ADVERTISEMENT

‘ಮಂಜಿನ ನಗರಿ’ಯಲ್ಲಿ ನವರಾತ್ರಿ ರಂಗು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 7:21 IST
Last Updated 22 ಸೆಪ್ಟೆಂಬರ್ 2017, 7:21 IST
ಕರಗಗಳ ಮೆರವಣಿಗೆಯ ದೃಶ್ಯ
ಕರಗಗಳ ಮೆರವಣಿಗೆಯ ದೃಶ್ಯ   

ಮಡಿಕೇರಿ:‘ಮಂಜಿನ ನಗರಿ’ ಮಡಿಕೇರಿಯಲ್ಲಿ ಗುರುವಾರ ಸಂಜೆ ಐತಿಹಾಸಿಕ ದಸರಾ ಜನೋತ್ಸವಕ್ಕೆ ವೈಭವಯುತ ಚಾಲನೆ ದೊರೆಯಿತು. ಇಲ್ಲಿನ ಸೋಮವಾರಪೇಟೆ ರಸ್ತೆ ಪಂಪಿನಕೆರೆ ಬಳಿ ನಾಲ್ಕು ಶಕ್ತಿ ದೇವತೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಪ್ರಸಕ್ತ ಸಾಲಿನ ನವರಾತ್ರಿ ರಂಗಿಗೆ ವಿಧ್ಯುಕ್ತ ಆರಂಭ ಸಿಕ್ಕಿತು. ಎರಡು ದಿನಗಳಿಂದ ಮಳೆ ಸ್ವಲ್ಪ ಬಿಡುವು ನೀಡಿದ್ದು ದಸರಾಕ್ಕೆ ಮತ್ತಷ್ಟು ವಿಶೇಷ ಮೆರುಗು ನೀಡಿತು.

ಶಕ್ತಿ ದೇವತೆಗಳಾದ ಕಂಚಿಕಾಮಾಕ್ಷಿಯಮ್ಮ, ಕೋಟೆ ಮಾರಿಯಮ್ಮ, ಕುಂದೂರು ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ ಕರಗಕ್ಕೆ ಪೂಜೆ ಸಲ್ಲಿಸಲಾಯಿತು.
ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್‌, ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್‌ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌, ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಟಿ.ಪಿ. ರಮೇಶ್‌, ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌ ಹಾಜರಿದ್ದರು. ಅಪಾರ ಸಂಖ್ಯೆಯ ಭಕ್ತರು ಕರಗೋತ್ಸವ ಆರಂಭವನ್ನು ಪಂಪಿನಕೆರೆ ಬಳಿ ಕಣ್ತುಂಬಿಕೊಂಡರು.

ಅಲ್ಲಿಂದ ಎ.ವಿ ಶಾಲೆ, ಮಹದೇವಪೇಟೆ ಮಾರ್ಗವಾಗಿ ಕರಗೋತ್ಸವ ಪೇಟೆ ಶ್ರೀರಾಮಮಂದಿರಕ್ಕೆ ಬಂದು ತಲುಪಿತು. ರಸ್ತೆಯುದ್ದಕ್ಕೂ ಹೂವು, ಬಣ್ಣಗಳಿಂದ ರಂಗೋಲಿ ಹಾಕಿ ಶಕ್ತಿ ದೇವತೆಗಳನ್ನು ಬರ ಮಾಡಿಕೊಳ್ಳಲಾಯಿತು.ಶುಕ್ರವಾರದಿಂದ ನಾಲ್ಕು ಕರಗಗಳೂ ಮನೆಮನೆಗೆ ಭೇಟಿ ನೀಡಲಿವೆ. ಭಕ್ತರು ಕರಗ ಹೊತ್ತವರ ಕಾಲು ತೊಳೆದು ಬರಮಾಡಿಕೊಳ್ಳುತ್ತಾರೆ. ಜತೆಗೆ, ಹರಕೆ ಸಮರ್ಪಣೆ ಮಾಡಲಿದ್ದಾರೆ.

ADVERTISEMENT

ಕರಗಕ್ಕೂ ಇದೆ ಇತಿಹಾಸ: ಮಡಿಕೇರಿಯಲ್ಲಿ ಹಲವು ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿತ್ತು. ಸಾಂಕ್ರಾಮಿಕ ರೋಗದಿಂದ ಸಾವು, ನೋವು ಸಹ ಸಂಭವಿಸಿತ್ತು. ಆರ್ಥಿಕ ಸಮಸ್ಯೆ ಉಂಟಾಗಿ ಜನರು ವಲಸೆ ಹೋಗಲು ಆರಂಭಿಸಿದ್ದರು.

ಆಗ ಭಯಭೀತರಾದ ಜನರು ದೇವರ ಮೊರೆ ಹೋಗಿದ್ದರು. ದುಷ್ಟಶಕ್ತಿಗಳ ಸಂಹಾರಕ್ಕೆ ಕರಗ ಹೊರಡಿಸುವಂತೆ ಹೇಳಲಾಗಿದ್ದು, ಅಂದಿನಿಂದ ಈ ಕರಗೋತ್ಸವ ನಡೆಯುತ್ತಿದೆ ಎನ್ನುತ್ತಾರೆ ಹಿರಿಯರು. ಮತ್ತೊಂದೆಡೆ ಇಡೀ ನಗರ ನವರಾತ್ರಿ ಸಂಭ್ರಮಕ್ಕೆ ಸಜ್ಜಾಗಿದೆ. ಎಲ್ಲೆಡೆ ವಿದ್ಯುತ್‌ ಅಲಂಕಾರ ಮಾಡಲಾಗಿದೆ. ಕೆಲವು ಅಂಗಡಿಗಳ ಮೇಲೂ ವಿದ್ಯುತ್‌ ದೀಪಗಳು ಝಗಮಗಿಸುತ್ತಿವೆ. ಗಾಂಧಿ ಮೈದಾನದಲ್ಲಿ ಶುಕ್ರವಾರ ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.