ADVERTISEMENT

ಆರೋಪ,ಪ್ರತ್ಯಾರೋಪಕ್ಕೆ ನಗರಸಭೆ ಸಾಕ್ಷಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 6:51 IST
Last Updated 15 ಜುಲೈ 2017, 6:51 IST

ಮಡಿಕೇರಿ: ‘ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಮೇಲೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಸದಸ್ಯರೂ ಆಗಿರುವ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್‌. ರಮೇಶ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಚಿಂತನೆ ನಡೆಸಲಾಗಿದೆ’ ಎಂದು ಕಾಂಗ್ರೆಸ್ ಸದಸ್ಯ ನಂದಕುಮಾರ್ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐ.ಟಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯೊಬ್ಬರನ್ನು  ನಗರಸಭೆಯಿಂದ ಹೊರಗೆ ಕಳುಹಿಸಬೇಕೆಂದು ಮೊದಲನಿಂದಲೂ ಪ್ರಯತ್ನ ನಡೆಸುತ್ತಿದ್ದಾರೆ.

ಅದು ಫಲಸದೇ ಇರುವಾಗ ನಗರಸಭೆಯ ಟಿ.ವಿಯಲ್ಲಿ ನೀಲಿಚಿತ್ರ ಪ್ರಸಾರವಾಗಿದೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಆ ಮಹಿಳೆಯೇ ವಿಭಾಗವನ್ನು ನಿರ್ವಹಣೆ ಮಾಡುತ್ತಿರುವ ಕಾರಣ ಹೊರಹಾಕಲು ಸುಲಭವಾಗಲಿದೆ ಎಂದು ಉಪಾಧ್ಯಕ್ಷ ಟಿ.ಎಸ್‌. ಪ್ರಕಾಶ್‌, ರಮೇಶ್‌ ಈ ಪಿತೂರು ನಡೆಸಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

ADVERTISEMENT

‘ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌ ಅವರ ಬಳಿಯೂ ಚರ್ಚಿಸಲಾಗಿದೆ. ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ನೀಡ ಲಾಗಿದ್ದು 15 ದಿನದಲ್ಲಿ ವರದಿ ಬರಲಿದೆ’ ಎಂದು ನಂದಕುಮಾರ್‌ ಹೇಳಿದರು.

‘ಕಾವೇರಮ್ಮ, ಚುಮ್ಮಿ ದೇವಯ್ಯಗೆ ಮಾತ್ರ ಸಿಬ್ಬಂದಿಗಳು ಮಾಹಿತಿ ಕೊಡುತ್ತಾರೆ ಎನ್ನುವ ಕಾರಣ ನೀಡಿ ಕಿರುಕುಳ ಆರಂಭಿಸಿದ್ದಾರೆ. ಕಿರುಕುಳದಿಂದ ಬೇಸತ್ತು ಸಹಾಯಕ ಎಂಜಿನಿಯರ್‌ ಅರುಣ್‌ ಎಂಬುವರು ವರ್ಗಾವಣೆ ಕೋರಿದ್ದಾರೆ. ಅವರಿಗೆ ಸಭೆಯಲ್ಲೇ ಕೊಲೆ ಬೆದರಿಕೆ ಹಾಕಿದ್ದರು’ ಎಂದು ಆಪಾದಿಸಿದರು.

‘ಗುತ್ತಿಗೆ ಅವ್ಯವಹಾರಕ್ಕೆ ಅಧ್ಯಕ್ಷರು ಸ್ಪಂದಿಸುತ್ತಿಲ್ಲ ಎಂದು ಅಪಪ್ರಚಾರಕ್ಕೆ ನಡೆಸಲಾಗುತ್ತಿದೆ. ವರದಿ ಬಂದ ಬಳಿಕ ಪ್ರಕಾಶ್‌, ರಮೇಶ್‌ ವಿರುದ್ಧ ಬೆದರಿಕೆ, ಕಿರುಕುಳ ಆರೋಪದಡಿ  ಸ್ವತಃ ಮಹಿಳೆ ಪ್ರಕರಣ ದಾಖಲಿಸಿದ್ದಾರೆ. ಅಧ್ಯಕ್ಷರ ವಿರುದ್ಧದ ಹೇಳಿಕೆ ಖಂಡಿಸಿ ಮಾನನಷ್ಟ ಮೊಕದ್ದಮೆ ದಾಖಲಿಸಲು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ’ ಎಂದು ನಂದಕುಮಾರ್‌ ಸ್ಪಷ್ಟನೆ ನೀಡಿದರು.

‘ಕುಟುಂಬದ ವಿರುದ್ಧ ಆರೋಪ ಮಾಡಲೇ?: ‘ನಗರಸಭೆಯ ಐ.ಟಿ ವಿಭಾಗದಲ್ಲಿ ಪೆನ್‌ಡ್ರೈವ್‌, ಸಿ.ಡಿ ಇಲ್ಲ. ಸದಸ್ಯರು, ಸಿಬ್ಬಂದಿ ಸಹ ವೈಫೈ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಿಂದೆ ಸಹ ಚಾಲಕರೊಬ್ಬರು ಮೊಬೈಲ್‌ನಲ್ಲಿ ವೀಕ್ಷಣೆ ಮಾಡುತ್ತಿದ್ದ ಫೋಟೊ ಟಿ.ವಿಯಲ್ಲಿ ಪ್ರಸಾರವಾಗಿತ್ತು. ಜುಲೈ 5ರಂದು ನೀಲಿಚಿತ್ರವಾಗಲಿ, ಅಸಭ್ಯ ಚಿತ್ರವಾಗಲಿ ಪ್ರಸಾರವಾಗಿಲ್ಲ.

ಇದನ್ನೇ ನೆಪವಾಗಿಸಿಕೊಂಡು ರಮೇಶ್‌ ಅವರು ಅಧ್ಯಕ್ಷರಿಗೆ ಮಾನ ಮರ್ಯಾದೆ ಇಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ನಾನು ಅವರ ಕುಟುಂಬದ ವಿರುದ್ಧ ಆರೋಪ ಮಾಡಲೇ’ ಎಂದು ಪ್ರಶ್ನಿಸಿದರು.

‘ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ ಅವರೇ ಕಾರಣವಾಗಿದ್ದಾರೆ. ತನಿಖೆ ನಡೆಯಲಿ. ಯಾರೇ ತಪ್ಪಿತಸ್ಥರಾಗಿದ್ದರೂ ಕ್ರಮ ಕೈಗೊಳ್ಳುತ್ತೇನೆ. ಅದನ್ನು ಹೊರತುಪಡಿಸಿ ಅಧ್ಯಕ್ಷರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ, ವಿಶ್ವಾಸವಿಲ್ಲವೆಂದು ಆಪಾದಿಸುವುದು ಸರಿಯಲ್ಲ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.