ADVERTISEMENT

ಮ್ಯಾರಥಾನ್ ಓಟ ನಾಳೆ: ಮೇಯರ್

ನಗರದ ನಾಗರಿಕರಿಗೆ ಜಾಗೃತಿ: ‘ಸ್ವಚ್ಛ, ಹಸಿರು ಕಲಬುರ್ಗಿ’ಯತ್ತ ಪಾಲಿಕೆ ಚಿತ್ತ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 12:13 IST
Last Updated 14 ಜನವರಿ 2017, 12:13 IST
ಕಲಬುರ್ಗಿ: ಸ್ವಚ್ಛ ಮತ್ತು ಹಸಿರು ಕಲಬುರ್ಗಿ ಕುರಿತು ನಗರದ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆಯು ಜ. 15ರಂದು ಬೆಳಿಗ್ಗೆ 7.30 ಗಂಟೆಗೆ ಮ್ಯಾರಥಾನ್ ಓಟ ಹಮ್ಮಿಕೊಂಡಿದೆ.
 
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೇಯರ್ ಸೈಯದ್ ಅಹ್ಮದ್, ‘ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಮೂಲಕ ಸ್ವಚ್ಛ ಭಾರತ್ ಅಭಿಯಾನ ಯಶಸ್ವಿಗೊಳಿಸಲು ಈ ಓಟ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ನಗರದ ಶಾಲಾ– ಕಾಲೇಜು ವಿದ್ಯಾರ್ಥಿಗಳು, ನಾಗರಿಕರು, ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ)ಗಳ ಪ್ರತಿನಿಧಿಗಳು ಮತ್ತು ಪೌರಕಾರ್ಮಿಕರು ಭಾಗವಹಿಸುವರು. ಇದಾದ ಬಳಿಕ ಇಂದಿರಾ ಸ್ಮಾರಕ ಭವನ (ಟೌನ್‌ ಹಾಲ್‌)ದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ’ ಎಂದರು.
 
‘ನಗರದ ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಪೌರಕಾರ್ಮಿಕರು ಮಾನವ ಸರಪಳಿ ನಿರ್ಮಿಸುವರು. ಶಾಲಾ– ಕಾಲೇಜು ವಿದ್ಯಾರ್ಥಿಗಳು, ಸಂಘ– ಸಂಸ್ಥೆಗಳ ಪ್ರತಿನಿಧಿಗಳು ಓಟದಲ್ಲಿ ಪಾಲ್ಗೊಳ್ಳುವರು. ಮ್ಯಾರಥಾನ್‌ನಲ್ಲಿ ವಿಜೇತರಾದವರಿಗೆ ಪ್ರಥಮ ₹5 ಸಾವಿರ, ದ್ವಿತೀಯ ₹3 ಸಾವಿರ ಮತ್ತು ತೃತೀಯ ₹2 ಸಾವಿರ ನಗದು ಬಹುಮಾನ ವಿತರಿಸಲಾಗುವುದು’ ಎಂದು ತಿಳಿಸಿದರು.
 
‘ಅದೇ ದಿನ ಪೌರಕಾರ್ಮಿಕರು, ನಾಗರಿಕರು ಮತ್ತು ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿಗಳಿಗೆ ಬಳಕೆ ಮಾಡಿದ ಪ್ಲಾಸ್ಟಿಕ್ ಸಂಗ್ರಹಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಮೂರು ಗಂಟೆ ಅವಧಿಯಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸುವವರಿಗೆ ಪ್ರಥಮ ₹10 ಸಾವಿರ, ದ್ವಿತೀಯ ₹7,500 ಹಾಗೂ ತೃತೀಯ ₹5 ಸಾವಿರ ಬಹುಮಾನ ವಿತರಿಸಲಾಗುವುದು’ ಎಂದರು. 
 
‘ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಂಸದ ಮಲ್ಲಿಕಾರ್ಜುನ ಖರ್ಗೆ, ಶಾಸಕರಾದ ಖಮರುಲ್ ಇಸ್ಲಾಂ, ದತ್ತಾತ್ರೇಯ ಪಾಟೀಲ ರೇವೂರ ಸೇರಿದಂತೆ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಭಾಗವಹಿಸುವರು’ ಎಂದು ಹೇಳಿದರು. 
ವಿರೋಧ ಪಕ್ಷದ ನಾಯಕ ವಿಶಾಲ ದರ್ಗಿ, ಪಾಲಿಕೆ ಸದಸ್ಯರಾದ ಹುಲಿಗೆಪ್ಪ ಕನಕಗಿರಿ, ರಾಜು ಕಪನೂರು, ಶರಣು ಮೋದಿ, ಅನೀಮುದ್ದೀನ್ ಪಟೇಲ್, ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಪಿ.ಜಾಧವ್ ಇದ್ದರು.
 
