ADVERTISEMENT

ಭ್ರಷ್ಟಾಚಾರ ನಿರ್ಮೂಲನೆಗೆ ಸಹಕಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2016, 8:50 IST
Last Updated 23 ಡಿಸೆಂಬರ್ 2016, 8:50 IST

ವಿರಾಜಪೇಟೆ: ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೈಜೋಡಿಸಬೇಕು. ಆ ಮೂಲಕ ಭ್ರಷ್ಟಾಚಾರ ರಹಿತ ದೇಶಕಟ್ಟಲು ಪಣತೊಡಬೇಕು ಎಂದು ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಶಶಿ ಸುಬ್ರಮಣಿ ಹೇಳಿದರು.

ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡೋತ್ಸವದ ಅಂಗವಾಗಿ ಸಂಸ್ಥೆಯ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಮಾದಕ ವಸ್ತುಗಳ ದಾಸರಾಗದೆ, ಸ್ಪಷ್ಟ ಗುರಿಯೊಂದಿಗೆ ಉನ್ನತ ಸ್ಥಾನಮಾನ ಪಡೆದುಕೊಳ್ಳಬೇಕು ಎಂದರು.

ಶಾಲೆಯ ಎನ್‌ಸಿಸಿ, ಗೈಡ್ಸ್ ಸೇರಿದಂತೆ ವಿವಿಧ ತಂಡಗಳಿಂದ ಗೌರವರಕ್ಷೆ ಸ್ವೀಕರಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜೆ.ಆರ್.ಬಸವರಾಜು, ಪ್ರತಿ ವಿದ್ಯಾಸಂಸ್ಥೆಗಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಮದಲೈಮುತ್ತು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಎದುರಾಗುವ ಸೋಲು–ಗೆಲುವನ್ನು ಸಮನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.

ವಿದ್ಯಾಸಂಸ್ಥೆಯ ನೂತನ ಮೈದಾನವನ್ನು ವಿರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಸಚಿನ್ ಕುಟ್ಟಯ್ಯ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಪಿ.ಡಿ.ರತಿ, ವಿದ್ಯಾಸಂಸ್ಥೆಯ ಪಾಲಕ, ಶಿಕ್ಷಕರ ಸಂಘದ        ಉಪಾಧ್ಯಕ್ಷರಾದ ಆಶಾ ಸುಬ್ಬಯ್ಯ ಮಾತನಾಡಿದರು.

ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಾರ್ಗರೆಟ್ ಲಸ್ರಾದೋ ವರದಿ ವಾಚಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಟೆನ್ನಿ ಕುರಿಯನ್ ಸ್ವಾಗತಿಸಿದರು. ಬಾಲರಾಜ್ ವಂದಿಸಿದರು. ಉಪನ್ಯಾಸಕ ಹೇಮಂತ್, ಸೆಲೋಮಿ ಹಾಗೂ ಶಾಲಿನಿ ನಿರೂಪಿಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ತಂಡ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳ ತಂಡದಿಂದ ವಿಶೇಷ ಕವಾಯತು ನಡೆಯಿತು.

ಕಾರ್ಯಕ್ರಮದ ಬಳಿಕ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ 100 ಮೀ, 200 ಮೀ, 4X100 ರಿಲೆ, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು.

ಎಲ್‌ಕೆಜಿ ಹಾಗೂ ಯುಕೆಜಿ ಪುಟಾಣಿಗಳಿಗೂ ಸ್ಪರ್ಧೆ ನಡೆಯಿತು. ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲೆಯ ಪವರ್‌ ಸ್ಟ್ರೋಕರ್ಸ್‌ ತಂಡವು ಬೈಕ್‌ನಲ್ಲಿ ಸಾಹಸಗಳನ್ನು ಪ್ರದರ್ಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.