ADVERTISEMENT

ಯುವಕನ ಕೊಲೆ: ಆರೋಪಿಗಳ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 6:56 IST
Last Updated 11 ಜುಲೈ 2017, 6:56 IST

ಕಲಬುರ್ಗಿ:  ಶೇಖ್ ಮಹಮ್ಮದ್ ನೂರ್ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಸೋಮವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ  ವಿಫಲವಾಗಿದೆ ಎಂದು ಆಪಾದಿಸಿದರು.

ಮೃತ ಶೇಖ್ ಮಹಮ್ಮದ್ ನೂರ್ ಬಡ ಕುಟುಂಬಕ್ಕೆ ಸೇರಿದ್ದು, ಕಟ್ಟಿಗೆ ಅಡ್ಡೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತನ ಸಾವಿನಿಂದ ಅವರ ಕುಟುಂಬವು ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ತಡರಾತ್ರಿ ಪ್ರತಿಭಟನೆ: ನೂರ್ ಸಾವಿನ ವಿಷಯ ತಿಳಿಯುತ್ತಿದ್ದಂತೆಯೇ ಭಾನುವಾರ ತಡರಾತ್ರಿ ಹಾಗರಗಾ ಕ್ರಾಸ್ ಬಳಿ ಸೇರಿದ ಸ್ಥಳೀಯರು ಪೊಲೀಸರ ವೈಫಲ್ಯದ ವಿರುದ್ಧ ಘೋಷಣೆ ಕೂಗಿದರು. ರಸ್ತೆ ಮಧ್ಯದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

***

ಚಿಕಿತ್ಸೆಗೆ ಸ್ಪಂದಿಸದೆ ಯುವಕ ಸಾವು

ನಗರದ ಹಾಗರಗಾ ರಸ್ತೆಯಲ್ಲಿ ದುಷ್ಕರ್ಮಿಗಳು ಹಚ್ಚಿದ್ದ ಬೆಂಕಿಯಿಂದ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಶೇಖ್ ಮಹಮ್ಮದ್ ನೂರ್, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ತಡರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಜುಲೈ 5ರಂದು ವಿಳಾಸ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕೆಸಿಟಿ ಕಾಲೇಜು ಬಳಿ ನಿಂತಿದ್ದ ನೂರ್ ಅವರನ್ನು ಬಲವಂತದಿಂದ ಅಪಹರಿಸಿ, ಬೈಕ್‌ನಲ್ಲಿ ಕರೆದೊಯ್ದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದರು. ಆಗ ಕಿರುಚಲು ಆರಂಭಿಸಿದ್ದ ನೂರ್ ಅವರನ್ನು ದಾರಿಹೋಕರು ಆಂಬುಲೆನ್ಸ್‌ನಲ್ಲಿ ಕರೆತಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.

ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರ ಸಲಹೆಯಂತೆ ಜುಲೈ 7ರಂದು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಬೆಂಕಿ ಹಚ್ಚಿದ್ದರಿಂದ ದೇಹದ ಶೇ 40ರಷ್ಟು ಭಾಗ ಸುಟ್ಟು ಹೋಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.