ADVERTISEMENT

ದರೋಡೆಗೆ ಸಂಚು: 8 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 8:29 IST
Last Updated 7 ನವೆಂಬರ್ 2017, 8:29 IST

ಸೋಮವಾರಪೇಟೆ: ಮಡಿಕೇರಿ– ಹಾಸನದ ರಾಜ್ಯ ಹೆದ್ದಾರಿಯಲ್ಲಿ ದರೋಡೆಗೆ ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕುತ್ತಿದ್ದ ತಂಡವನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ. ತಂಡದಲ್ಲಿದ್ದ 12 ಮಂದಿ ಆರೋಪಿಗಳಲ್ಲಿ 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಸುಂಟಿಕೊಪ್ಪ ಸಮೀಪದ ಮಳ್ಳೂರು ಗ್ರಾಮದ ಕೆ.ಆರ್. ಅಬಿನಾಶ್‌ (27), ಎಂ.ಎನ್. ಚರಣ್ (24), ಟಿ.ಎಸ್.ಸಚಿನ್ (19), ಪಿ.ಸಿ. ಸುಜಿ (20), ಸೋಮವಾರಪೇಟೆ ಸಮೀಪದ ಯಡವಾರೆ ಗ್ರಾಮದ ಬಿ.ಎಚ್.ಯೋಗೇಶ್ (22), ಹೊಸತೋಟ ಗ್ರಾಮದ ಟಿ.ಆರ್. ರಾಜೇಶ್ (22), ಜಂಬೂರುಬಾಣೆ ಗ್ರಾಮದ ಕೆ. ಅನಿಲ್ (24), ಕುಶಾಲನಗರ ಬೈಚನಳ್ಳಿಯ ಎಚ್.ಕೆ. ಸಮೀರ್(28) ಬಂಧಿತರು.

ಐಗೂರು ಗ್ರಾಮದವರಾದ ಭರತ್, ದರ್ಶನ್, ಯಡವಾರೆ ಗ್ರಾಮದ ಸುದೀಪ್, ಹೊಸತೊಟ ಗ್ರಾಮದ ಶರತ್ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮಧ್ಯರಾತ್ರಿ ಪೊಲೀಸ್‌ ಗಸ್ತುಪಡೆ ಮಡಿಕೇರಿ ಮಾದಾಪುರ, ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಕೋವರ್‌ಕೊಲ್ಲಿ ಜಂಕ್ಷನ್ ಬಳಿ ತೆರಳಿದಾಗ, ಪಜೇರೋ ಮತ್ತು ಮಾರುತಿ ಆಲ್ಟೊ ವಾಹನಗಳು ನಿಂತಿರುವುದನ್ನು ಗಮನಿಸಿದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದೆ.

ADVERTISEMENT

ಬಂಧಿತರಿಂದ ವಾಹನದಲ್ಲಿದ್ದ ಒಂದು ಲಾಂಗ್, 28 ಮದ್ಯದ ಬಾಟಲ್‌ಗಳು, 5 ಕಬ್ಬಿಣದ ರಾಡು, 2 ಸ್ಟೀಲ್‌ರಾಡು, 1 ಹಾಕಿಸ್ಟಿಕ್, ಮರದ ರೀಪರ್ ತುಂಡು ಹಾಗೂ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡಿವೈಎಸ್‌ಪಿ ಸಂಪತ್ ಕುಮಾರ್, ವೃತ್ತನಿರೀಕ್ಷಕ ನಂಜುಡೇಗೌಡ, ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳ ವಿಚಾರಣೆ ನಡೆದು, ದರೋಡೆ ಸಿದ್ಧತೆಯೊಂದಿಗೆ ಹೊಂಚು ಹಾಕುತ್ತಿದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಎಂಟು ಆರೋಪಿಗಳನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜಪಡಿಸಲಾಗಿದೆ. ನ್ಯಾಯಾಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ  ಸಿಬ್ಬಂದಿ ಜಗದೀಶ್, ಮಹೇಂದ್ರ, ವಸಂತ್, ಸಂದೇಶ್, ಶಿವಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.