ADVERTISEMENT

ಮಹಿಳೆಯರ ಮಾಂಗ‌ಲ್ಯ ಕಳೆದಿದ್ದೇ ನರೇಂದ್ರ ಮೋದಿ: ಅಜಯ್ ಸಿಂಗ್

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 15:51 IST
Last Updated 26 ಏಪ್ರಿಲ್ 2024, 15:51 IST
ಅಜಯ್ ಸಿಂಗ್‌
ಅಜಯ್ ಸಿಂಗ್‌   

ಕಲಬುರಗಿ: ‘ಕೇಂದ್ರದಲ್ಲಿ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ 700ಕ್ಕೂ ಅಧಿಕ ರೈತ ಮಹಿಳೆಯರ ಮಾಂಗಲ್ಯ ಕಸಿದಿದ್ದು ನರೇಂದ್ರ ಮೋದಿ ಅವರೇ ಹೊರತು ಕಾಂಗ್ರೆಸ್ ಅಲ್ಲ’ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ತಿರುಗೇಟು ನೀಡಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಅವರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋಲುವ ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮಹಿಳೆಯರ ಮಂಗಳಸೂತ್ರವನ್ನು ಕಿತ್ತುಕೊಳ್ಳುವುದಾಗಿ ಸುಳ್ಳು ಹೇಳಿದ್ದಾರೆ. ಆದರೆ, ಅವರು ತಂದ ಕರಾಳ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಒಂದು ವರ್ಷದವರೆಗೆ ಮಳೆ, ಗಾಳಿ, ಚಳಿ ಎನ್ನದೇ ಧರಣಿ ಕುಳಿತಿದ್ದರು. ಆ ಸಂದರ್ಭದಲ್ಲಿಯೇ 700ಕ್ಕೂ ಅಧಿಕ ರೈತರು ಮೃತಪಟ್ಟರು. ಹೀಗಾಗಿ, ಆ ರೈತರ ಹೆಂಡತಿಯರ ಮಂಗಳಸೂತ್ರವನ್ನು ಕಳೆದವರು ಮೋದಿಯವರೇ’ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷ ಎಂದಿಗೂ ಎಂದಿಗೂ ಮಂಗಳಸೂತ್ರ ಕಸಿಯುವ ಕೆಲಸ ಮಾಡಿಲ್ಲ. ಮೋದಿಯವರು ಅಧಿಕಾರಕ್ಕೆ ಬರುವುದಕ್ಕೆ ಮುಂಚೆಯೇ ಕೇಂದ್ರದಲ್ಲಿ ನಮ್ಮ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿತ್ತು. ಆಗಲೂ ಹಲವು ಜನಪರ ಯೋಜನೆಗಳನ್ನು ತರುವ ಮೂಲಕ ಎಲ್ಲ ಜಾತಿ, ಸಮುದಾಯಗಳನ್ನು ಪ್ರಗತಿಯತ್ತ ಕೊಂಡೊಯ್ದಿತ್ತು ಎಂದು ಪ್ರತಿಪಾದಿಸಿದರು.

ADVERTISEMENT

‘ರಾಜ್ಯದಲ್ಲಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದ್ದು, ಎಲ್ಲ ವರ್ಗದವರಿಗೆ ಯೋಜನೆಯ ಲಾಭ ತಲುಪುತ್ತಿದೆ. ಇದೇ ಮಾದರಿಯನ್ನು ದೇಶದಾದ್ಯಂತ ಅನುಸರಿಸಲು ನಮ್ಮ ಪಕ್ಷ ಮುಂದಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹಲವು ಗ್ಯಾರಂಟಿ ಯೋಜನೆಗಳನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಗೋಪಾಲರೆಡ್ಡಿ ಮುದಿರಾಜ, ಮುಖಂಡ ಸೋಮಶೇಖರ ಹಿರೇಮಠ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.