಿಂಗ್ ಎಂಬುವರು 2005–06ರ ಅವಧಿಯಲ್ಲಿ ಕುಸನೂರು ಬಳಿ 107 ಎಕರೆ ಕೃಷಿ ಜಮೀನನ್ನು ಖರೀದಿಸಿ, ನಾಲ್ಕೇ ತಿಂಗಳಲ್ಲಿ ಕೃಷಿಯೇತರ ಜಮೀನಾಗಿ ಪರಿವರ್ತಿಸಿಕೊಂಡಿದ್ದಾರೆ. ಆದರೆ, ಖರೀದಿದಾರರು ಕೃಷಿಕರೇ ಎಂಬುದನ್ನು ಅಂದಿನ ತಹಶೀಲ್ದಾರ್‌ ಅಥವಾ ಹಿರಿಯ ಅಧಿಕಾರಿಗಳು ಪರಿಶೀಲಿಸಲಿಲ್ಲ’ ಎಂದು ಆರೋಪಿಸಿದರು.
 
‘ಕೆಲವೇ ದಿನಗಳಲ್ಲಿ ಸಹರಾ ಕಂಪೆನಿಯು ಲೇಔಟ್ ನಿರ್ಮಿಸಲು ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಕುಡಾ) ಅರ್ಜಿ ಸಲ್ಲಿಸಿದ್ದು, ಅದಕ್ಕೆ ಮಂಜೂರಾತಿ ದೊರೆತಿದೆ. ಇಂತಿಷ್ಟು ಅವಧಿಯೊಳಗೆ ಲೇಔಟ್‌ ಸಿದ್ಧಪಡಿಸುವಂತೆ ಕುಡಾ  ಕಂಪೆನಿಗೆ ಷರತ್ತು ವಿಧಿಸಿದೆ’ ಎಂದು ತಿಳಿಸಿದರು.
 
‘ಅದರಲ್ಲಿ 10 ಉದ್ಯಾನ  ಮತ್ತು 10 ಸಿ.ಎ ನಿವೇಶನ ಸೇರಿದಂತೆ ಒಟ್ಟು 30 ಎಕರೆ ಜಮೀನು ಕುಡಾ ಸ್ವತ್ತಾಗಿದೆ. ಅದರಲ್ಲಿ 7 ನಿವೇಶನಗಳನ್ನು ಕುಡಾ, ಸಮಾಜ ಕಲ್ಯಾಣ ಇಲಾಖೆ ಮತ್ತು ಇತರರಿಗೆ ಮಾರಾಟ ಮಾಡಿದೆ. ಸಮಾಜ ಕಲ್ಯಾಣ ಇಲಾಖೆಯು ಅಂಬೇಡ್ಕರ್‌ ಭವನ ಸಹ ನಿರ್ಮಿಸಿದೆ’ ಎಂದರು.
 
‘ಈಗ ಅದೇ ಉತ್ತರ ಪ್ರದೇಶದ ಮೂವರು ಸೇರಿಕೊಂಡು ಕಳಸ್ಕರ್ ಎಂಬ ಕಂಪೆನಿಗೆ ಜಮೀನು ಮಾರಾಟ ಮಾಡಿದ್ದಾರೆ. ಭೂಪ್ರದೇಶ ನಿವೇಶನ ರೂಪದಲ್ಲಿ ಪರಿವರ್ತನೆಗೊಂಡರೂ ಎಕರೆ ರೂಪದಲ್ಲಿ ಮಾರಾಟ ಮಾಡಿದ್ದಾರೆ. ಕಂಪೆನಿಯಲ್ಲಿ ಪ್ರಭಾವಿ ವ್ಯಕ್ತಿಗಳಾದ ಲಕ್ಷ್ಮಿ ದತ್ತಾತ್ರೇಯ ಪಾಟೀಲ, ರಾಜೂಗೌಡ ಮುಂತಾದವರ ಹೆಸರಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.
 
‘ಕುಡಾ ವ್ಯಾಪ್ತಿಯಲ್ಲಿ  ಎಲ್ಲಾ ಭೂ ವಹಿವಾಟು ನಡೆದ ನಂತರವೂ ಜಮೀನನ್ನು ಹೇಗೆ ಎಕರೆ ರೂಪದಲ್ಲಿ ಮಾರಾಟ ಮಾಡಲಾಯಿತು ಎಂಬುದರ ಬಗ್ಗೆ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.