ADVERTISEMENT

ಕಲಬುರಗಿ | ಬಾರದ ಗ್ರಂಥಾಲಯ ಕರ; ಅಭಿವೃದ್ಧಿಗೆ ಗರ

ಕಲಬುರಗಿ ಪಾಲಿಕೆಯಿಂದ ₹1.69 ಕೋಟಿ, ಆಳಂದ ಪುರಸಭೆಯಿಂದ ₹17.63 ಲಕ್ಷ ಬಾಕಿ

ಬಸೀರ ಅಹ್ಮದ್ ನಗಾರಿ
Published 17 ನವೆಂಬರ್ 2023, 4:53 IST
Last Updated 17 ನವೆಂಬರ್ 2023, 4:53 IST
ಶರಣಬಸಪ್ಪ ಪಾಟೀಲ
ಶರಣಬಸಪ್ಪ ಪಾಟೀಲ   

ಕಲಬುರಗಿ: ಶಾಲೆಗಳು ಓದು ಕಲಿಸಿದರೆ, ಗ್ರಂಥಾಲಯಗಳು ಆ ಓದಿನ ಹವ್ಯಾಸ ಬದುಕಿನುದ್ದಕ್ಕೂ ಜೀವಂತವಾಗಿರಿಸುವ ಜೊತೆಗೆ ಜ್ಞಾನವೃದ್ಧಿಸುವ ಹೊಣೆ ನಿಭಾಯಿಸುತ್ತವೆ.‌ ಇಂಥ ಗ್ರಂಥಾಲಯಗಳು ಉಸಿರಾಡಲು ಸ್ಥಳೀಯ ಸಂಸ್ಥೆಗಳು ಪಾವತಿಸುವ ಕರವೇ(ಸೆಸ್‌) ‘ಜೀವದ್ರವ್ಯ’.

ಆದರೆ, ಈ ಕರ ಪಾವತಿ ಬಾಕಿಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದರಿಂದ ಜ್ಞಾನವೃದ್ಧಿಸುವ ಕೇಂದ್ರಗಳಾದ ಗ್ರಂಥಾಲಯಗಳು ಅಭಿವೃದ್ಧಿ ಇಲ್ಲದೆ ಸೊರಗುತ್ತಿವೆ.

ನಗರ ಕೇಂದ್ರ ಗ್ರಂಥಾಲಯ ಇಲಾಖೆಗೆ ಅಕ್ಟೋಬರ್‌ ಅಂತ್ಯದ ತನಕ ಕಲಬುರಗಿ ಮಹಾನಗರ ಪಾಲಿಕೆಯಿಂದ ಅಂದಾಜು ₹1.69 ಕೋಟಿ ಗ್ರಂಥಾಲಯ ಕರ ಬಾಕಿ ಬರಬೇಕಾಗಿದೆ.

ADVERTISEMENT

ನಗರ ಕೇಂದ್ರ ಗ್ರಂಥಾಲಯ ವ್ಯಾಪ್ತಿಯಲ್ಲಿ ವಿವಿಧೆಡೆ 20 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲ ಕೊರತೆ ಕಾಡುತ್ತಿದೆ.

‘ಕಲಬುರಗಿ ಮಹಾನಗರ ಪಾಲಿಕೆಯಿಂದ ಜೂನ್‌ನಲ್ಲಿ ₹25 ಲಕ್ಷ ಬಂದಿದ್ದು ಬಿಟ್ಟರೆ ಬೇರೆ ಹಣ ಬಂದಿಲ್ಲ. ಅದರಲ್ಲಿ ಓದುಗರಿಗೆ ನೀರು, ವಿದ್ಯುತ್‌ ಬಿಲ್‌, ದಿನಪತ್ರಿಕೆಗಳ ಬಿಲ್ ಪಾವತಿಯಂಥ ಅಗತ್ಯ ನಿರ್ವಹಣೆಯಷ್ಟೇ ಆಗುತ್ತಿದೆ.  ಹೊಸ ಪುಸ್ತಕ ಸೇರಿದಂತೆ ಯಾವುದೇ ಅಭಿವೃದ್ಧಿ ಕೆಲಸಗಳು ಸಾಧ್ಯವಾಗುತ್ತಿಲ್ಲ’ ಎಂಬುದು ಗ್ರಂಥಾಲಯದ ಸಿಬ್ಬಂದಿ ಬೇಸರ.

