ADVERTISEMENT

ಕೊಡಗಿನಲ್ಲೂ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 8:44 IST
Last Updated 18 ನವೆಂಬರ್ 2017, 8:44 IST

ಮಡಿಕೇರಿ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ವಿರೋಧಿಸಿ ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳ ವೈದ್ಯರು ಮುಷ್ಕರ ನಡೆಸುತ್ತಿದ್ದು, ಶುಕ್ರವಾರ ಅದರ ಬಿಸಿ ಕೊಡಗು ಜಿಲ್ಲೆಗೂ ತಟ್ಟಿತು.

ಜಿಲ್ಲೆಯಲ್ಲಿ 12 ಖಾಸಗಿ ಆಸ್ಪತ್ರೆಗಳು, 200ಕ್ಕೂ ಹೆಚ್ಚು ಕ್ಲಿನಿಕ್‌ಗಳಿವೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಯಾವುದೇ ಖಾಸಗಿ ನರ್ಸಿಂಗ್‌ ಹೋಂ ಇಲ್ಲ. ಬರೀ ಕ್ಲಿನಿಕ್‌ಗಳಿವೆ. ಮಡಿಕೇರಿ ಹಾಗೂ ವಿರಾಜಪೇಟೆಯಲ್ಲಿ ನರ್ಸಿಂಗ್‌ ಹೋಂಗಳಿದ್ದು ಶುಕ್ರವಾರ ಹೊರ ರೋಗಿಗಳ ಚಿಕಿತ್ಸಾ ವಿಭಾಗವನ್ನು ಸಂಪೂರ್ಣ ಸ್ಥಗಿತಗೊಳಿಸುವ ಮೂಲಕ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆಯ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲಾಯಿತು.

ರಾಜ್ಯ ಸಂಘದ ನಿರ್ಧಾರ ಆಧರಿಸಿ ಶುಕ್ರವಾರದಿಂದ ಸೇವೆ ಆರಂಭಿಸುವುದಾಗಿ ಕೊಡಗು ಜಿಲ್ಲೆಯ ಖಾಸಗಿ ವೈದ್ಯರು ತಿಳಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಡಾ.ಮೋಹನ್‌ ಅಪ್ಪಾಜಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ಪಷ್ಟನೆ ನೀಡಿದ್ದರು. ಸರ್ಕಾರದ ಜತೆಗಿನ ಮಾತುಕತೆ ವಿಫಲವಾಗುತ್ತಿದ್ದು ಜಿಲ್ಲೆಯಲ್ಲೂ ವೈದ್ಯರು ಪ್ರತಿಭಟನೆ ಆರಂಭಿಸಿದರು.

ADVERTISEMENT

ಮಡಿಕೇರಿಯಲ್ಲಿ ಮೂರು ಖಾಸಗಿ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದ್ದು ಸೇವೆ ಬಂದ್‌ ಮಾಡಿವೆ. ಎಕ್ಸ್‌ರೇ ವಿಭಾಗ, ತುರ್ತು ಚಿಕಿತ್ಸೆ ವಿಭಾಗ, ಡಯಾಲಿಸಿಸ್‌ ಅನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಖಾಸಗಿ ಆಸ್ಪತ್ರೆ ನಂಬಿ ಬಂದವರು ಪರದಾಡಿದರು. ಆದರೆ, ಯಾವುದೇ ಅಹಿತಕರ ಘಟನೆಯ ವರದಿಯಾಗಿಲ್ಲ.

ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳು: ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಸ್ಥಗಿತಗೊಂಡಿರುವ ಕಾರಣ ಮಡಿಕೇರಿಯ ಜಿಲ್ಲಾ ಆಸ್ಪತ್ರೆ, ಜಿಲ್ಲೆಯ ವಿವಿಧ ಪ್ರಾಥಮಿಕ ಕೇಂದ್ರಗಳತ್ತ ರೋಗಿಗಳು ಮುಖಮಾಡಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ರೋಗಿಗಳು ಕಂಡುಬಂದರು.

ಜಿಲ್ಲೆಯವರು ಹೆಚ್ಚಾಗಿ ತುರ್ತು ಚಿಕಿತ್ಸೆಗಳಿಗೆ ಸುಳ್ಯ ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ತೆರಳುತ್ತಾರೆ. ಅಲ್ಲಿಗೆ ಹೋದವರೂ ಚಿಕಿತ್ಸೆ ಸಿಗದೆ ತೊಂದರೆ ಅನುಭವಿಸಿದರು.

‘ಗುರುವಾರ ಶೇ 10ರಷ್ಟು ಆಸ್ಪತ್ರೆಗಳು ಮಾತ್ರ ಚಿಕಿತ್ಸೆ ಸ್ಥಗಿತಗೊಳಿಸಿದ್ದವು; ಶುಕ್ರವಾರ ಶೇ 75ರಷ್ಟು ಆಸ್ಪತ್ರೆಗಳು ಕಾರ್ಯ ನಿರ್ವಹಿಸಲಿಲ್ಲ’ ಎಂದು ವೈದ್ಯರೊಬ್ಬರು ಮಾಹಿತಿ ನೀಡಿದರು. ಇನ್ನು ಖಾಸಗಿ ಆಸ್ಪತ್ರೆ ಬಳಿಯಿರುವ ಮೆಡಿಕಲ್‌ ಶಾಪ್‌ಗಳ ಮುಂದೆಯೂ ಶುಕ್ರವಾರ ಬಿಕೊ ಎನ್ನುವ ವಾತಾವರಣವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.