ADVERTISEMENT

3,081 ಕಾರ್ಯಕರ್ತೆಯರಿಗೆ ಇಲ್ಲ ವೈಯಕ್ತಿಕ ಶೌಚಾಲಯ

ಗಣೇಶ ಚಂದನಶಿವ
Published 18 ಮೇ 2017, 9:12 IST
Last Updated 18 ಮೇ 2017, 9:12 IST
ಆಧಾರ: ಜಿಲ್ಲಾ ಪಂಚಾಯಿತಿ                          ಪ್ರಜಾವಾಣಿ ಗ್ರಾಫಿಕ್ಸ್
ಆಧಾರ: ಜಿಲ್ಲಾ ಪಂಚಾಯಿತಿ ಪ್ರಜಾವಾಣಿ ಗ್ರಾಫಿಕ್ಸ್   

ಕಲಬುರ್ಗಿ: ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಅದರಲ್ಲೂ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಪೈಕಿ ಶೇ 48ರಷ್ಟು ಜನರು ಇನ್ನೂ ವೈಯಕ್ತಿಕ ಶೌಚಾಲಯ ಹೊಂದಿಲ್ಲ!

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಲಬುರ್ಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ಅವರು ಮುತುವರ್ಜಿ ವಹಿಸಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಖ್ಯೆ 6,430. ಆ ಪೈಕಿ ಈ ವರೆಗೆ 3,357 ಜನರು ಮಾತ್ರ ವೈಯಕ್ತಿಕ ಶೌಚಾಲಯ ಹೊಂದಿದ್ದಾರೆ. 3,081ಜನ  ಇನ್ನೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿಲ್ಲ. ಅವರಲ್ಲಿ ಅಫಜಲಪುರ, ಆಳಂದ, ಚಿಂಚೋಳಿ, ಸೇಡಂ ತಾಲ್ಲೂಕಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ADVERTISEMENT

‘ನೀವೆಲ್ಲರೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲೇಬೇಕು ಎಂಬ ಕಟ್ಟಳೆಯನ್ನು ಸಿಇಒ ಅವರು ವಿಧಿಸಿರುವುದರಿಂದ ಎರಡು ತಿಂಗಳಲ್ಲಿ 704 ಜನ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಉಳಿದವರೂ ಮುಂದೆ ಬರುತ್ತಿದ್ದಾರೆ’ ಎನ್ನುತ್ತಾರೆ ಸ್ವಚ್ಛ ಭಾರತ್‌ ಮಿಷನ್‌ನ ರಾಜ್ಯ ಸಂಯೋಜಕಿ ಅನ್ನಪೂರ್ಣಾ ಉಪ್ಪಿನ.

ಜೇಣುಗೂಡು ಮಾದರಿ ಶೌಚಾಲಯ: ‘ಜೇನುಗೂಡು ಮಾದರಿಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಉತ್ತೇಜನ ನೀಡಲಾಗುತ್ತಿದೆ. ಇದರಲ್ಲಿ 4 ಅಡಿ ಆಳ, 4 ಅಡಿ ಅಗಲ ಇರುವ ಗುಂಡಿ ತೋಡಲಾಗುತ್ತದೆ. ತ್ಯಾಜ್ಯ ಸಂಗ್ರಹಕ್ಕೆ ಟ್ಯಾಂಕ್‌ ನಿರ್ಮಿಸುವುದಿಲ್ಲ. ಬದಲಿಗೆ ಇಟ್ಟಿಗೆಗಳಿಂದ ಗೋಡೆ ಕಟ್ಟಲಾಗುತ್ತಿದ್ದು, ಅದಕ್ಕೆ ಪ್ಲಾಸ್ಟರ್‌ ಮಾಡುವುದಿಲ್ಲ. ಮಲದಲ್ಲಿ ಶೇ 80ರಷ್ಟು ನೀರಿನ ಅಂಶವೇ ಇರುವುದರಿಂದ ಅದು ಭೂಮಿಯಲ್ಲಿ ಇಂಗುತ್ತದೆ. ಇಂತಹ ಗುಂಡಿ ತೋಡಿ ನಿರ್ಮಿಸುವ ಶೌಚಾಲಯವನ್ನು ಮನೆಮಂದಿ ಎಲ್ಲರೂ ಹತ್ತು ವರ್ಷ ಬಳಸಬಹುದು’ ಎನ್ನುತ್ತಾರೆ ಅವರು.

ನೀರು ಇಲ್ಲ ಎಂಬ ನೆಪ ಬೇಡ: ‘ನೀರಿನ ಕೊರತೆಯಿಂದ ಶೌಚಾಲಯ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ನೆಪ ಮಾತ್ರ. ನೀರು ಇಲ್ಲ ಎಂದು ಯಾರೂ ಸ್ನಾನ ಮಾಡುವುದನ್ನು ಬಿಡುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಶೌಚಾಲಯ ನಿರ್ಮಿಸಿಕೊಳ್ಳಬೇಕು’ ಎನ್ನುತ್ತಾರೆ ಅಧಿಕಾರಿಗಳು.

ಆರ್ಥಿಕ ನೆರವು: ಸ್ವಚ್ಛ ಭಾರತ್‌ ಮಿಷನ್‌ನಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವ ಬಡತನ ರೇಖೆಗಿಂತ ಮೇಲಿರುವ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ತಲಾ ₹12 ಸಾವಿರ ಅನುದಾನ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಈ ಅನುದಾನ ₹15 ಸಾವಿರ ಇದೆ. ಶಾಲಾ ಶೌಚಾಲಯಕ್ಕೆ ₹35 ಸಾವಿರ, ಅಂಗನವಾಡಿ ಶೌಚಾಲಯಕ್ಕೆ ₹15 ಸಾವಿರ, ಸಮುದಾಯ ಶೌಚಾಲಯಕ್ಕೆ ₹2 ಲಕ್ಷ ಅನುದಾನ ನೀಡಲಾಗುತ್ತಿದೆ.