ಇನ್ನು, ಜಿಲ್ಲಾ ಗ್ರಂಥಾಲಯ ಇಲಾಖೆಯಡಿ ಎಂಟು ಗ್ರಂಥಾಲಯಗಳು, 9 ಅಲೆಮಾರಿ ಗ್ರಂಥಾಲಯ, ಕೊಳೆಗೇರಿಯ ಪ್ರದೇಶದ ನಾಲ್ಕು ಹಾಗೂ ಪಟ್ಟಣ ಪಂಚಾಯಿತಿಗಳ ನಾಲ್ಕು ಸೇರಿದಂತೆ 25 ಗ್ರಂಥಾಲಯಗಳು ಬರುತ್ತವೆ. ಜಿಲ್ಲಾ ಗ್ರಂಥಾಲಯ ಇಲಾಖೆಗೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಂದ ಸೆ‍ಪ್ಟೆಂಬರ್‌ ಕೊನೆಯ ತನಕ ಒಟ್ಟಾರೆ ₹41.39 ಲಕ್ಷ ಗ್ರಂಥಾಲಯ ಕರ ಪಾವತಿ ಬಾಕಿ ಉಳಿದಿದೆ.

ಈ ಪೈಕಿ ಆಳಂದ ಪುರಸಭೆಯು ಅತಿ ಹೆಚ್ಚು ಅಂದರೆ ₹17.63 ಲಕ್ಷ ಕರ ಬಾಕಿ ಉಳಿಸಿಕೊಂಡಿದೆ. ವಾಡಿ ಪುರಸಭೆಯು ಅತಿ ಕಡಿಮೆ ಅಂದರೆ ₹21 ಸಾವಿರ ಗ್ರಂಥಾಲಯ ಕರ ಪಾವತಿ ಮಾಡಬೇಕಿದೆ.

‘ನಗರ ಸ್ಥಳೀಯ ಸಂಸ್ಥೆಗಳು ನಿಯಮಿತವಾಗಿ ಗ್ರಂಥಾಲಯ ಕರ ಪಾವತಿಸುತ್ತಿಲ್ಲ. ಇದರಿಂದ ಗ್ರಂಥಾಲಯಗಳ ಅಭಿವೃದ್ಧಿಗೆ ತೊಡಕಾಗಿದೆ. ಈ ಕುರಿತು ಸೆಪ್ಟೆಂಬರ್‌ನಲ್ಲಿ ನಡೆದ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಕೂಡಲೇ ಗ್ರಂಥಾಲಯ ಕರ ಪಾವತಿಸುವಂತೆ ನಗರ–ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಿದ್ದರು. ಆದರೂ, ಪ್ರಯೋಜನವಾಗಿಲ್ಲ’ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಅಜಯಕುಮಾರ ಡಿ.

ಕರ ಅಭಾವದಿಂದ ಗ್ರಂಥಾಲಯಗಳು ಪುಸ್ತಕ ಮತ್ತು ಮೂಲಸೌಲಭ್ಯ ಕೊರತೆ ಎದುರಿಸುವಂತಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ

–ಶರಣಬಸಪ್ಪ ಪಾಟೀಲ ಉಪ ನಿರ್ದೇಶಕ ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆ

ಪಾಲಿಕೆಯಿಂದ ದೊಡ್ಡ ಮೊತ್ತದ ಕರ ಪಾವತಿ ಬಾಕಿಯಿದೆ. ಅದೆಲ್ಲವೂ ಬಂದರೆ ಓದುಗರಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ

–ಅಜಯಕುಮಾರ ಡಿ. ಉಪ ನಿರ್ದೇಶಕ ನಗರ ಕೇಂದ್ರ ಗ್ರಂಥಾಲಯ ಕಲಬುರಗಿ

ಹಣ ಅನ್ಯ ಉದ್ದೇಶಗಳಿಗೆ ಬಳಕೆ?

‘ಸಾರ್ವಜನಿಕ ಗ್ರಂಥಾಲಯ ಕಾಯ್ದೆ–1965ರ ನಿಯಮ 30ರ ಪ್ರಕಾರ ನಗರ–ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವಾಗ ಒಟ್ಟು ಮೊತ್ತದ ಶೇ 6ರಷ್ಟನ್ನು ಗ್ರಂಥಾಲಯ ಉಪಕರವಾಗಿ ಸಂಗ್ರಹಿಸುತ್ತವೆ. ಅದನ್ನು ಗ್ರಂಥಾಲಯಗಳ ಅಭಿವೃದ್ಧಿಗೆ ಬಳಸಲು ಗ್ರಂಥಾಲಯ ಇಲಾಖೆಗೆ ನೀಡಬೇಕು. ಆದರೆ ಅವು ಹಣ ಪಾವತಿಸಲು ಆಸಕ್ತಿ ತೋರುತ್ತಿಲ್ಲ. ಅದೇ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುತ್ತಿವೆ. ಅದನ್ನು ಪಾವತಿಸಲು ಪ್ರತ್ಯೇಕ ಖಾತೆ ನಿರ್ವಹಣೆ ಮಾಡಬೇಕು ಎಂಬ ನಿಯಮವೂ ಲೆಕ್ಕಕ್ಕೆ ಇಲ್ಲದಂತಾಗಿದೆ’ ಎಂದು ಗ್ರಂಥಾಲಯ ಇಲಾಖೆ ಸಿಬ್ಬಂದಿಯೊಬ್ಬರು ಬೇಸರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.