ADVERTISEMENT

ಸರ್ವರಿಗೂ ಆರೋಗ್ಯ ಭಾಗ್ಯ– ಕೆಪಿಎಂಇ ತಿದ್ದುಪಡಿ ಕಾಯ್ದೆ ಪೂರಕ-: ಸಚಿವ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 6:02 IST
Last Updated 29 ನವೆಂಬರ್ 2017, 6:02 IST
ಕೆ.ಆರ್.ರಮೇಶಕುಮಾರ್
ಕೆ.ಆರ್.ರಮೇಶಕುಮಾರ್   

ಕಲಬುರ್ಗಿ: ‘ರಾಜ್ಯದ ಎಲ್ಲ ಜನರಿಗೂ ಆರೋಗ್ಯ ಭಾಗ್ಯ ಒದಗಿಸಲು ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ 2017ರ (ಕೆಪಿಎಂಇ) ತಿದ್ದುಪಡಿ
ಕಾಯ್ದೆ ಪೂರಕವಾಗಲಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶಕುಮಾರ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಪಿಎಂಇ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗಿದೆ. ಅದು ಜಾರಿಯಾದ ಬಳಿಕ ರಾಜ್ಯದ ಎಲ್ಲಾ ನೋಂದಾಯಿತ ಆಸ್ಪತ್ರೆಗಳಲ್ಲಿ ಏಕರೂಪ ದರ ನಿಗದಿ ಮಾಡಲಾಗುವುದು. ಇದರಿಂದ 1.20 ಕೋಟಿ ಕುಟುಂಬಗಳಿಗೆ ಆರೋಗ್ಯ ಸೇವೆ ನೀಡಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

‘ಕೆಪಿಎಂಇ ತಿದ್ದುಪಡಿ ಮಸೂದೆಯನ್ನು ದುರ್ಬಗಲಗೊಳಿಸಿಲ್ಲ. ನಕಲಿ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸಲು ಅದರಲ್ಲಿ ಅವಕಾಶವಿದೆ. ರೋಗಿಗಳ ಸಾವು ಅಥವಾ ಅವಘಡಗಳಿಗೆ ಕಾರಣವಾಗುವ ವೈದ್ಯರಿಗೆ ದಂಡ ವಿಧಿಸಲಾಗುವುದು. ಈ ವಿಧೇಯಕವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ವಿರೋಧ ವ್ಯಕ್ತಪಡಿಸಿದ್ದು ಸರಿಯಲ್ಲ’ ಎಂದರು.

ADVERTISEMENT

‘ಮುಖ್ಯಮಂತ್ರಿ ಸೇರಿ ಎಲ್ಲ ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ರೋಗಿಗೆ ಬೇಕಾದ ಅಗತ್ಯ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರದಿದ್ದರೆ ಆಗ ಅವರನ್ನು ಬೇರೆ ಆಸ್ಪತ್ರೆಗೆ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಅವಶ್ಯಕವಿರುವ ಉಪಕರಣಗಳನ್ನು ನೀಡಲಾಗಿದೆ. ಜನೌಷಧಿ ಮಳಿಗೆಗಳನ್ನು ಆರಂಭಿಸಲಾಗಿದೆ. ಇಂದಿರಾ ಕ್ಯಾಂಟೀನ್‌ಗಳನ್ನು ಸಾಧ್ಯವಾದರೆ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಅಥವಾ ಆಸ್ಪತ್ರೆಗೆ ಸಮೀಪದಲ್ಲಿ ಆರಂಭಿಸಬೇಕು. ಇದರಿಂದ ಬಡ ರೋಗಿಗಳಿಗೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

‘ನಮ್ಮ ರಾಜ್ಯದ ರೋಗಿಗಳು ಚಿಕಿತ್ಸೆಗಾಗಿ ಪಕ್ಕದ ರಾಜ್ಯಗಳಿಗೆ ಹೋಗುವುದು ನಮಗೆ ಅವಮಾನಕರ ಸಂಗತಿ. ವೈದ್ಯರಿಗೂ ಅವಮಾನವಾಗಬೇಕು. ಬೇರೆಯವರು ನಮ್ಮಲ್ಲಿ ಬಂದು ಚಿಕಿತ್ಸೆ ಪಡೆಯಬೇಕೆ ಹೊರತು, ನಮ್ಮ ರಾಜ್ಯದ ರೋಗಿಗಳು ಬೇರೆಡೆ ಹೋಗಬಾರದು. ವೈದ್ಯರು ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.