‘ಇತರೆ ಫಲಾನುಭವಿಗಳಂತೆ ಈ ಕಾರ್ಯಕರ್ತೆಯರೂ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕು. ಗ್ರಾಮ ಪಂಚಾಯಿತಿಯವರು ಆ ಅರ್ಜಿ ಮತ್ತು ಸ್ಥಳ ಪರಿಶೀಲನೆ ನಡೆಸಿ ಅನುಮತಿ ನೀಡುತ್ತಾರೆ. ಶೌಚಾಲಯ ನಿರ್ಮಿಸಿಕೊಂಡ ನಂತರ ಫಲಾನುಭವಿ ಖಾತೆಗೆ ನೇರವಾಗಿ ಅನುದಾನವನ್ನು ಗ್ರಾಮ ಪಂಚಾಯಿತಿಯವರು ಜಮೆ ಮಾಡುತ್ತಾರೆ. ₹12 ಸಾವಿರ ಮೊತ್ತದಲ್ಲಿ ಅಥವಾ ಅದಕ್ಕೆ ಇನ್ನಷ್ಟು ಹಣ ಸೇರಿಸಿ ಅವರು ಶೌಚಾಲಯ ನಿರ್ಮಿಸಿಕೊಳ್ಳಬಹುದು’ ಎನ್ನುತ್ತಾರೆ ಅಧಿಕಾರಿಗಳು.

**

ಗುಂಡಗುರ್ತಿಯ ಗುಂಡಿಯ ಕತೆ!

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಅಧಿಕಾರಿ ಪ್ರವೀಣಪ್ರಿಯಾ ಅವರು ಹೇಳಿದ ಗುಂಡಗುರ್ತಿ ಗ್ರಾಮ ಗುಂಡಿಯ ಕತೆ ಹೀಗಿದೆ...

ಸಿಇಒ ಹೆಪ್ಸಿಬಾರಾಣಿ ಕೋರ್ಲಪಾಟಿ ಅವರು ಗುಂಡಗುರ್ತಿ ಗ್ರಾಮಕ್ಕೆ ಹೋಗಿದ್ದರು. ಆಶಾ ಕಾರ್ಯಕರ್ತೆಯೊಬ್ಬರು ಅವರಿಗೆ ಎದುರಾದರು. ಅವರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿಲ್ಲ ಎಂಬ ವಿಷಯ ತಿಳಿದು ಸಿಇಒ ಅವರ ಮನೆಗೆ ಹೋದರು. ‘ಶೌಚಾಲಯ ನಿರ್ಮಾಣಕ್ಕೆ ನೀವು ಗುಂಡಿ ತೋಡುವವರೆಗೂ ಇಲ್ಲಿಂದ ತೆರಳುವುದಿಲ್ಲ’ ಎಂದು ಕುಳಿತರು.

‘ಮೊಮ್ಮಗಳು ಗರ್ಭಿಣಿ. ಈ ಸಂದರ್ಭದಲ್ಲಿ ನಾವು ಮನೆಯಲ್ಲಿ ಗುಂಡಿ ತೋಡುವುದಿಲ್ಲ’ ಎಂದು ಆ ಆಶಾ ಕಾರ್ಯಕರ್ತೆಯ ತಾಯಿ ಹಟ ಹಿಡಿದರು. ಎಷ್ಟೇ ಮನವೊಲಿಸಿದರೂ ಆಕೆ ನಿಲುವು ಬದಲಿಸಲಿಲ್ಲ. ಕಲಬುರ್ಗಿಗೆ ಮರಳಿದ ಸಿಇಒ,  ಅಧಿಕಾರಿಗಳನ್ನು ಅಲ್ಲಿಗೆ ಕಳಿಸಿದರು. ತನ್ನ ಕೆಲಸಕ್ಕೆ ಕುತ್ತು ಬರಬಹುದು ಎಂದು ಭಯಗೊಂಡ ಆ ಆಶಾ ಕಾರ್ಯಕರ್ತೆ ತನ್ನ ಮನೆ ಬಿಟ್ಟು ಸರ್ಕಾರಿ ಜಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಗುಂಡಿ ತೋಡಿದರು.

ನಂತರ ಮನವೊಲಿಸಿ ಅವರ ಮನೆಯಲ್ಲಿಯೇ ಶೌಚಾಲಯ ನಿರ್ಮಿಸಲಾಯಿತು. ಆ ಅಜ್ಜಿಯ ಗರ್ಭಿಣಿ ಮೊಮ್ಮಗಳಿಗೆ  ಅಧಿಕಾರಿಣಿಯರು ಸೀಮಂತ ಕಾರ್ಯವನ್ನೂ ನೆರವೇರಿಸಿದರು.

**

ಜನ ಜಾಗೃತಿ ಹೊಣೆ ಹೊತ್ತಿರುವ ಇವರೆಲ್ಲ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಮಾದರಿಯಾಗಬೇಕು. ಜೂನ್‌ ಅಂತ್ಯದ ವೇಳೆಗೆ ಎಲ್ಲರಿಗೂ ಶೌಚಾಲಯ ನಿರ್ಮಿಸಿಕೊಡುವ ಗುರಿ ಹೊಂದಲಾಗಿದೆ.
-ಪ್ರವೀಣಪ್ರಿಯಾ, ಮುಖ್ಯ ಯೋಜನಾಧಿಕಾರಿ, ಜಿ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.