ADVERTISEMENT

ಸೂಳೆಕೆರೆಯ ಭಾಗೀರತಿಗೆ ‘ಬಾಗಿನ ಭಾಗ್ಯ’

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 8:36 IST
Last Updated 18 ಸೆಪ್ಟೆಂಬರ್ 2017, 8:36 IST
ಭಾರತೀನಗರ ಸಮೀಪದ ಪ್ರಸಿದ್ಧ ಸೂಳೆಕೆರೆ ತುಂಬಿದ್ದು ಶಾಸಕ ಡಿ.ಸಿ. ತಮ್ಮಣ್ಣ ಬಾಗಿನ ಅರ್ಪಿಸಿದರು
ಭಾರತೀನಗರ ಸಮೀಪದ ಪ್ರಸಿದ್ಧ ಸೂಳೆಕೆರೆ ತುಂಬಿದ್ದು ಶಾಸಕ ಡಿ.ಸಿ. ತಮ್ಮಣ್ಣ ಬಾಗಿನ ಅರ್ಪಿಸಿದರು   

ಭಾರತೀನಗರ: ಸತತ ಬರಗಾಲದಿಂದ ಬೇಸಿಗೆಯಲ್ಲಿ ಬತ್ತಿ ಹೋಗಿ ಪ್ರಾಣಿ ಪಕ್ಷಿಗಳೆಲ್ಲವೂ ಕಾಣೆಯಾಗಿದ್ದವು. ಆ ಸನ್ನಿವೇಶ ಈಗ ಮರೆಯಾಗಿ ತುಂಬಿದ ಕೆರೆ ಭಾನುವಾರ ಬಾಗಿನ ಭಾಗ್ಯ ಪಡೆಯಿತು.

ಜಿಲ್ಲೆಯ ‘ದೊಡ್ಡಕೆರೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಮೀಪದ ಸೂಳೆಕೆರೆಗೆ ಇದೀಗ ನೀರು ತುಂಬಿ ಜೀವಕಳೆ ಬಂದಿದೆ. ಹೀಗಾಗಿ ಅಚ್ಚುಕಟ್ಟು ಪ್ರದೇಶದ ರೈತರ
ಮೊಗದಲ್ಲಿ ಮಂದಹಾಸ ಮೂಡಿದೆ. ಕಾಣೆಯಾಗಿದ್ದ ಪಕ್ಷಿಗಳು ಕೆರೆಯತ್ತ ಬರಲಾರಂಭಿಸಿವೆ.

1894ರಲ್ಲಿ ನಿರ್ಮಾಣಗೊಂಡಿರುವ ಸೂಳೆಕೆರೆ 948 ಎಕರೆ ವಿಸ್ತೀರ್ಣ ಹೊಂದಿದ್ದು, 6,630 ಎಕರೆ ಪ್ರದೇಶಕ್ಕೆ ನೀರುಣಿಸುತ್ತಿದೆ. ಮದ್ದೂರು ತಾಲ್ಲೂಕಿನ ನೂರಾರು ಕೆರೆಗಳಿಗೆ ನೀರಿನ ಮೂಲ ಸೆಲೆಯಾಗಿದೆ. 25ಕ್ಕೂ ಹೆಚ್ಚು ಗ್ರಾಮಗಳು ಕೆರೆಯಿಂದ ಉಪಯೋಗ ಪಡೆದುಕೊಳ್ಳುತ್ತಿವೆ.

ADVERTISEMENT

ಕಾವೇರಿ ನೀರಾವರಿ ನಿಗಮದ ವತಿಯಿಂದ ಕೆರೆಯ ಎರಡು ತೂಬುಗಳ ದುರಸ್ತಿ ಕಾರ್ಯವೂ ಮುಗಿದಿದೆ. ಕೆರೆಗೆ ಇದೇ ಮೊದಲ ಬಾರಿಗೆ ಬಾಗಿನ ಅರ್ಪಿಸಿದ ಶಾಸಕ ಡಿ.ಸಿ. ತಮ್ಮಣ್ಣ , ‘ಕೆರೆ ಹೂಳು ತೆಗೆದು 65 ವರ್ಷಗಳ ಮೇಲಾಗಿದೆ. ರೈತರೇ ಹೂಳೆತ್ತುವ ಸಂದರ್ಭವನ್ನು ನಾನು ಸಣ್ಣ ಹುಡುಗನಾಗಿದ್ದಾಗ ನೋಡಿದ್ದೆ. ಅರ್ಧ ಭಾಗಕ್ಕಿಂತ ಹೆಚ್ಚು ಹೂಳು ತುಂಬಿದೆ. ಆದ್ದರಿಂದ ಈ ಕೆರೆಯ ಹೂಳು ತೆಗೆದು ಕಾಯಕಲ್ಪ ನೀಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂದಿನ ಬೇಸಿಗೆಯಲ್ಲಿ ಹೂಳೆತ್ತುವ ಕೆಲಸಕ್ಕೆ ಕ್ರಮ ಕೈಗೊಳ್ಳಲಾಗುವುದು. ಮಳೆರಾಯ ದಯೆ ತೋರಿಸಿದ ಹಿನ್ನೆಲೆಯಲ್ಲಿ ಕೆರೆ ತುಂಬಿಕೊಂಡು ರೈತರ ಮೊಗದಲ್ಲಿ ಹರ್ಷ ಕಂಡಿದೆ. ಮುಂದೆಯೂ ಮಳೆರಾಯನ ಆಶೀರ್ವಾದ ಸದಾ ಹೀಗೆ ಇರಲಿ. ರೈತರನ್ನ ಸಂಕಷ್ಟದಿಂದ ಪಾರು ಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.