ADVERTISEMENT

ಜಾನುವಾರು ಜಾತ್ರೆ: ಗಗನಕ್ಕೇರಿದ ರಾಸು ಬೆಲೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 6:01 IST
Last Updated 6 ಫೆಬ್ರುವರಿ 2017, 6:01 IST

ಶನಿವಾರಸಂತೆ: ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಯಲ್ಲಿ ಪ್ರದರ್ಶನ ಹಾಗೂ ಮಾರಾಟವಾಗುತ್ತಿರುವ ಜಾನುವಾರು  ಸಂಖ್ಯೆ ಕಡಿಮೆಯಿದ್ದರೂ, ರಾಸುಗಳ ಬೆಲೆ ಮಾತ್ರ ಗಗನಕ್ಕೇರಿದೆ.

ಜಾತ್ರೆ ಆರಂಭವಾಗಿ 10 ದಿನಗಳಾಗಿದ್ದು, ಜಾತ್ರೆಯಲ್ಲಿ ಒಂದು ಜೋಡಿ ಎತ್ತುಗಳಿಗೆ ₹40 ಸಾವಿರದಿಂದ ₹ 85 ಸಾವಿರ ಬೆಲೆ ಹೇಳಲಾಗುತ್ತಿದೆ. ಜಾತ್ರೆಯಲ್ಲಿ ಹಲ್ಲು ಮೂಡದ, 2 ಹಲ್ಲು ಹಾಗೂ 4 ಹಲ್ಲು ಬಂದಿರುವ ಎತ್ತುಗಳು ಹಾಗೂ ಜರ್ಸಿ ಕ್ರಾಸ್ ಹಸುಗಳನ್ನು ಹೆಚ್ಚಾಗಿ ಮಾರಾಟ ಮಾಡಲಾಗುತ್ತಿದೆ.
ಒಂದು ಕರುವಿರುವ ಎರಡು ಹಲ್ಲಿನ ಹಸುಗಳಿಗೆ ₹ 25 ಸಾವಿರದಿಂದ ₹ 35 ಸಾವಿರ ಬೆಲೆ ಹೇಳಲಾಗುತ್ತಿದೆ.

ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ಮಾದನೂರು ಗ್ರಾಮದ ರೈತ ಪುಟ್ಟೇಗೌಡ ಹಾಗೂ ಸಂಬಂಧಿ ಪ್ರದೀಪ್,ಜಾತ್ರೆಯಲ್ಲಿ ಮಾರಾಟ ಹಾಗೂ ಪ್ರದರ್ಶನಕ್ಕಾಗಿ 4 ಜೊತೆ ಹೋರಿಗಳನ್ನು ತಂದಿದ್ದು, ಅದರಲ್ಲಿ ಹಲ್ಲುಗಳೇ ಮೂಡದ ಎರಡೂವರೆ ವರ್ಷದ  ಹಳ್ಳಿಕಾರ್ ತಳಿಯ ಎರಡು ಜೋಡಿ ರಾಸುಗಳು ಎಲ್ಲರನ್ನೂ ಆಕರ್ಷಿಸುತ್ತಿವೆ.

ಸೋಮವಾರಪೇಟೆ ತಾಲ್ಲೂಕಿನ ಯಡೂರು ಗ್ರಾಮದೆ.ರೈತ ಎ.ಕೆ.ಉಮೇಶ್ 2 ಹಲ್ಲುಗಳು ಮೂಡಿರುವ ನಾಟಿ ಜರ್ಸಿ ಜಾತಿಯ 5 ಜೋಡಿ ರಾಸುಗಳನ್ನು ಮಾರಾಟಕಿಟ್ಟಿದ್ದಾರೆ.

ಕಬಡ್ಡಿ ; ಕುಶಾಲನಗರ ತಂಡ ಪ್ರಥಮ
ಜಯದೇವ ಜಾನುವಾರುಗಳ ಜಾತ್ರೆ ಪ್ರಯುಕ್ತ ಜಾತ್ರಾ ಮೈದಾನದಲ್ಲಿ ಆಯೋಜಿಸಿದ್ದ ಕಬಡ್ಡಿ ಟೂರ್ನಿಯಲ್ಲಿ ಕುಶಾಲನಗರದ ಜೆಬಿಎಸ್‌ಸಿ ತಂಡ ಪ್ರಥಮ ಸ್ಥಾನ ಪಡೆಯಿತು. 2 ದಿನ ನಡೆದ ತಾಲ್ಲೂಕು ಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ಕೆಳಗಳಲೆ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.
ಟೂರ್ನಿಯಲ್ಲಿ ತಾಲ್ಲೂಕಿನ 14 ತಂಡಗಳು ಭಾಗವಹಿಸಿದ್ದವು.

ಮೊದಲ ಬಹುಮಾನ ₹ 10ಸಾವಿರ ಹಾಗೂ ಟ್ರೋಫಿ, ಎರಡನೇ ಬಹುಮಾನ ₹7 ಸಾವಿರ ಹಾಗೂ ಟ್ರೋಫಿ, ಮೂರನೇ ಸ್ಥಾನ ಪಡೆದ ತೊರೆನೂರು ಗ್ರಾಮದ ಜೆ ಡಿ ಎಫ್ ಸಿ ತಂಡಕ್ಕೆ ₹4 ಸಾವಿರ ಹಾಗೂ ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ನಂಜರಾಯಪಟ್ಟಣ ತಂಡಕ್ಕೆ ₹ 3ಸಾವಿರ ನಗದು ಹಾಗೂ ಟ್ರೋಫಿಯನ್ನು ಸಮಾರೋಪ ಸಮಾರಂಭದಲ್ಲಿ  ವಿತರಿಸಲಾಯಿತು.

ಮುಖ್ಯ ಅತಿತಥಿಗಳಾಗಿ ಪಿಎಸ್ಐ ಮರಿಸ್ವಾಮಿ, ಜಾತ್ರಾ ಸಮಿತಿ ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ಸಂದೀಪ್, ದೈಹಿಕ ಶಿಕ್ಷಣ ಶಿಕ್ಷಕರಾದ ಪರಮೇಶ್ವರಪ್ಪ, ಪ್ರವೀಣ್, ಕೃಷ್ಣ, ಶಿವಣ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.