ADVERTISEMENT

ಕಲ್ಯಾಣ ಕಾರ್ಯಕ್ಕೆ ಪ್ರಧಾನಿ ಒತ್ತು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 7:06 IST
Last Updated 16 ಸೆಪ್ಟೆಂಬರ್ 2017, 7:06 IST

ಮಡಿಕೇರಿ: ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಮತ್ತು ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಆಶ್ರಯದಲ್ಲಿ ಶುಕ್ರವಾರ ‘ಕಾರ್ನಿಯ ಅಂಧತ್ವ ಮುಕ್ತ ಅಭಿಯಾನ’ಕ್ಕೆ ಚಾಲನೆ ನೀಡಲಾಯಿತು. ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ‘ದೇಶದ ನಾಗರಿಕನಿಗೆ ತಮ್ಮ ಜವಾಬ್ದಾರಿ ಏನೆಂದು ನೆನಪಿಸಿದ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ; ಪ್ರಧಾನಿ ಕಳೆದ ಮೂರು ವರ್ಷಗಳಲ್ಲಿ ತಮ್ಮ ಜನಮುಖಿ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳಿಂದ ದೇಶದ ಮನೆಮನೆಗಳಲ್ಲಿ ಗೌರವ, ಪ್ರೀತಿಗೆ ಪಾತ್ರರಾಗಿದ್ದಾರೆ’ ಎಂದು ಬಣ್ಣಿಸಿದರು.
‘ದೃಷ್ಟಿದಾನ ಶ್ರೇಷ್ಠ ದಾನಗಳಲ್ಲಿ ಒಂದು; ಎಲ್ಲರೂ ಈ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು’ ಎಂದು ಹೇಳಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ‘ಪಂಚೇಂದ್ರಿಯಗಳಲ್ಲಿ ಕಣ್ಣು ಮಹತ್ವದ ಸ್ಥಾನ ಪಡೆದಿದ್ದು ದಶಕಗಳ ಹಿಂದೆಯೇ ತಮ್ಮ ಗುರುಗಳಾದ ಬಿ.ಆರ್. ಶಿವಕುಮಾರ್ ಮತ್ತು ಸಮಾನ ಮನಸ್ಕರು ಅಶ್ವಿನಿ ಆಸ್ಪತ್ರೆಯಲ್ಲಿ ನೇತ್ರ ಚಿಕಿತ್ಸೆ ಪ್ರಾರಂಭ ಮಾಡಿದ್ದಾರೆ’ ಎಂದು ಹೇಳಿದರು.

ನೇತ್ರ ದಾನದಂತಹ ಮಹತ್ವ ಪೂರ್ಣ ಕಾರ್ಯಕ್ರಮವೊಂದನ್ನು ಆಲೋಚಿಸಿ ಪಕ್ಷದ ಯುವ ಮೋರ್ಚಾದ ಘಟಕದ ಮೂಲಕ ದೇಶ ವ್ಯಾಪಿ ಸಂಚಲನ ಮೂಡಿಸಿದ ಪ್ರಧಾನಿ ನರೇಂದ್ರ ಮೋದಿಯನ್ನು ನಾವೆಲ್ಲರೂ ಅಭಿನಂದಿಸಬೇಕು ಎಂದು ಹೇಳಿದರು.

ADVERTISEMENT

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ‘ದೇಶಕ್ಕೆ ನಾನೇನು ಕೊಡಬಲ್ಲೆ ಎಂಬ ಚಿಂತನೆ ಬದಲಾಗಿ ದೇಶ ನನಗೇನು ಕೊಟ್ಟಿದೆ ಎಂಬ ಚಿಂತನೆ ನಮ್ಮಲ್ಲಿರುವುದು ದುರ್ದೈವ’ ಎಂದು ವಿಷಾದಿಸಿದರು.

ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಬಿ.ಸಿ. ನವೀನ್ ಕುಮಾರ್, ಮನುಷ್ಯನಿಗೆ ಅಲ್ಪ ಪ್ರಮಾಣದ ಅಂಗವಿಕಲತೆಯನ್ನು ಸಹಿಸಲು ಸಾಧ್ಯವಿಲ್ಲ, ದೃಷ್ಟಿದೋಷ ವಿದ್ದರೆ ಎಷ್ಟುಕಷ್ಟ ಎಂಬುದನ್ನು ಊಹಿಸಲು ಸಾಧ್ಯವಿಲ್ಲ, ದೇಶದಲ್ಲಿ ವರ್ಷಕ್ಕೆ ಸರಾಸರಿ ಒಂದು ಕೋಟಿ ಜನ ಮರಣ ಹೊಂದುತ್ತಿದ್ದರೂ ಕೇವಲ 50 ಸಾವಿರ ಮಂದಿ ಮಾತ್ರ ನೇತ್ರದಾನ ಮಾಡುತ್ತಿದ್ದಾರೆ. ದೇಶದಲ್ಲಿ ವಾರ್ಷಿಕವಾಗಿ 68 ಲಕ್ಷ ಕಾರ್ನಿಯ ಬೇಡಿಕೆಯಿದ್ದು ದೇಶದ ಒಂದೂವರೆ ಕೋಟಿ ಅಂಧರಲ್ಲಿ ಶೇ 60ರಷ್ಟು ಮಕ್ಕಳಿದ್ದಾರೆಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿಯ ರಾಜ್ಯ ಕಾರ್ಯದರ್ಶಿ ಎ.ಕೆ. ಮನು ಮುತ್ತಪ್ಪ, ಜಿಲ್ಲಾ ಅಧ್ಯಕ್ಷ ಬಿ.ಬಿ. ಭಾರತೀಶ್‌, ಎಸ್.ಜಿ. ಮೇದಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕೆ. ಅರುಣಕುಮಾರ್, ಬಿ.ಕೆ. ಜಗದೀಶ್, ಕಾಳನ ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.