ADVERTISEMENT

ಸಿಎನ್‌ಸಿಯಿಂದ ಗೊಂದಲ ಸೃಷ್ಟಿ; ಬುಡಕಟ್ಟು ಕೃಷಿಕರ ಸಂಘ ಆರೋಪ

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 6:52 IST
Last Updated 25 ಜೂನ್ 2016, 6:52 IST

ಮಡಿಕೇರಿ: ‘ದೇವಟ್‌ ಪರಂಬು’ ವಿಚಾರದಲ್ಲಿ ಸಿಎನ್‌ಸಿ ಸಂಘಟನೆ ಕೇವಲ ಒಂದು ಜನಾಂಗದ ಹೆಸರಿನಲ್ಲಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದೆ ಎಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದಿನ ಕಾಲದಲ್ಲಿ ಟಿಪ್ಪು ಕೊಡಗಿಗೆ ದಂಡೆತ್ತಿ ಬಂದಾಗ ಒಂದೇ ಜನಾಂಗದವರನ್ನು ಹತ್ಯೆ ಮಾಡಿರುತ್ತಾನೆ ಎಂದು ಹೇಳುವುದು ಸರಿಯಲ್ಲ. ಎಲ್ಲಾ ಸಮಾಜದವರು ಯುದ್ಧದಲ್ಲಿ ಮಡಿದಿದ್ದಾರೆ ಎಂದು ವಿವರಿಸಿದರು.

ಹಿಂದೆ ರಾಜ ಮಹಾರಾಜರು, ಪಾಳೆಗಾರರು, ಸಾಮಂತ ರಾಜರು ತಮ್ಮ ರಾಜ್ಯ ವಿಸ್ತರಣೆಗಾಗಿ ಬೇರೆ ರಾಜ್ಯದ ಮೇಲೆ ದಂಡೆತ್ತಿ ಯುದ್ಧ ಮಾಡುವುದು ಸರ್ವೆ ಸಾಮಾನ್ಯವಾಗಿತ್ತು. ಯುದ್ಧದಲ್ಲಿ ಸಾವಿರಾರು ಸೈನಿಕರು ಹತರಾಗುತ್ತಿ  ದ್ದುದು ನಿಜ ಸಂಗತಿಯಾಗಿದೆ.

ಆದರೆ, ಸುಮಾರು 250 ವರ್ಷಗಳ ಹಿಂದಿನ ವಿಚಾರವನ್ನು ಮುಂದಿಟ್ಟುಕೊಂಡು ಕೊಡಗಿನ ಜನಾಂಗಗಳ ನಡುವೆ ವೈಷಮ್ಯ ಉಂಟು ಮಾಡುವುದು ಶೋಭೆಯಲ್ಲ ಎಂದ ಮನವಿ ಮಾಡಿದರು.

ದೇವಟ್‌ ಪರಂಬು ಎನ್ನುವ ಸ್ಥಳವು ಯಾವುದೇ ದಾಖಲೆಗಳಲ್ಲಿ ಉಲ್ಲೇಖವಾಗಿಲ್ಲ. ಆ ಸ್ಥಳಕ್ಕೆ ಯಾವ ಜನಾಂಗದವರು ಭೇಟಿ ಕೊಡಬಾರದು. ಈ ವಿಚಾರವನ್ನು ಕೈಬಿಟ್ಟು ಎಲ್ಲಾ ಜನಾಂದವರು ನೆಮ್ಮದಿಯಿಂದ ಬಾಳುವಂತೆ ಆಗಲಿ ಎಂದು ಹೇಳಿದರು.

ಸಿಎನ್‌ಸಿ ಸಂಘಟನೆಯ ಪದಾಧಿಕಾರಿಗಳು ಅನಾವಶ್ಯಕವಾಗಿ ನಡೆಸುವ ಮಾನವ ಸರಪಳಿ ಕಾರ್ಯಕ್ರಮಗಳು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕಾರ್ಯಕ್ರಮವನ್ನು ಮಾಡಲು ಅನುಮತಿ ನೀಡಬಾರದು. ಇದಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನೆಟ್ಟಿರುವ ಕಲ್ಲುಗಳನ್ನು ಸಂಬಂಧಪಟ್ಟ ಇಲಾಖೆ ತೆರವುಗೊಳಿಸಿ, ಅಲ್ಲಿನ ಪರಿಸರವನ್ನು ಯಥಾವತ್ತಾಗಿ ಇರುವಂತೆ ಮಾಡಬೇಕು ಎಂದು ಹೇಳಿದರು.

ಹಿರಿಯರಾದ ಎ.ಕೆ. ಸುಬ್ಬಯ್ಯ ಅವರ ಮೇಲೆ ದೇವಟ್‌ ಪರಂಬು ವಿಚಾರದಲ್ಲಿ ಟೀಕೆಗಳನ್ನು ಮಾಡಿ ತೇಜೋವಧೆ ಮಾಡುವುದು ಸಮಂಜಸವಲ್ಲ. ಅವರು ಜಿಲ್ಲೆಯ ಹಲವಾರು ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದ್ದಾರೆ. ಅವರು ಯಾವುದೇ ಒಂದು ಜನಾಂಗಕ್ಕೆ ಸೀಮಿತವಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಕಾರ್ಯದರ್ಶಿ ಸೋಮಯ್ಯ, ಮಡಿವಾಳ ಸಮಾಜದ ಮುಖಂಡ ರಘು ಪೂಣಚ್ಚ, ಪ್ರಮುಖರಾದ ದಿಲೀಪ್‌ ಕುಮಾರ್‌್, ರಾಣಿ ಅಪ್ಪಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.