ADVERTISEMENT

ತಾಲ್ಲೂಕು ರಚನೆ: ಗಡಿಭಾಗದ ಗ್ರಾಮಸ್ಥರ ಬೆಂಬಲ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 6:50 IST
Last Updated 3 ಡಿಸೆಂಬರ್ 2017, 6:50 IST

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ರಚನೆಗೆ ಒತ್ತಾಯಿಸಿ ಸುತ್ತಮುತ್ತಲಿನ ಗ್ರಾಮದ ಜನತೆ ಶನಿವಾರ ಅಲ್ಲಿನ ಗಾಂಧಿ ಪ್ರತಿಮೆ ಬಳಿ ಸತ್ಯಾಗ್ರಹ ನಡೆಸಿದರು. ತಾಲ್ಲೂಕು ರಚನೆಗೆ ಒತ್ತಾಯಿಸಿ ಘೊಷಣೆ ಕೂಗುತ್ತಾ ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಗಾಂಧಿ ಮಂಟಪದವರೆಗೆ ಮೆರವಣಿಗೆ ನಡೆಸಿದರು. ಬಳಿಕ ಧರಣಿ ಕುಳಿತು ಗಡಿಭಾಗದ ಗ್ರಾಮಗಳ ಜನತೆಗೆ ಅನುಕೂಲವಾಗುವ ಉದ್ದೇಶದಿಂದ ಪೊನ್ನಂಪೇಟೆ ಕೇಂದ್ರವಾಗಿಸಿಕೊಂಡು ತಾಲ್ಲೂಕು ರಚನೆ ಆಗಲೇ ಬೇಕು ಎಂದು ಒತ್ತಾಯಿಸಿದರು.

ಹೋರಾಟಕ್ಕೆ ನ್ಯಾಯ ಸಿಗುವವರೆಗೂ ಸರತಿಯಂತೆ ವಿವಿಧ ಗ್ರಾಮಗಳ ಜನತೆ ಧರಣಿಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂದು ಧರಣಿ ನಿರತರು ಹೇಳಿದರು. ಗ್ರಾಮೀಣ ಪ್ರದೇಶ ರೈತರು, ಕಾರ್ಮಿಕರು ಹಾಗೂ ಬಡವರಿಗೆ ಅನುಕೂಲವಾಗಲಿ ಎಂದು ನೂತನ ತಾಲ್ಲೂಕು ರಚನೆಗೆ ಒತ್ತಾಯಿಸಲಾಗುತ್ತಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್.ಪಂಕಜಾ, ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯ ಎನ್.ಎನ್.ಅನೂಪ್, ಚೆಪ್ಪುಡೀರ ಕಾರ್ಯಪ್ಪ, ದೇವರಪುರದ ಚೆಕ್ಕೇರ ಸೋಮಯ್ಯ ಸೇರಿದಂತೆ ತಿತಿಮತಿ, ನೋಕ್ಯ, ದೇವರಪುರ, ಹೆಬ್ಬಾಲೆ, ಭದ್ರಗೋಳ, ಹರಿಹರ ಗ್ರಾಮದ ಪ್ರಗತಿಪರ ರೈತರ ಒಕ್ಕೂಟ, ತಿತಿಮತಿ ಇಗ್ಗುತಪ್ಪ ಕೊಡವ ಕೂಟದ ಸದಸ್ಯರು ಪಾಲ್ಗೊಂಡಿದ್ದರು.

ADVERTISEMENT

ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡೀರ ಪೊನ್ನಪ್ಪ, ಜಿಮ್ಮಿ ಅಣ್ಣಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ಕುಶಾಲಪ್ಪ, ಚೆಪ್ಪುಡೀರ ಸೋಮಯ್ಯ, ಕಾಳಿಮಾಡ ಮೋಟಯ್ಯ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.