ADVERTISEMENT

ವೈದ್ಯರ ನೇಮಕಕ್ಕೆ ಒತ್ತಾಯಿಸಿ 2ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2016, 8:27 IST
Last Updated 30 ಏಪ್ರಿಲ್ 2016, 8:27 IST

ಮಡಿಕೇರಿ: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುರಿತ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ಮೇ 2ರಂದು ಸುಂಟಿಕೊಪ್ಪದಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸುಂಟಿಕೊಪ್ಪ ಗ್ರಾಮಾಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಮಂಜುನಾಥ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಂಟಿಕೊಪ್ಪದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರದ ಕಟ್ಟಡ ಇದ್ದು, ನುರಿತ ವೈದ್ಯರು ಹಾಗೂ ದಾದಿಯರ ಕೊರತೆಯಿಂದ ಇಲ್ಲಿನ ಜನರಿಗೆ ಸೂಕ್ತ ಚಿಕಿತ್ಸೆ ದೊರಕದೆ ಸಾವು ನೋವುಗಳಿಗೆ ತುತ್ತಾಗುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡರೂ ಪ್ರಥಮ ಚಿಕಿತ್ಸೆ ನೀಡಲು ಪ್ರಸ್ತುತ ಇರುವ ವೈದ್ಯರು ಅಸಮರ್ಥರಾಗಿದ್ದಾರೆ ಎಂದು ಆರೋಪಿಸಿದರು.

ಸುಂಟಿಕೊಪ್ಪ ಗ್ರಾಮಾಭಿವೃದ್ಧಿ ಹೋರಾಟ ಸಮಿತಿಯ ಸಂಚಾಲಕ ಫಿರೋಜ್‌ ಖಾನ್‌ ಮಾತನಾಡಿ, ಸುಂಟಿಕೊಪ್ಪದ ಸುತ್ತಲಿನ 26 ಹಳ್ಳಿಗಳಲ್ಲಿ ವಾಸವಿರುವ ಬಹುತೇಕ ಮಂದಿ ಕೂಲಿ ಕಾರ್ಮಿಕರಾಗಿದ್ದಾರೆ. ಇವರೆಲ್ಲರೂ ಇದೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಇದನ್ನು ಬಿಟ್ಟರೆ ದೂರದ ಮಡಿಕೇರಿ ಹಾಗೂ ಕುಶಾಲನಗರಕ್ಕೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.

ಇಲ್ಲಿನ ಆಸ್ಪತ್ರೆಗೆ ಮೂರು ನುರಿತ ವೈದ್ಯರ ಹುದ್ದೆ ಇದ್ದರೂ, ವೈದ್ಯರನ್ನು ನೇಮಿಸಿಲ್ಲ. ಅಲ್ಲದೇ ಎರಡು ಅಂಬುಲೆನ್ಸ್‌ಗಳು ಇದ್ದು, ಡ್ರೈವರ್‌ಗಳು ಇಲ್ಲದೇ ಕೆಲಸಕ್ಕೆ ಬಾರದಂತೆ ನಿಂತಿವೆ ಎಂದು ಆರೋಪಿಸಿದರು.

ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಇಲ್ಲಿನ ಆಸ್ಪತ್ರೆಗೆ ನುರಿತ ವೈದ್ಯರನ್ನು ಹಾಗೂ ದಾದಿಯರನ್ನು ನೇಮಕ ಮಾಡಬೇಕು. ಸುಂಟಿಕೊಪ್ಪದ ಭಾಗಕ್ಕೆ ಸಮುದಾಯ ಆರೋಗ್ಯ ಕೇಂದ್ರವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಮೇ 2ರಂದು ಸುಂಟಿಕೊಪ್ಪದ ಕನ್ನಡ ವೃತ್ತದಿಂದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ, ಆರೋಗ್ಯ ಕೇಂದ್ರದ ಎದುರು ಸಾರ್ವಜನಿಕ ಸಭೆ ಹಾಗೂ ಸಾಂಕೇತಿಕ ಧರಣಿ ನಡೆಸಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು.

ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೈಸೂರು–ಮಡಿಕೇರಿ ಹೆದ್ದಾರಿಯನ್ನು ಬಂದ್‌ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುಂಟಿಕೊಪ್ಪ ಗ್ರಾಮಾಭಿವೃದ್ಧಿ ಹೋರಾಟ ಸಮಿತಿಯ ಉಪಾಧ್ಯಕ್ಷ ಜಿ. ರಾಜನ್‌, ಕಾರ್ಯದರ್ಶಿ ಇಬ್ರಾಹಿಂ, ನಿರ್ದೇಶಕ ಶರೀಫ್‌ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.