**
ಶೀಘ್ರ ಬರಲಿದೆ ‘ಇ– ಶೌಚಾಲಯ’
‘ನಗರದ ಪ್ರಮುಖ ಆರು ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಇ–ಶೌಚಾಲಯ ಅಳವಡಿಸಲು ಯೋಜನೆ ರೂಪಿಸಲಾಗಿದ್ದು, ಶೀಘ್ರ ಅನುಷ್ಠಾನಗೊಳಿಸಲಾಗುವುದು’ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಪಿ.ಜಾಧವ್ ತಿಳಿಸಿದರು.
 
‘ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಅನುದಾನದಲ್ಲಿ ಇ– ಶೌಚಾಲಯ ಆರಂಭಿಸಲಾಗುತ್ತಿದೆ. ಪ್ರತಿ ಘಟಕಕ್ಕೆ ₹5.5 ಲಕ್ಷದಂತೆ, ₹33 ಲಕ್ಷ ವೆಚ್ಚವಾಗಲಿದೆ. ನಗರ ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಚೌಕ್ ಪ್ರದೇಶ, ಕೆಬಿಎನ್ ದರ್ಗಾ ಮತ್ತು ಸೇಡಂ ರಸ್ತೆ ವೃತ್ತದಲ್ಲಿ (ಖರ್ಗೆ ಪೆಟ್ರೋಲ್ ಬಂಕ್) ಇ–ಶೌಚಾಲಯ ಸ್ಥಾಪಿಸಲಾಗುವುದು’ ಎಂದು ಹೇಳಿದರು.
 
ಇ– ಶೌಚಾಲಯ ವಿಶೇಷ: ಎಸ್‌ಟಿಡಿ ಬೂತ್‌ನಂತೆ ಕಾಣುವ ಇ–ಶೌಚಾಲಯವು ಸ್ವಯಂ ಚಾಲಿತ ವ್ಯವಸ್ಥೆಯನ್ನು ಒಳಗೊಂಡಿದೆ. ದಿನದ 24 ಗಂಟೆಯೂ ಇಲ್ಲಿ ಸೇವೆ ಲಭ್ಯವಿದ್ದು, ನಾಣ್ಯ ಹಾಕಿದಾಗ ಬಾಗಿಲು ತೆರೆದುಕೊಳ್ಳುತ್ತದೆ. ಹೊರಬಂದ ತಕ್ಷಣ ಮತ್ತೆ ಬಾಗಿಲು ಹಾಕಿಕೊಳ್ಳುತ್ತದೆ. 
 
ಒಳಗಡೆ ಸಂಗೀತ, ಫ್ಯಾನ್, ಟಿಶ್ಯು ಪೇಪರ್, ಸುಗಂಧ ದ್ರವ್ಯ ಇರಲಿದ್ದು, ‘ಫ್ಲಶ್‌’ ಮಾಡಿ ಶೌಚಾಲಯ ಸ್ವಯಂ ಚಾಲಿತವಾಗಿ ಸ್ವಚ್ಛಗೊಳ್ಳಲಿದೆ. ಇದನ್ನು ನೋಡಿಕೊಳ್ಳಲು ಯಾವುದೇ ಸಿಬ್ಬಂದಿ ಅಗತ್ಯವಿಲ್ಲ.
 
**
17ರಂದು ಸ್ವಚ್ಛ ಸರ್ವೇಕ್ಷಣ ತಂಡ ಭೇಟಿ
‘ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಅಭಿಯಾನದ ಸ್ವಚ್ಛ ಸರ್ವೇಕ್ಷಣ ಸಮೀಕ್ಷಾ ತಂಡವು ಜ.17ರಂದು ನಗರಕ್ಕೆ ಭೇಟಿ ನೀಡಲಿದೆ. ಮೂರು ದಿನ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಸ್ವಚ್ಛತೆ ಕುರಿತು ಮಾಹಿತಿ ಸಂಗ್ರಹಿಸಲಿದೆ’ ಎಂದು ಮೇಯರ್ ಸೈಯದ್ ಅಹ್ಮದ್ ಹೇಳಿದರು.
 
‘ಈ ತಂಡವು ಇಲ್ಲಿನ ಮಾರುಕಟ್ಟೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಸಾರ್ವಜನಿಕ ಶೌಚಾಲಯ, ಬಯಲು ಶೌಚಾಲಯ ಮುಕ್ತ ವಾರ್ಡ್‌ಗಳಿಗೆ ಭೇಟಿ ನೀಡಿ ಸ್ವಚ್ಛತಾ ವ್ಯವಸ್ಥೆ ಪರಿಶೀಲಿಸಲಿದೆ. ಅಲ್ಲದೆ, ಘನತ್ಯಾಜ್ಯ ನಿರ್ವಹಣೆ, ಮನೆಮನೆ ಕಸ ಸಂಗ್ರಹದ ಬಗ್ಗೆಯೂ ಮಾಹಿತಿ ಪಡೆಯಲಿದೆ’ ಎಂದು ತಿಳಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.