ADVERTISEMENT

ಸೇಡಂ | ಉತ್ತಮ ಮಳೆ; ಗರಿಗೆದರಿದ ಕೃಷಿ ಚಟುವಟಿಕೆ

ಸೇಡಂ: ಈವರೆಗೆ ಶೇ 58 ಮುಂಗಾರು ಬಿತ್ತನೆ

ಅವಿನಾಶ ಬೋರಂಚಿ
Published 6 ಜುಲೈ 2023, 6:34 IST
Last Updated 6 ಜುಲೈ 2023, 6:34 IST
ಸೇಡಂ ಪಟ್ಟಣದ ಕಮಲಾವತಿ ನದಿಯಲ್ಲಿ ನೀರು ಹರಿದು ಬಂದಿರುವುದು
ಸೇಡಂ ಪಟ್ಟಣದ ಕಮಲಾವತಿ ನದಿಯಲ್ಲಿ ನೀರು ಹರಿದು ಬಂದಿರುವುದು   

ಸೇಡಂ: ಮುಂಗಾರು ತಡವಾಗಿದ್ದರಿಂದ ತಾಲ್ಲೂಕಿನ ರೈತರಲ್ಲಿ ಆತಂಕ ಮನೆಮಾಡಿತ್ತು. ಆದರೆ ಮಂಗಳವಾರ ರಾತ್ರಿ ಸುರಿದ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು ಮತ್ತು ಮುಂಗಾರು ಬೆಳೆಗಳಿಗೆ ಮತ್ತೇ ಭರವಸೆ ಮೂಡಿಸಿದೆ.

ಕೃಷಿ ಇಲಾಖೆಯ ಮಾಹಿತಿಯಯಂತ ತಾಲ್ಲೂಕಿನಾದ್ಯಂತ 85,930 ಹೆಕ್ಟೆರ್ ಮುಂಗಾರು ಬಿತ್ತನೆ ಗುರಿ ಹೊಂದಿದೆ. ಇದರಲ್ಲಿ ಈಗಾಗಲೇ 49,821 ಸಾವಿರಕ್ಕೂ ಅಧಿಕ ಹೆಕ್ಟೇರ್ ಬಿತ್ತನೆಯಾಗಿದೆ. ಶೇ 58 ಮುಂಗಾರು ಬಿತ್ತನೆಯಾಗಿದ್ದು ಮಳೆಯ ಅಭಾವದಿಂದಾಗಿ ರೈತರು ಮುಂಗಾರು ಬಿತ್ತನೆಯನ್ನು ಸ್ಥಗಿತಗೊಳಿಸಿದ್ದರು.

ಬೆಳೆಗಳಿಗೆ ಜೀವಕಳೆ: ತಾಲ್ಲೂಕಿನಾದ್ಯಂತ ಹೆಸರು, ಉದ್ದು, ತೊಗರಿ ಸೇರಿದಂತೆ ಬಿತ್ತಿರುವ ಇನ್ನಿತರ ಮುಂಗಾರು ಬೆಳೆಗಳಿಗೆ ಮಂಗಳವಾರ ಸುರಿದ ಮಳೆ ಜೀವಕಳೆ ಬಂದಂತಾಗಿದೆ.

ADVERTISEMENT
ತಾಲ್ಲೂಕಿನಲ್ಲಿ ಮುಂಗಾರು ಮಳೆಯ ಕೊರತೆಯಿಂದ ನಿರ್ಧಿಷ್ಟ ಪ್ರಮಾಣದ ಬಿತ್ತನೆಯಾಗಿರಲಿಲ್ಲ. ಈಗ ಮತ್ತೇ ಮುಂಗಾರು ಬಿತ್ತನೆಯಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ
– ವೈ.ಎಲ್ ಹಂಪಣ್ಣ ಸಹಾಯಕ ಕೃಷಿ ನಿರ್ದೇಶಕ ಸೇಡಂ

ಹೆಸರು ಬೆಳೆಗಳು ಈಗಾಗಲೇ ಎತ್ತರಕ್ಕೆ ಬೆಳೆದಿದ್ದು, ನಳನಳಿಸುತ್ತಿವೆ. ಅಲ್ಲದೆ ತಾಲ್ಲೂಕಿನ ವಿವಿಧೆಡೆ ಮುಂಗಾರು ಬಿತ್ತನೆ ನಡೆದರೆ, ಮತ್ತೊಂದೆಡೆ ಹೊಲಗಳಲ್ಲಿ ಕಳೆ (ಸದಿ) ತೆಗೆಯುವ ಕೆಲಸ ನಡೆದಿವೆ. ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆಗಳು ಸುರಿದ ಮಳೆಯಿಂದ ಗರಿಗೆದರಿವೆ.

ಸೇಡಂ ತಾಲ್ಲೂಕು ರಂಜೋಳ ಗ್ರಾಮದಲ್ಲಿ ಹೊಲವೊಂದರಲ್ಲಿ ಹೆಸರು ಬೆಳೆ ಬೆಳೆದಿರುವುದು

ತುಂಬಿ ಹರಿದ ನಾಲಾಗಳು: ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಹಳ್ಳ, ನಾಲಾಗಳು, ಚರಂಡಿಗಳು ತುಂಬಿ ಹರಿದಿವೆ. ಇದರಿಂದಾಗಿ ತಾಲ್ಲೂಕಿನ ಕಮಲಾವತಿ ಮತ್ತು ಕಾಗಿಣಾ ನದಿಗಳಿಗೆ ನೀರು ಹರಿದು ಬಂದಿದೆ.

ಮುಂಗಾರು ಮಳೆಗಾಗಿ ನಮ್ಮೂರಿನಲ್ಲಿ ಸಪ್ತ ಭಜನೆ ಮಾಡಿದ್ದೇವೆ. ದೈವ ಕೃಪೆಯಿಂದ ಉತ್ತಮ ಮಳೆಯಾಗಿದ್ದು ಸಂತಸ ತಂದಿದೆ
– ರಾಮ್ಲುನಾಯಕ ರಾಠೋಡ ಕದಲಾಪುರ ರೈತ

ಮಳೆ ಪ್ರಮಾಣ: ತಾಲ್ಲೂಕಿನಾದ್ಯಂತ ಮಂಗಳವಾರ ಸುರಿದ ಮಳೆ ಮುಂಗಾರಿನಲ್ಲಿ ಮೊದಲ ಮಳೆ ದಾಖಲೆಯಾಗಿದೆ. ತಾಲ್ಲೂಕಿನ ವಿವಿಧೆಡೆ ಸೇಡಂ 16.4 ಮಿ.ಮೀ, ಆಡಕಿ 58.0 ಮಿ.ಮೀ, ಮುಧೋಳ 87.0 ಮಿ.ಮೀ, ಕೋಡ್ಲಾ 23.4 ಮತ್ತು ಕೋಲ್ಕುಂದಾ 86.05 ಮಳೆಯಾಗಿದೆ. ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ 87.0 ಮಿ.ಮೀ ದಾಖಲೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.