ADVERTISEMENT

‘ಯುಜಿಡಿ ಕಾಮಗಾರಿ ಪೂರ್ಣಗೊಳಿಸಿ’

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 11:18 IST
Last Updated 9 ಜೂನ್ 2018, 11:18 IST

ಕುಶಾಲನಗರ: ‘ಪಟ್ಟಣದಲ್ಲಿ ₹53 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಒಳಚರಂಡಿ (ಯುಜಿಡಿ) ಕಾಮಗಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಪೂರ್ಣಗೊಳಿಸಲು ವಿಫಲವಾಗಿರುವ ಅಧಿಕಾರಿಗಳು ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದು ಗೌಡ ಯುವಕ ಸಂಘದ ನಿರ್ದೇಶಕ ಆನಂದ ಕರಂದ್ಲಾಜೆ ಆರೋಪಿಸಿದರು.

‘ಕಂದಾಯ ಅಧಿಕಾರಿಗಳ ತಪ್ಪು ಮಾಹಿತಿಯಿಂದ ಪ್ರಭಾಕರ್ ಎಂಬುವವರಿಗೆ ಸೇರಿದ ಹಾರಂಗಿ ರಸ್ತೆಯ ಸರ್ವೇ ನಂ. 5/1ರ ಜಾಗದಲ್ಲಿ ಯುಜಿಡಿ ಸಂಸ್ಕರಣ ಘಟಕಕ್ಕೆ ಜಾಗ ಗುರುತು ಮಾಡಿ ನಕ್ಷೆ ಸಿದ್ಧದಪಡಿಸಲಾಗಿದೆ. ಆದರೆ, 35 ವರ್ಷಗಳ ಹಿಂದೆ ಪ್ರಭಾಕರ್ ಇಲ್ಲಿ 3 ಎಕರೆ ಜಾಗ ಖರೀದಿಸಿದ್ದು, ಇದರೊಂದಿಗೆ ಒತ್ತುವರಿ ಜಾಗದಲ್ಲಿಯೂ ಕೃಷಿ ಮಾಡುತ್ತಿದ್ದಾರೆ. ಅವರ ಅನುಭವದಲ್ಲಿರುವ ಜಾಗವನ್ನು ಹೊರತು ಪಡಿಸಿ ಉಳಿದ ಒತ್ತುವರಿ 2.10 ಎಕರೆ ಜಾಗದಲ್ಲಿ ಯುಜಿಡಿ ಸಂಸ್ಕರಣ ಘಟಕ ಸ್ಥಾಪನೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಯುಜಿಡಿ ಕಾಮಗಾರಿ ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಬಾರದು. ಅಧಿಕಾರಿಗಳು ಸರಿಯಾಗಿ ಯೋಜನೆ ರೂಪಿಸುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಆದರೆ, ಅಧಿಕಾರಿಗಳು ತಮ್ಮ ತಪ್ಪು ಮರೆಮಾಚಲು ಸಂಸ್ಕರಣ ಘಟಕಕ್ಕೆ ಜಾಗಕ್ಕೆ ಕೊರತೆಯ ನೆಪವೊಡ್ಡುತ್ತಿದ್ದಾರೆ’ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರಭಾಕರ್ ಅವರಿಂದ 1.5 ಎಕರೆ ಜಾಗವನ್ನು ಗೌಡ ಯುವ ಸಂಘದ ಖರೀದಿಸಿದೆ. ಈ ಜಾಗದಲ್ಲಿ ಗೌಡ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲಾಗಿದೆ. ಸಂಸ್ಕರಣ ಘಟಕಕ್ಕೆ ಗೊತ್ತುಪಡಿಸಿರುವ ಜಾಗವನ್ನು ನಾವು ಒತ್ತುವರಿ ಮಾಡಿಲ್ಲ. ನಮ್ಮ ಮೇಲೆ ಬರುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.

ಈಗಾಗಲೇ ಸಂಘದ ವತಿಯಿಂದಲೇ 2.10 ಎಕರೆ ಜಾಗವನ್ನು ಸಮತಟ್ಟು ಮಾಡಿಸಿ ಯುಜಿಡಿ ಕಾಮಗಾರಿ ಕೈಗೊಳ್ಳು ಅನುಕೂಲ ಮಾಡಿಕೊಟ್ಟಿದ್ದೇವೆ. ಈ ಜಾಗದಲ್ಲಿ ಸಂಸ್ಕರಣ ಘಟಕ ಸ್ಥಾಪಿಸಿ ಯೋಜನೆಯನ್ನು ಶೀಘ್ರವಾಗಿ ಪುರ್ಣಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಪಿ.ಬಿ.ಯತೀಶ್, ಕಾರ್ಯದರ್ಶಿ ಕೊಡಗನ ಹರ್ಷ, ನಿರ್ದೇಶಕರಾದ ಪೊನ್ನಚ್ಚನ ಮೋಹನ್, ಚಿಲ್ಲನ ಗಣಿಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.