ADVERTISEMENT

ಹತ್ತು ಮಂದಿಗೆ ಒಂದೇ ಬ್ಯಾಂಕ್ ಖಾತೆ!

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 7:32 IST
Last Updated 14 ಮಾರ್ಚ್ 2017, 7:32 IST
ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಟುಬೀಳುನಲ್ಲಿರುವ ಕೊರಗ ಕುಟುಂಬದ ಸದಸ್ಯರು.
ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಟುಬೀಳುನಲ್ಲಿರುವ ಕೊರಗ ಕುಟುಂಬದ ಸದಸ್ಯರು.   

ಸಿದ್ದಾಪುರ: ಇಂದು ಸರ್ಕಾರದಿಂದ ಯಾವುದೇ ಒಂದು ಸೌಲಭ್ಯ ಪಡೆಯ ಬೇಕಾದರೆ ಬ್ಯಾಂಕ್‌ ಖಾತೆ ಹೊಂದಿರು ವುದು ಅಗತ್ಯ. ಬಹುತೇಕ ಯೋಜನೆಗಳ ಸಹಾಯಧನವನ್ನು ನೇರವಾಗಿ ಫಲಾನು ಭವಿಗಳ ಖಾತೆಗೆ ಹಾಕಲಾಗುತ್ತದೆ. ಆದರೆ, ಈ ಒಂದು ಕಾಲೊನಿಯಲ್ಲಿ 3 ಕುಟುಂಬಗಳಲ್ಲಿ 10 ಸದಸ್ಯರಿದ್ದರೂ ಅವರಿಗೆ ಒಂದೇ ಬ್ಯಾಂಕ್‌ ಖಾತೆ ಇದೆ.

ಇದು ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಟುಬೀಳು ಕೊರಗ ಸಮುದಾಯದವರ ದುಸ್ಥಿತಿ. ಮೂರು ಕುಟುಂಬಗಳ ಪೈಕಿ ಒಬ್ಬ ಮಹಿಳೆ ಮಾತ್ರ ಬ್ಯಾಂಕ್ ಖಾತೆ ಹೊಂದಿದ್ದಾರೆ. ಮೂರು ಕುಟುಂಬಗಳಿಗೆ ತಲಾ 20 ಸೆಂಟ್ಸ್‌ ಜಮೀನಿ ಹಕ್ಕುಪತ್ರವಿದ್ದರೂ, ವಿದ್ಯುತ್ ಸಂಪರ್ಕವಿಲ್ಲ. ಪಡಿತರ ಪಡೆದುಕೊಳ್ಳಲು ಕಾರ್ಡ್ ಇದುವರೆಗೆ ದೊರಕಿಲ್ಲ. ಆದರೆ, ಮತದಾನ ಮಾಡಲು ಗುರುತಿನ ಚೀಟಿಯಿದೆ. ಇತ್ತೀಚಿಗೆ ಆಧಾರ್ ಕಾರ್ಡ್ ಮಾಡಿಸಲಾಗಿದೆ.

ಕಾಲೊನಿಯಲ್ಲಿ ಮೂರ್ನಾಲ್ಕು ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟಿದ್ದರೂ ಯಾರಿಗೂ ಸಂಧ್ಯಾ ಸುರಕ್ಷೆ ದೊರಕು ತ್ತಿಲ್ಲ. ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ. ಆನಂತರ ತಿರುಗಿಯೂ ನೊಡುತ್ತಿಲ್ಲ ಎಂದು ಬಸವ ಕೊರಗ ‘ಪ್ರಜಾವಾಣಿ’ ಯೊಂದಿಗೆ ಅಳಲು ತೋಡಿಕೊಂಡರು.

ADVERTISEMENT

ನಮಗೆ ಕಾಯಂ ಎನ್ನುವ ಉದ್ಯೋ ಗವಿಲ್ಲ. ಬ್ಯಾಂಕ್ ಖಾತೆ ಹೊಂದಿರುವ ಮಹಿಳೆ ಮಾತ್ರ ಗೇರುಬೀಜ ಒಡೆದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಖಾತೆಗೆ ವೇತನ ಬಂದಾಗ ಬೇರೊಬ್ಬರ ಸಹಾಯ ಪಡೆದು ಎಟಿಎಂನಿಂದ ಹಣ ಪಡೆಯುತ್ತಾರೆ. ಉಳಿದವರು ಅಡಿಕೆ ಮರದ ಹಾಳೆ ಕೊಯ್ದು ಮಂಡಾಳೆ (ಮುಟ್ಟಾಳೆ)ಯನ್ನಾಗಿಸಿ ಅದನ್ನು ಮಾರಾಟ ಮಾಡಿ ಹಣ ಗಳಿಸುತ್ತೇವೆ. ಕಾಡಿನಲ್ಲಿ ಸಿಗುವ ಬೀಳು ಉಪಯೋಗಿಸಿ ಸುಂದರ ಬುಟ್ಟಿಗಳನ್ನಾಗಿಸಿಯೂ ಹಣ ಸಂಪಾದಿಸುತ್ತೇವೆ. ಮುಟ್ಟಾಳೆ ಅಥವಾ ಬುಟ್ಟಿಗೆ ನಿರ್ದಿಷ್ಟ ಬೆಲೆ ನಿಗದಿ ಪಡಿಸದೆ ಅವರು ನೀಡಿದ ಹಣ ಪಡೆದು ತಮ್ಮ ದೈನಂದಿನ ಖರ್ಚಿಗೆ ಬಳಸುತ್ತೇವೆ. ಅದು ಪ್ರತಿನಿತ್ಯದ ಜೀವನ ನಿರ್ವಹಣೆಗೆ ಹಣ ಸಾಕಾಗುವುದರಿಂದ ಬ್ಯಾಂಕ್‌ಗೆ ಅಲೆದಾಡುವ ಪ್ರಮೇಯ ಬರುವುದಿಲ್ಲ ಎನ್ನುವುದು ಅವರ ಅಂಬೋಣ. 

ಕಾಲೊನಿಯಲ್ಲಿ ಐದು ಮಂದಿ ಮಕ್ಕಳಿದ್ದರೂ ಶಾಲೆಗೆ ತೆರಳುವವರು ಇಬ್ಬರು ಮಾತ್ರ. ಇಬ್ಬರು ಮಕ್ಕಳು ಸಹ ಕಾಯಂ ಆಗಿ ಶಾಲೆಗೆ ತೆರಳುವುದಿಲ್ಲ ಉಳಿದ ಮೂವರು ಹೆಚ್ಚೆಂದರೆ ಐದನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ ಗೇರುಬೀಜ ಒಡೆಯಲು ಸಹಕರಿಸುತ್ತಿ ದ್ದಾರೆ. ದಿನನಿತ್ಯದ ಜೀವನ ನಿರ್ವಹಣೆ ಹೇಗೆ ಎನ್ನುವ ಕುರಿತು ಚಿಂತಿಸಿ ಅದರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಮನೆ ಸಮೀಪದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ಗೆ ವಾರಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ಟ್ಯಾಂಕ್‌ನಲ್ಲಿ ನೀರು ಖಾಲಿಯಾದಾಗ ಕರೆ ಮಾಡುತ್ತೇವೆ. ಸರ್ಕಾರಿ ಸವಲತ್ತು ಹೇಗೆ ಪಡೆಯುವುದು ಎನ್ನುವುದೇ ತಿಳಿದಿಲ್ಲ ಎನ್ನುತ್ತಾರೆ ಬಸವ ಕೊರಗ.

**

ಗಂಟುಬೀಳು ಕೊರಗ ಸಮುದಾಯದವರ ಜನಧನ ಖಾತೆ ತೆರೆಯುವುದು, ವಿದ್ಯುತ್ ಸಂಪರ್ಕ, ಪಡಿತರ ಕಾರ್ಡ್‌ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.
-ಹರೀಶ್ ಗಾಂವ್ಕರ್, ಹೆಚ್ಚುವರಿ ಯೋಜನಾ ಸಮನ್ವಯಾಧಿಕಾರಿ, ಐಟಿಡಿಪಿ ಉಡುಪಿ

ಚುನಾವಣೆ ಬಂದಾಗ ನಮ್ಮ ಸಮುದಾಯವಿದೆ ಎನ್ನುವುದು ಜನಪ್ರತಿನಿಧಿಗಳಿಗೆ ನೆನಪಾಗುತ್ತದೆ. ನಾವು ಮೂಲಸೌಲಭ್ಯವಿಲ್ಲದೆ ಪರದಾಡುತ್ತಿದ್ದೇವೆ.
-ಬಸವ ಕೊರಗ, ಗಂಟುಬೀಳು ನಿವಾಸಿ

***

–ಸಂದೇಶ್‌ ಶೆಟ್ಟಿ ಆರ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.